ಹತ್ರಾಸ್‌ ಘಟನೆಗೆ ನೀವು ದನಿಯೆತ್ತದಿದ್ದರೆ, ದೇಶಕ್ಕೆ ಬಹುದೊಡ್ಡ ಅಪಕಾರ ಮಾಡಿದಂತೆ: ನಟಿ ರಮ್ಯಾ

ಹತ್ರಾಸ್ ದುರ್ಘಟನೆ ಖಂಡಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಸಾವಿರಾರು ಪ್ರತಿಭಟನೆಗಳು ನಡೆಯುತ್ತಿವೆ. ಈ ಬಗ್ಗೆ ಮಾತನಾಡಿರುವ ನಟಿ, ಮಾಜಿ ಸಂಸದೆ ರಮ್ಯಾ, ಸಂತ್ರಸ್ತೆಯ ಕುಟುಂಬಕ್ಕೆ ನಿಮ್ಮ ಅಗತ್ಯವಿದೆ; ನೀವು ಧ್ವನಿಯೆತ್ತಿ ಮಾತನಾಡಬೇಕಾದ ಅಗತ್ಯವಿದೆ ಎಂದುದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ರಮ್ಯಾ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ನಾನು ನಿಮ್ಮೆಲ್ಲರ ಗಮನವನ್ನು ಹತ್ರಾಸ್ ಅತ್ಯಾಚಾರ ಪ್ರಕರಣದತ್ತ ಸೆಳೆಯಲು ಬಯಸುತ್ತೇನೆ. ನನ್ನಂತೆಯೇ ನೀವೂ ನಿಮ್ಮ ಮನೆಗಳಲ್ಲಿ ಇಂಟರ್ನೆಟ್ ಸಂದೇಶಗಳನ್ನು ನೋಡುತ್ತಿರುತ್ತೀರಿ. ಒಂದು ಕುಟುಂಬವನ್ನು ಅವರ ಮನೆಯಲ್ಲೇ ಕೂಡಿಹಾಕಿ, ಅವರ ಮಗಳ ಮೃತದೇಹವನ್ನು ಪೊಲೀಸರು ಸುಟ್ಟು ಹಾಕಿರುವ ಉತ್ತರ ಪ್ರದೇಶ ಸರಕಾರದ ನಡೆ ಅವರನ್ನು ತೀವ್ರವಾದ ನೋವಿಗೆ ಒಳಪಡಿಸಿದೆ.

ಅವರು ಮಾಡಿರುವ ಅಪರಾಧ? ಅವರ ಮನೆಮಗಳನ್ನು ಅತ್ಯಾಚಾರ ಮಾಡಲಾಗಿದೆ. ಆ ದಲಿತ ಬಾಲಕಿಯನ್ನು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮೇಲ್ಜಾತಿಯ ನಾಲ್ವರು ಪುರುಷರು ಬರ್ಬರವಾಗಿ ಅತ್ಯಾಚಾರ ಮಾಡಿದ್ದಾರೆ. ಆ ಮಹಿಳೆ ಕೆಲವು ದಿನಗಳ ಬಳಿಕ ಮೃತಪಟ್ಟಿದ್ದಾರೆ. ಆಕೆಯ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆ ಕುಟುಂಬಕ್ಕೆ ಅನುಮತಿ ನಿರಾಕರಿಸಲಾಗಿದೆ. ಪೊಲೀಸರು ಕುಟುಂಬದ ಅನುಮತಿ ಪಡೆಯದೆಯೇ, ಅಥವಾ ಅವರಿಗೆ ಗೊತ್ತಿಲ್ಲದೇ ರಾತ್ರಿ 2.30ರ ಹೊತ್ತಿಗೆ ಶವವನ್ನು ಸುಟ್ಟುಹಾಕಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲಾಧಿಕಾರಿಯೇ ಖಳನಾಯಕ: ಆತ ಮಾಡಿದ್ದೇನು ಗೊತ್ತೇ?

ಇಷ್ಟು ಕ್ರೌರ್ಯ ಸಾಕಾಗಲಿಲ್ಲವೋ ಎಂಬಂತೆ ಆಕೆಯ ಕುಟುಂಬವನ್ನು ಮನೆಯೊಳಗೆ ಕೂಡಿಹಾಕಿ, ಅವರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಳ್ಳಲಾಗಿದೆ. ಮಾಧ್ಯಮದವರಿಗಾಗಲೀ, ಪ್ರತಿಪಕ್ಷ ನಾಯಕರಿಗಾಗಲೀ ಅವರನ್ನು ಭೇಟಿಮಾಡಲು ಬಿಡಲಾಗುತ್ತಿಲ್ಲ. ಪೊಲೀಸರು ಅವರ ಮನೆಯ ಪ್ರವೇಶ, ಊರಿನ ಪ್ರವೇಶ ಮತ್ತು ಹೆದ್ದಾರಿಯಲ್ಲಿ ತಡೆಬೇಲಿ ಹಾಕಿದ್ದಾರೆ.

ಈ ಕುಟುಂಬವನ್ನು ಭೇಟಿ ಮಾಡಲು ಯತ್ನಿಸಿದ ನಾಯಕರನ್ನು ಬಂಧಿಸಲಾಗಿದೆ, ಥಳಿಸಲಾಗಿದೆ ಮತ್ತು ಅವರ ವಿರುದ್ಧ ಕೇಸು ಜಡಿಯಲಾಗಿದೆ. ಆ ಕುಟುಂಬ ಮಾಡಿರುವ ತಪ್ಪಾದರೂ ಏನು? ತಮ್ಮ ಮನೆಮಗಳನ್ನು ಕಳೆದುಕೊಂಡಿರುವುದೇ ಸಾಕಷ್ಟು ನೋವಿನ ಸಂಗತಿ ಅಲ್ಲವೋ ಎಂಬಂತೆ ಏಕೆ ಅವರಿಗೆ ಕಿರುಕುಳ ನೀಡಿ ಇನ್ನಷ್ಟು ಪೀಡಿಸಲಾಗುತ್ತಿದೆ? ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ.

ಯಾವ ನಿಯಮಗಳ ಪುಸ್ತಕವನ್ನು ಉತ್ತರ ಪ್ರದೇಶ ಸರಕಾರ ಅನುಸರಿಸುತ್ತಿದೆ? ವೈಫಲ್ಯವನ್ನು ಮರೆಮಾಚುವ / ಗಮನ ಬೇರೆಡೆ ಸೆಳೆಯುವ ಮೋದಿಯ ನಿಯಮ ಪುಸ್ತಕವನ್ನೆ?

I want to draw your attention to the #HathrasRape incident- While you are scrolling your feed in the comfort of your…

Posted by Divya Spandana/Ramya on Saturday, October 3, 2020

ಇದೆಲ್ಲಕ್ಕಿಂತ ಮೇಲಾಗಿ, ಪೊಲೀಸರು ಇವೆಲ್ಲವನ್ನೂ ನಿರಾಕರಿಸುತ್ತಿದ್ದಾರೆ ಮಾತ್ರವಲ್ಲ; ಅತ್ಯಾಚಾರವನ್ನೇ ನಿರಾಕರಿಸುತ್ತಿದ್ದಾರೆ. ಸಂತ್ರಸ್ತ ಮಹಿಳೆ ಸ್ವತಃ ತನ್ನನ್ನು ಅತ್ಯಾಚಾರ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾರೆ. ಪೊಲೀಸರೇ ಶವವನ್ನು ಸುಟ್ಟುಹಾಕುತ್ತಿರುವ ವಿಡಿಯೋಗಳಿವೆ. ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಕೆಯ ಕುಟುಂಬದವರು ಅಂಗಲಾಚುತ್ತಿರುವ ವಿಡಿಯೋಗಳಿವೆ. ಈ ಕುಟುಂಬದವರನ್ನು ಅವರ ಮನೆಯಲ್ಲಿಯೇ ಕೂಡಿಹಾಕಿರುವ ವಿಡಿಯೋಗಳಿವೆ.

ಅವರು ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ? ಇದೊಂದು ಪ್ರಜಾಪ್ರಭುತ್ವ ಎಂಬಂತೆ ನಿಮಗೆ ಅನಿಸುತ್ತಿದೆಯೆ? ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ನಮ್ಮ ಪೂರ್ವಿಕ ತಂದೆ ತಾಯಿಯರು ಕಲ್ಪಿಸಿಕೊಂಡ ದೇಶ ಇದು ಅಲ್ಲವೇ ಅಲ್ಲ. ನಮ್ಮ ದೇಶದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

ಆ ಕುಟುಂಬಕ್ಕೆ ನಿಮ್ಮ ಅಗತ್ಯವಿದೆ; ನೀವು ಧ್ವನಿಯೆತ್ತಿ ಮಾತನಾಡಬೇಕಾದ ಅಗತ್ಯವಿದೆ. ಈ ಕುರಿತು ಧ್ವನಿಯೆತ್ತದಿರುವುದರ ಮೂಲಕ ನೀವು ದೇಶಕ್ಕೆ ಬಹುದೊಡ್ಡ ಅಪಕಾರ ಮಾಡಿದಂತಾದೀತು.


ಇದನ್ನೂ ಓದಿ: ಮೊಸರಲ್ಲಿ ಕಲ್ಲಿರುವುದು ಹಗಲಿನಷ್ಟೇ ಸ್ಪಷ್ಟ: ಕೇಂದ್ರದ ವಿರುದ್ಧ ರಮ್ಯಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights