ಮಸ್ಕಿ: BJPಯಲ್ಲಿ ರಾಜಕೀಯ ಭವಿಷ್ಯವಿಲ್ಲ; ಕಾಂಗ್ರೆಸ್ ಸೇರಿದ ಬಸನಗೌಡ ತುರವಿಹಾಳ
ಮಸ್ಕಿಯ ಬಿಜೆಪಿ ನಾಯಕರಾಗಿದ್ದ ಬಸನಗೌಡ ತುರ್ವಿಹಾಳ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಪ್ರತಾಪಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇದರಿಂದಾಗಿ ತಮ್ಮ ಸ್ಥಾನಮಾನ ಅಂತತ್ರ ಸ್ಥಿತಿಗೆ ತಲುಪಿದ್ದು, ರಾಜಕೀಯ ಭವಿಷ್ಯ ಉಳಿಸಿಕೊಳ್ಳುವುದಕ್ಕಾಗಿ ಬಸನಗೌಡ ತುರವಿಹಾಳ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎನ್ನಲಾಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರತಾಪಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಸನಗೌಡ ತುರವಿಹಾಳ 213 ಮತಗಳಿಂದ ಸೋಲನ್ನಪ್ಪಿದ್ದರು. ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾದ ಪ್ರತಾಪಗೌಡ, ಮೈತ್ರಿ ಸರ್ಕಾರವನ್ನು ಉರುಳಿಸಿ, ಬಿಜೆಪಿ ಅಧಿಕಾರಕ್ಕೇರಲು ಸಹಕರಿಸಿದ್ದರು. ಬಿಜೆಪಿ ಸರ್ಕಾರ ರಚನೆಯಾದ ನಂತರ ಪ್ರತಾಪಗೌಡ ಬಿಜೆಪಿ ಸೇರಿದ್ದಾರೆ.
ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸೇರಿರುವ ಕಾಂಗ್ರೆಸ್-ಜೆಡಿಎಸ್‌ನ ವಲಸಿಗರಿಗೆ ಬಿಜೆಪಿ ಮಣೆ ಹಾಕುತ್ತಿದ್ದು, ಇನ್ನು ಮಸ್ಕಿಯಲ್ಲಿ ಬಿಜೆಪಿಯಲ್ಲಿ ತಮಗೆ ಭವಿಷ್ಯವಿಲ್ಲ ಎಂಬುದನ್ನು ಬಸನಗೌಡ ತುರವಿಹಾಳ ಕಂಡುಕೊಂಡಿದ್ದಾರೆ. ಈ ಕಾರಣದಿಂದಾಗಿ ಅವರು ಬಿಜೆಪಿ ತೊರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜಿನಾಮೆ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.
2018 ರ ಚುನಾವಣೆಯಲ್ಲಿ ಪ್ರತಾಪಗೌಡ ಅಕ್ರಮ ಮತದಾನ ಮಾಡಿಸಿದ್ದಾರೆ ಎಂದು ಬಸನಗೌಡ ತುರ್ವಿಹಾಳ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದಾಗಿ ಮಸ್ಕಿಯಲ್ಲಿ ಚುನಾವಣೆ ಸಿದ್ದತೆ ನಡೆದಿದೆ. ಉಪಚುನಾವಣೆಯಲ್ಲಿ ಪ್ರತಾಪಗೌಡರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಅಲ್ಲದೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ಪ್ರತಾಪಗೌಡರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಬಿಜೆಪಿಯಲ್ಲಿಯೇ ಇದ್ದರೆ, ಪ್ರತಾಪಗೌಡರಿಗೆ ಹಿಂಬಾಲಕರಾಗಿಯೇ ಇರಬೇಕಾಗುತ್ತದೆ ಎಂದು ಬಸನಗೌಡ ತುರವಿಹಾಳ ಚಿಂತಿಸಿದ್ದು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರಿದ್ದಾರೆ.
ಮುಂದಿನ ಉಪಚುನಾವಣೆಯಲ್ಲಿಯೂ ಬಸನಗೌಡ ತುರವಿಹಾಳ ಮತ್ತು ಪ್ರತಾಪಗೌಡ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷಗಳು ಮಾತ್ರ ಅದಲು ಬದಲಾಗಿರಲಿವೆ.
ಇದನ್ನೂ ಓದಿ: ಆರ್.ಆರ್.ನಗರ, ಶಿರಾ ಕ್ಷೇತ್ರದಲ್ಲಿ ಗೆಲುವಿನ ಬಾವುಟ ಹಾರಿಸುವುದು ಖಚಿತ : ಬಿಎಸ್ವೈ