ಆರ್.ಆರ್.ನಗರ, ಶಿರಾ ಕ್ಷೇತ್ರದಲ್ಲಿಂದು ಉಪಚುನಾವಣೆ ಮತದಾನ..
ಬಹುನಿರೀಕ್ಷಿತ ಆರ್.ಆರ್.ನಗರ, ಶಿರಾ ಕ್ಷೇತ್ರಗಳ ಉಪಚುನಾವಣೆ ಮತದಾನ ಇಂದು ಆರಂಭವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಶುರುವಾಗಿದ್ದು ಕೊರೊನಾ ಮಧ್ಯೆ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾ ಆತಂಕದಲ್ಲಿ ಜನ ಮತಕಟ್ಟೆಗಳಿಗೆ ಬಂದು ತಮ್ಮ ಮತ ಚಲಾಯಿಸುತ್ತಿದ್ದಾರೆ.
ಆರ್.ಆರ್.ನಗರದಲ್ಲಿ ಬಿಜೆಪಿಯಿಂದ ಮುನಿರತ್ನ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಕಾಂಗ್ರೆಸ್ ನಿಂದ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರು ಸ್ಪರ್ಧಿಸುತ್ತಿದ್ದಾರೆ. ಇನ್ನೂ ಜೆಡಿಎಸ್ ನಿಂದ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ನಡೆಯುತ್ತಿದೆ. ಇನ್ನೂ ತುಮಕೂರು ಜಿಲ್ಲಾ ಶಿರಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ಸ್ಪರ್ಧೆ ನಡೆಯಲಿದೆ.
ಮತಕಟ್ಟೆಯಲ್ಲಿ ಪೊಲೀಸ್ ಬಿಗಿಬದ್ರತೆ ಏರ್ಪಡಿಸಲಾಗಿದೆ. ಕೊರೊನಾ ಸೋಂಕಿತರಿಗೆ 5 ಗಂಟೆ ನಂತರ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಶಿರಾ ಕ್ಚೇತ್ರದಲ್ಲಿ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿದ್ದು, 330 ಮತಗಟ್ಟೆಗಳಿವೆ. ಇದರಲ್ಲಿ ಪುರುಷರು 1,10,281 ಮಂದಿ ಇದ್ದರೆ, ಮಹಿಳಾ ಮತದಾರರು 1,5,434 ಮಂದಿ ಇದ್ದು, ಒಟ್ಟು ಮತದಾರರು 2,15,725 ಮಂದಿ ಇದ್ದಾರೆ. ಆರ್.ಆರ್.ನಗರ ಕ್ಷೇತ್ರದಲ್ಲಿ 4ಲಕ್ಷ 62 ಸಾವಿರ ಜನ ಮತದಾರರು ಇದ್ದಾರೆ.
ಸಂಜೆ 6 ಗಂಟೆಗೆ ಮತದಾನದ ಸಮಯ ಮುಗಿಯಲಿದ್ದು ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ. 2018ರ ಚುನಾವಣೆಯಲ್ಲಿ ಆರ್.ಆರ್ ನಗರದಲ್ಲಿ ಕಾಂಗ್ರೆಸ್, ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದಿದ್ದರು. ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು ಉಪಚುನಾವಣೆಯನ್ನು ಪಕ್ಷ ಪ್ರತಿಷ್ಠೆಯಾಗಿ ಪರಿಗಣಿಸಿದೆ.