ಕಮಲ್‌ನಾಥ್‌ರನ್ನು ಸ್ಟಾರ್ ಪ್ರಚಾರಕರಿಂದ ಕೈಬಿಟ್ಟ ಚುನಾವಣಾ ಆಯೋಗ; ತರಾಟೆಗೆ ತೆಗೆದುಕೊಂಡ ಸುಪ್ರೀಂ

ಮಧ್ಯ ಪ್ರದೇಶದಲ್ಲಿ 28 ಕ್ಷೇತ್ರಗಳಿಗೆ ನಾಳೆ (ನ.03) ಉಪಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರದಲ್ಲಿ ಎದುರಾಳಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌ ಅವರನ್ನು ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಚುನಾವಣಾ ಆಯೋಗ ಕೈಬಿಟ್ಟಿದ್ದು, ಈ ಅಧಿಕಾರವನ್ನು ಆಯೋಗಕ್ಕೆ ನೀಡಿದವರು ಯಾರು ಎಂದು ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ.

ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರನ್ನು ನೇಮಿಸುವುದು ಎಲ್ಲಾ ಪಕ್ಷಗಳ ಹಕ್ಕು. ಪಕ್ಷದ ತೀರ್ಮಾನಗಳಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡುವ ಹಕ್ಕಿಲ್ಲ ಎಂದು ಸಿಜೆಐ ಎಸ್‌.ಎಸ್ ಬೋಬ್ಡೆ ಅವರು ಆಯೋಗದ ನಿರ್ಧಾರಕ್ಕೆ ತಡೆನೀಡಿದ್ದಾರೆ.

ಹಲವು ಎಚ್ಚರಿಕೆಗಳ ಹೊರತಾಗಿಯೂ ಮಾದರಿ ನೀತಿ ಸಂಹಿತೆಯನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಆಯೋಗ ಈ ಕ್ರಮ ಕೈಗೊಂಡಿತ್ತು. ರಾಜಕೀಯ ಪಕ್ಷದ ಮುಖಂಡರಾಗಿದ್ದುಕೊಂಡು ಕಮಲ್ ನಾಥ್‌ರವರು ನೈತಿಕ ಮತ್ತು ಘನತೆಯ ನಡವಳಿಕೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗ ದೂರಿತ್ತು.

ಆಯೋಗದ ಈ ನಿರ್ಧಾರದಿಂದಾಗಿ ಈಗ ಯಾವುದೇ ಅಭ್ಯರ್ಥಿಯ ಪರವಾಗಿ ಕಮಲ್‌ ನಾಥ್ ಪ್ರಚಾರದಲ್ಲಿ ಭಾಗಿಯಾದರೆ ಆ ಕಾರ್ಯಕ್ರಮದ ಪೂರ್ತಿ ಖರ್ಚು ಅಭ್ಯರ್ಥಿಯ ಮಿತಿಗೆ ದಾಖಲಾಗುತ್ತದೆ. ಸ್ಟಾರ್ ಪ್ರಚಾರಕರಾಗಿ ಭಾಗಿಯಾದರೆ ಆ ಖರ್ಚು ಪಕ್ಷದ ಖಾತೆಗೆ ದಾಖಲಾಗುತ್ತದೆ. ಪಕ್ಷಕ್ಕೆ ಇಂತಿಷ್ಟೇ ಖರ್ಚು ಮಾಡಬೇಕೆಂಬ ಮಿತಿ ಇರುವುದಿಲ್ಲ.

ಈ ಕುರಿತು ಕೆಂಡಾಮಂಡಲವಾಗಿರುವ ಕಮಲ್‌ನಾಥ್ ಆಯೋಗದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರನ್ನು ನೇಮಿಸುವುದು ಎಲ್ಲಾ ಪಕ್ಷಗಳ ಹಕ್ಕು. ಪಕ್ಷದ ತೀರ್ಮಾನಗಳಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡುವಂತಿಲ್ಲ. ಆಯೋಗದ ನಿರ್ಧಾರವು ಅಭಿವ್ಯಕ್ತಿ ಮತ್ತು ಚಳವಳಿಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು.


ಇದನ್ನೂ ಓದಿ: ನಾನು ನಾಯಿ, ಸಾರ್ವಜನಿಕರೇ ನನ್ನ ಮಾಲೀಕರು: ಜ್ಯೋತಿರಾಧಿತ್ಯ ಸಿಂಧಿಯಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights