ಸಿನಿ ಅಂಗಳದಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರ ‘ಆಕ್ಟ್‌ 1978’: ನ.20ರಂದು ರಾಜ್ಯಾದ್ಯಂತ ಬಿಡುಗಡೆ!

ದೇಶಾದ್ಯಂತ ಲಾಕ್‌ಡೌನ್‌ ಮುಗಿದಿದೆ. ಆದರೂ ಕೆಲವು ಕಟ್ಟುಪಾಡುಗಳು ಹಾಗೆಯೇ ಉಳಿದಿವೆ. ಸತತ 08 ತಿಂಗಳುಗಳ ಕಾಲ ಮುಚ್ಚಲ್ಪಟ್ಟಿದ್ದ ಸಿನಿಮಾ ಥಿಯೇಟರ್‌ಗಳು, ಮಲ್ಟಿಫ್ಲೆಕ್ಸ್‌ಗಳು ಆರಂಭಗೊಂಡಿವೆ. ಆದರೂ, ಕೊರೊನಾ ಭಯದಿಂದ ಸಿನಿ ಪ್ರೇಕ್ಷಕರು ಥಿಯಟರ್‌ಗೆ ಬರುತ್ತಾರೋ-ಇಲ್ಲವೂ ಎಂಬ ಗೊಂದಲದಲ್ಲಿ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ಪ್ರೊಡ್ಯೂಸರ್‌ಗಳು ಹಿಂದೇಟು ಹಾಕುತ್ತಿದ್ದಾರೆ. ಹಳೇ ಸಿನಿಮಾಗಳೇ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿವೆ. ಈ ನಡುವೆ ಲಾಕ್‌ಡೌನ್‌ ನಂತರ ಬಿಡುಗಡೆಗೊಂಡ ಮೊದಲ ಹೊಸ ಸಿನಿಮಾ ಎಂಬ ಹೆಗ್ಗಳಿಕೆಯನ್ನು ತನ್ನ ಭುಜದ ಮೇಲೆ ಹೊತ್ತುಕೊಳ್ಳಲು ‘ಆಕ್ಟ್ 1978’ ಸಿನಿಮಾ ಸಜ್ಜಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಿರ್ದೇಶಕ ಮಂಸೋರೆ ನಿರ್ದೇಶನದ ‘ಆಕ್ಟ್‌ 1978’ ಸಿನಿಮಾ ಸಿನಿಪ್ರಿಯರಲ್ಲಿ ಕೌತುಕ ಹುಟ್ಟಿಸಿದೆ. ಸಿನಿಮಾದಲ್ಲಿ ನಾಯಕಿ ನಟಿಯಾಗಿ ಯಜ್ಞಾ ಶೆಟ್ಟಿ ಬಣ್ಣಹಚ್ಚಿದ್ದಾರೆ. ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಟ್ರೈಲರ್‌ನಲ್ಲಿ ಯಜ್ಞಾ ಶೆಟ್ಟಿಯವರು ಹ್ಯೂಮನ್‌ ಬಾಂಬ್‌ ಕಟ್ಟಿಕೊಂಡು ಸರ್ಕಾರಿ ಕಚೇರಿಯೊಂದನ್ನು ತಮ್ಮ ಕಂಟ್ರೋಲ್‌ಗೆ ಪಡೆದುಕೊಂಡು ಪೊಲೀಸರಿಂದಲೇ ಹಲವು ಕೆಲಸಗಳನ್ನು ಮಾಡಿಸುವುದು ಕಂಡು ಬರುತ್ತದೆ. ಪೊಲೀಸರು ಆಕೆಯನ್ನು ಬಂಧಿಸಲು, ಕಚೇರಿ ಮತ್ತು ಸಿಬ್ಬಂದಿಗಳನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಆಕೆ ಯಾಕೆ ಕಚೇರಿಯನ್ನು ವಶಕ್ಕೆ ಪಡೆದುಕೊಂಡರು. ಆಕೆಗಾದ ಅನ್ಯಾಯವೇನು? ಇತ್ಯಾದಿ ಪ್ರಶ್ನೆಗಳನ್ನು ಸಿನಿಮಾದ ಟ್ರೈಲರ್‌ ಪ್ರೇಕ್ಷಕರ ಮನದಲ್ಲಿ ಹುಟ್ಟು ಹಾಕಿದೆ. ಇದೆಲ್ಲದಕ್ಕೂ ಉತ್ತರ ನವೆಂಬರ್‌ 20ರಿಂದ ಚಿತ್ರಮಂದಿರಗಳಲ್ಲಿ ದೊರೆಯಲಿದೆ. ಅಂದರೆ, ಸಿನಿಮಾ ನ.20 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ವಿಭಿನ್ನ ರೀತಿಯಲ್ಲಿ ಸಿನಿಮಾದ ಪ್ರಚಾರ ನಡೆಯುತ್ತಿದೆ. ಚಿತ್ರದ ಪ್ರಮೋಷನ್‌ ಜೊತೆಗೆ ಸಾಮಾಜಿಕ ಅರಿವನ್ನೂ ಮೂಢಿಸುವಂತಹ ಸಿನಿಮಾದ ಪೋಸ್ಟರ್‌ಗಳು ವೈರಲ್‌ ಅಗುತ್ತಿವೆ. ಹಲವು ಕಾನೂನುಗಳು ಏನು ಹೇಳುತ್ತವೆ. ಜನರು ತಮ್ಮ ಹಕ್ಕುಗಳನ್ನು ಕಾನೂನಿನ ಮೂಲಕ ಹೇಗೆಲ್ಲಾ ಪಡೆದುಕೊಳ್ಳಬಹುದು ಎಂಬುದನ್ನು ಸಿನಿಮಾ ಒಂದೊಂದು ಪೋಸ್ಟರ್‌ಗಳೂ ಹೇಳುತ್ತಿವೆ. ಪೋಸ್ಟರ್‌ಗಳ ಹಿಂದೆ ‘ಆಕ್ಟ್‌ 1978’ ಸಿನಿಮಾಗೆ ಕತೆ ಮತ್ತು ಸಂಭಾಷಣೆ ಬರೆದಿರುವ ದಯಾನಂದ್‌ ಟಿಕೆ ಅವರ ಕೈಚಳಕ ಭಾರಿ ಕೆಲಸ ಮಾಡುತ್ತಿದೆ.

‘ಆಕ್ಟ್ 1978’ ಸಿನಿಮಾದಲ್ಲಿ ಯಜ್ಞಾ ಶೆಟ್ಟಿ, ಶ್ರುತಿ, ದತ್ತಣ್ಣ, ಬಿ.ಸುರೇಶ್, ಅವಿನಾಶ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಸಂಚಾರಿ ವಿಜಯ್, ಶೋಭರಾಜ್, ಸಂಪತ್ ಕುಮಾರ್, ಪ್ರಮೋದ್ ಶೆಟ್ಟಿ, ಶರಣ್ಯ ಸೇರಿದಂತೆ ಅನುಭವಿ ಕಲಾವಿದ ದೊಡ್ಡ ದಂಡೇ ಇದೆ. ಎಲ್ಲರ ಕೆಮಿಸ್ಟ್ರಿ ಸಕ್ಕಾತ್ತಾಗಿಯೇ ವರ್ಕ್‌ ಆಗಿದ್ದು, ಚಿತ್ರವೂ ಚಿತ್ರಮಂದಿರಗಳಲ್ಲಿ ಸದ್ದುಮಾಡಲು ಸಜ್ಜಾಗಿದೆ.

ದೇವರಾಜ್. ಆರ್ ನಿರ್ಮಾಣದ ‘ಆಕ್ಟ್ 1978’ ಚಿತ್ರಕ್ಕೆ ಖ್ಯಾತ ಕ್ಯಾಮೆರಾ ನಿರ್ದೇಶಕ ಸತ್ಯ ಹೆಗ್ಡೆ ಕ್ಯಾಮೆರಾ ಕೈಚಳವಿದೆ. ಸಂಗೀತವನ್ನು ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್ ನೀಡಿದ್ದಾರೆ.

ಸೆನ್ಸಾರ್ ಅಂಗಳದಲ್ಲಿ ‘ಯು’ ಸರ್ಟಿಫಿಕೇಟ್ ಪಡೆದಿರುವ ಈ ಸಿನಿಮಾ ತೆರೆ ಕಾರಣಲು ಇನ್ನೆರಡು ದಿನಗಳಷ್ಟೇ ಬಾಕಿ ಇವೆ. ಸಿನಿಮಾ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರತಂಡ ಖುಷಿಯಾಗಿದೆ.


Read Also: ಬಾಲಕನ ಶಸ್ತ್ರಚಿಕಿತ್ಸೆಗೆ 20 ಲಕ್ಷ ನೆರವು ನೀಡಿ ಮೆಚ್ಚುಗೆ ಪಡೆದ ನಟ ಸೋನು ಸೂದ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights