ಮುಸ್ಲಿಮರಿಗೆ ಮುಕ್ತ ಅವಕಾಶ;ಮೊದಲ ದಿನವೇ ಹಲವು ಬದಲಾವಣೆ ತಂದ ಜೋ ಬೈಡನ್‌!

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್​ ಬೈಡೆನ್‌ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹಲವಾರು ತಿದ್ದುಪಡಿಗಳು ಹಾಗೂ ಯೋಜನೆಗಳಿಗೆ ಸಹಿಹಾಕಿದ್ದಾರೆ. ಅಲ್ಲದೆ, ಡೊನಾಲ್ಡ್‌ ಟ್ರಂಪ್ ಅಧಿಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಸುಮಾರು 17 ನೀತಿಗಳನ್ನು ಅವರು ರದ್ದುಪಡಿಸಿದ್ದು, ಅವುಗಳಿಗೆ ಹಲವಾರು ಬದಲಾವಣೆಯ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.

2017ರಲ್ಲಿ ಟ್ರಂಪ್ ಆಡಳಿತ ಮುಸ್ಲಿಂ ರಾಷ್ಟ್ರಗಳ ವಿರುದ್ದ ಹೇರಲಾಗಿದ್ದ ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ಯನ್ನು ಬೈಡೆನ್‌ ರದ್ದುಗೊಳಿಸಿದ್ದಾರೆ. ​

ಟ್ರಂಪ್‌ ಜಾರಿಗೊಳಿಸಿದ್ದ ಈ ನೀತಿಯಿಂದಾಗಿ, ಕೆಲವು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈ ನಿರ್ಬಂಧವನ್ನು ಬೈಡೆನ್‌​ ತೆರವುಗೊಳಿಸಿದ್ದಾರೆ. ಇದರಿಂದಾಗಿ ಜಗತ್ತಿನ ಎಲ್ಲಾ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕದಲ್ಲಿ ಮುಕ್ತ ಅವಕಾಶವಿದೆ ಎಂದು ಬೈಡೆನ್​ ಹೇಳಿದ್ದಾರೆ.

ಟ್ರಂಪ್​ ಸರ್ಕಾರದ ನೀತಿಯಿಂದ ತೊಂದರೆ ಅನುಭವಿಸಿದ ರಾಷ್ಟ್ರಗಳ ಪ್ರಯಾಣಿಕರಿಗೆ ವೀಸಾ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತಕ್ಕೆ ನುಸುಳಿರುವ ಚೀನಾ; ಅರುಣಾಚಲದಲ್ಲಿ ಹೊಸ ಹಳ್ಳಿಯನ್ನೇ ನಿರ್ಮಿಸಿದೆ ಚೀನಾ ಪಡೆ!

ಕ್ಯಾಪಿಟಲ್ ಕಚೇರಿಯ ಅಧಿಕಾರ ಹಿಡಿದ ನಂತರ ಎರಡು ಪ್ರಮುಖ ನಿರ್ದೇಶನಗಳು ಮತ್ತು 15 ಕಾರ್ಯನಿರ್ವಾಹಕ ಕ್ರಮಗಳಿಗೆ ಬೈಡನ್ ಸಹಿ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್ ಆಡಳಿತ ಜಾರಿಗೆ ತಂದ ಹಲವು ನೀತಿಗಳಲ್ಲಿ ಬದಲಾವಣೆಗೆ ಬೈಡನ್ ಒತ್ತುನೀಡಿದ್ದಾರೆ. ಇಂದಿನಂತೆ ಆರಂಭಿಸಲು ಬೇರೆ ಸಮಯವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಬೈಡನ್ ಉತ್ತರಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕವನ್ನು ಎದುರಿಸುವುದನ್ನು ಟ್ರಂಪ್ ಆಡಳಿತ ತನ್ನ ಮೊದಲ ಆದ್ಯತೆಯನ್ನಾಗಿಸಿಕೊಂಡಿದೆ. ಮುಂದಿನ ನೂರು ದಿನಗಳ ಕಾಲ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲು ಬೈಡನ್ ಮನವಿ ಮಾಡಿದ್ದಾರೆ. ಹೊಸ ಫೆಡರಲ್ ಕಚೇರಿಯನ್ನು ರಚಿಸುವುದು ಮತ್ತು ಜಾಗತಿಕ ಆರೋಗ್ಯ ಸುರಕ್ಷತೆ ಮತ್ತು ರಕ್ಷಣೆಗಾಗಿ ಟ್ರಂಪ್ ಆಡಳಿತದಲ್ಲಿ ಮುಚ್ಚಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ದೇಶನಾಲಯವನ್ನು ಪುನಃಸ್ಥಾಪಿಸಲು ಬೈಡನ್ ಮುಂದಾಗಿದ್ದಾರೆ.

ವಲಸೆ ವಿಚಾರದಲ್ಲಿ ಬೈಡನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. 2012ರಲ್ಲಿ ಜಾರಿಗೆ ತಂದ ಬಾಲ್ಯದ ವಲಸೆಯ ಹಕ್ಕುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇದರಿಂದ ಲಕ್ಷಾಂತರ ಜನರನ್ನು ಗಡೀಪಾರು ಮಾಡುವಿಕೆಯಿಂದ ರಕ್ಷಿಸಲಾಗುತ್ತದೆ. ಅಲ್ಲದೆ ಅಂತರ್ಯುದ್ಧ ಮತ್ತು ಎಬೋಲಾ ದಾಳಿಯಿಂದ ಪಲಾಯನ ಮಾಡಿದ ಲೈಬೀರಿಯನ್ನರಿಗೆ ತಾತ್ಕಾಲಿಕ ಕಾನೂನು ಸ್ಥಾನಮಾನವನ್ನು ಜೂನ್ 2022 ರವರೆಗೆ ವಿಸ್ತರಿಸುವುದಾಗಿ ಅವರ ಆದೇಶಗಳಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಪ್ಯಾರೀಸ್ ಹವಾಮಾನ ಒಪ್ಪಂದಕ್ಕೆ ಮರು ಸೇರ್ಪಡೆ, ವಿಶ್ವ ಆರೋಗ್ಯ ಸಂಸ್ಥೆ (WHO)ಯೊಂದಿಗೆ ಮರು ಹೊಂದಾಣಿಕೆ ಸೇರಿದಂತೆ ಇನ್ನೂ ಹಲವು ಕಾರ್ಯನೀತಿಗಳನ್ನು ಬೈಡೆನ್​ ತಮ್ಮ ಅಧಿಕಾರಾವಧಿಯ ಮೊದಲ ದಿನವೇ ಘೋಷಿಸಿದ್ದಾರೆ.

ಇದನ್ನೂ ಓದಿ: ಯುಎಸ್ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಮಾಡಿದ ಮೊದಲ ಟ್ವೀಟ್ ಇದು…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights