ಯೋಗೇಶ್ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಿಬಿಐ ವಶ…!
2016ರಲ್ಲಿ ಜೂನ್ 15ರಂದು ಧಾರವಾಡದಲ್ಲಿ ನಡೆದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಇಂದು ಗುರುವಾರ ಬೆಳಗ್ಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಧಾರವಾಡದ ಬರಾಕೂಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡದಿಂದ ಈ ಕಾರ್ಯಚರಣೆ ನಡೆಯಿತು. ಈಗ ಅವರನ್ನು ಧಾರವಾಡದ ಉಪನಗರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಧಾರವಾಡದ ಸಪ್ತಾಪುರದಲ್ಲಿ ಯೋಗೇಶ್ ಗೌಡ ಮಾಲೀಕತ್ವದ ಜಿಮ್ ಬಳಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಸೆಪ್ಟೆಂಬರ್ 2019ರಲ್ಲಿ ಸಿಬಿಐ ಹತ್ಯೆ ಪ್ರಕರಣದ ವಿಚಾರಣೆ ಆರಂಭಿಸಿತ್ತು. ಇದೀಗ ವಿನಯ್ ಕುಲಕರ್ಣಿಯವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ವಿಚಾರಣೆಗೆ ಹಾಜರಾದ ವಿನಯ್ ಕುಲಕರ್ಣಿ ಬಳಿಕ ಮಾದ್ಯಮದ ಮುಂದೆ ಮಾತನಾಡಿ ‘ನನ್ನ ವಿಚಾರಣೆಯಲ್ಲಿ ವಿರೋಧ ಪಕ್ಷದ ಕೈವಾಡವಿದೆ’ ಎಂದಿದ್ದಾರೆ.