ಸಿನಿಮಾ ಸ್ಟಾರ್‌ಗಳಿಗೆ ಚುನಾವಣೆ ಮೇಲಷ್ಟೇ ಪ್ರೀತಿ; ರೈತರ ಮೇಲಿಲ್ಲ: ನಟ ಚೇತನ್

ಕೇಂದ್ರದ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಭಾರತ್‌ ಬಂದ್‌ಗೆ ಕರೆಕೊಟ್ಟಿದ್ದಾರೆ. ಭಾರತ್‌ ಬಂದ್‌ಗೆ ನಟ ಚೇತನ್ ಬೆಂಬಲ ಸೂಚಿಸಿದ್ದು, “ಕನ್ನಡ ಚಿತ್ರರಂಗದ ನಟರು ಚುನಾವಣಾ ಪ್ರಚಾರಕ್ಕೆ ವೇಗವಾಗಿ ಸ್ಪಂಧಿಸುತ್ತಾರೆ. ಆದರೆ ರೈತರ ಪರವಾಗಿ ಒಂದೂ ಮಾತನ್ನು ಆಡಲ್ಲ”  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ಈ ಕುರಿತು ಹೇಳಿಕೆಯನ್ನು ಹಂಚಿಕೊಂಡಿರುವ ಚೇತನ್, “ದೇಶಾದ್ಯಂತ ರೈತರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಚುನಾವಣಾ ಪ್ರಚಾರದ ಬ್ಯಾಂಡ್‌ವ್ಯಾಗನ್‌ಗಳ ಮೇಲೆ ವೇಗವಾಗಿ ನೆಗೆಯುವ ಕನ್ನಡ ಚಲನಚಿತ್ರ ನಟರು ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ. ನಾವು ನಟರು ಜನರಿಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸುತ್ತೇವೆಯೇ? ಅಥವಾ ನಮ್ಮ ಶ್ರೀಮಂತ ಗಣ್ಯ ಸ್ನೇಹಿತರನ್ನು ಇನ್ನಷ್ಟು ಪ್ರಚೋದಿಸಲು ನಾವು ನಟರು ಮಾತ್ರ ಆಸಕ್ತಿ ಹೊಂದಿದ್ದೇವೆಯೇ? ಅಹಿಂಸಾ…” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  ಕೆಲಸಗಳಲ್ಲಿ ಬ್ಯುಸಿಯಾಗಿರುವ ಮೋದಿ ಸರ್ಕಾರ; 06 ವರ್ಷದಲ್ಲಿ ಬಿಜೆಪಿ ಸಾಧನೆಗಳೇನು ಗೊತ್ತೇ?

ಮೊದಲಿನಿಂದಲೂ ಕೇವಲ ನಟನೆ ಮಾತ್ರವಲ್ಲದೇ ಜನಪರ ಹೋರಾಟಗಳಲ್ಲಿಯೂ ತೊಡಗಿಸಿಕೊಂಡು ವೈಚಾರಿಕವಾಗಿ ಚಿಂತಿಸುವ ನಟ ಚೇತನ್ ಇದೀಗ ರೈತರ ಪರವಾಗಿ ದನಿಯೆತ್ತಿದ್ದಾರೆ. ಇಷ್ಟೇ ಅಲ್ಲದೇ ತಾವು ಪ್ರತಿನಿಧಿಸುತ್ತಿರುವ ಕನ್ನಡ ಚಿತ್ರರಂಗದ ಇತರ ನಟರ ಮೇಲೂ ಕಿಡಿಕಾರಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರವು ಮೂರು ಪ್ರಮುಖ ಕೃಷಿ ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ವಿರೋಧಿಸಿ ದೇಶದಾದ್ಯಂತ ಲಕ್ಷಾಂತರ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಇದೀಗ ಲಕ್ಷಾಂತರ ಪಂಜಾಬ್ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದು 12 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಸಾಕಷ್ಟು ಸುತ್ತಿನ ಮಾತುಕತೆಗಳು ನಡೆದರೂ ಅವುಗಳೆಲ್ಲಾ ವಿಫಲವಾಗಿವೆ.

ರೈತರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಅಮಾನವೀಯ ಕ್ರಮಗಳನ್ನು ಕೈಗೊಂಡಿತ್ತು. ಇವುಗಳನ್ನೆಲ್ಲಾ ಲೆಕ್ಕಿಸದ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಇಂದಿನಿಂದ ಕರ್ನಾಟಕದಲ್ಲೂ ಸಹ ರೈತರ ಪ್ರತಿಭಟನೆ ಆರಂಭವಾಗಿದೆ.


ಇದನ್ನೂ ಓದಿ: ರೈತರಲ್ಲದವರು ರೈತರನ್ನು ಬೆಂಬಲಿಸುವ ಕಾಲ ಬಂದಿದೆ: ಪಿ ಸಾಯಿನಾಥ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights