ಯತ್ನಾಳ್ ಆಕ್ರೋಶ: ಕೋಪವನ್ನು ಹೊರಹಾಕುವುದಾ? ಬಿಎಸ್ವೈಗೆ ಸೆಡ್ಡು ಹೊಡೆದು ತನ್ನ ಉದ್ದೇಶವನ್ನು ಮುಂದಿಡುವುದಾ?
ಸಿಎಂ ಯಡಿಯೂರಪ್ಪನವರು ವಿಜಯಪುರ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರ ನಿಧಿ ಬಿಡುಗಡೆ ಮಾಡಿಲ್ಲ. ಬಿಡುಗಡೆಯಾಗಿದ್ದ ಅನುದಾನವನ್ನೂ ಹಿಂಪಡೆದಿದ್ದಾರೆ. ಎಲ್ಲಾ ಅನುದಾನವನ್ನು ಶಿವಮೊಗ್ಗಗೆ ಕೊಂಡೊಯ್ಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಅಲ್ಲದೆ, ಬಿಜೆಪಿ ಹೈಕಮಾಂಡ್ಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಯಡಿಯೂರಪ್ಪನವರ ಸಿಎಂ ಖುರ್ಚಿ ಜಾಸ್ತಿ ದಿನ ಉಳಿಯುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಅನುದಾನ ಸಿಗದ ಕಾರಣ ಯತ್ನಾಳ್ ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ ಒಳಗಿನ ಕಾರಣವೇ ಬೇರೆಯೇ ಇದೆ ಎಂದು ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಿಂದುತ್ವ ಪ್ರತಿಪಾದನೆ ಬಗ್ಗೆ ಪ್ರಬಲ ನಿಲುವು ಹೊಂದಿರುವ ಯತ್ನಾಳ್ ಪ್ರಮುಖ ಲಿಂಗಾಯತ ಮುಖಂಡರಾಗಿದ್ದು ರಾಜ್ಯ ಸರ್ಕಾರದಲ್ಲಿ ತಮಗೆ ಪ್ರಮುಖ ಸ್ಥಾನ ದೊರೆಯದ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ. ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕನೆಂದು ತಮ್ಮನ್ನು ಯತ್ನಾಳ್ ಬಿಂಬಿಸಿಕೊಳ್ಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಯತ್ನಾಳ್, ಸಿಎಂ ಯಡಿಯುರಪ್ಪ ಸರ್ಕಾರದಲ್ಲಿ ಯಾವುದೇ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಸಿಎಂ ವಿರುದ್ಧ ಪದೇ ಪದೇ ಆಕ್ರೋಶ ವ್ಯಕ್ತ ಪಡಿಸುತ್ತಲೇ ಇದ್ದಾರೆ. ಈ ವರ್ಷದ ಆರಂಭದಲ್ಲೂ ಕೂಡ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ನಿಧಿ ಹಣ ಬಿಡುಗಡೆ ಮಾಡಿಲ್ಲ ಎಂದು ಸಿಎಂ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಜೊತೆಗೆ ಕೇಂದ್ರ ಸಚಿವರ ವಿರುದ್ಧವು ಹರಿಹಾಯ್ದಿದ್ದರು.
ಯತ್ನಾಳ್, ಉಮೇಶ್ ಕತ್ತಿ ಮತ್ತು ಮುರುಗೇಶ್ ನಿರಾಣಿ ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ನಾಯಕರಾಗಿದ್ದಾರೆ. ಚುನಾವಣೆಗಳನ್ನು ತಮ್ಮದೆ ಸಾಮರ್ಥ್ಯದಿಂದ ಗೆಲ್ಲುವ ಶಕ್ತಿ ಹೊಂದಿದ್ದೇವೆ ಎಂಬ ಭಾವನೆ ಹೊಂದಿರುವ ಅವರು, ಸರ್ಕಾರದ ಭಾಗವಾಗಿರಬೇಕು ಎಂದು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಆದರೆ, ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಯತ್ನಾಳ್ ಹೇಳುತ್ತಿದ್ದಾರೆ. ಆದರೆ ಪಕ್ಷದ ಮೂಲಗಳ ಪ್ರಕಾರ, ಯತ್ನಾಳ್ ಗೆ ಸಂಪುಟದಲ್ಲಿ ಸ್ಥಾನ ನೀಡದ ಕಾರಣ ಮತ್ತು ಕೆಲವು ಲಿಂಗಾಯತ ನಾಯಕರು ಸಿಎಂ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ಯತ್ನಾಳ್ ಕೆಂಗಣ್ಣಿಗೆ ಕಾರಣವಾಗಿದೆ.
ಅಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದವರಿಗೆ ಮಣೆ ಹಾಕುತ್ತಿರುವುದು ಜೊತೆಗೆ 2018ರ ಚುನಾವಣೆಯಲ್ಲಿ ಸೋತವರಿಗೆ ಸ್ಥಾನ ನೀಡಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದನ್ನು ಸಹಿಸಲಾಗುತ್ತಿಲ್ಲ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ ನಿಷ್ಠಾವಂತರನ್ನು ಹೊರಗಿಟ್ಟಿದ್ದಾರೆ ಎಂಬುದು ಇವರ ಆರೋಪವಾಗಿದ್ದು, ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಹಿರಿಯ ನಾಯಕರಾಗಿದ್ದರೂ ಸರ್ಕಾರದಲ್ಲಿ ಪ್ರಾಮುಖ್ಯತೆ ನೀಡದಿರುವುದು ಮತ್ತು ಸ್ವತಂತ್ರ್ಯವಾಗಿ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವವರನ್ನು ಕಡೆಗಣಿಸಿರುವು ಕೆಲವು ಹಿರಿಯರ ಕೆಂಗಣ್ಣಿಗೆ ಕಾರಣವಾಗಿದೆ. ಆದರೆ ಸರ್ಕಾರ ಅಸ್ಥಿಸ್ವಕ್ಕೆ ಬರಲು ಕಾರಣರಾದವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಕರ್ತವ್ಯವಾಗಿದೆ ಎಂದು ಕೆಲ ಬಿಜೆಪಿ ನಾಯಕರು ಹೇಳಿದ್ದಾರೆ.
ಇದನ್ನು ಓದಿ: ಯಡಿಯೂರಪ್ಪ ಹೈಕಮಾಂಡ್ಗೂ ಸಾಕಾಗಿದ್ದಾರೆ, ಬಿಎಸ್ವೈ ಖುರ್ಚಿ ಉಳಿಯುವುದಿಲ್ಲ: ಬಿಜೆಪಿ ಶಾಸಕ ಯತ್ನಾಳ್

