ಅಮಿತ್ ಶಾ ಟ್ವಿಟರ್ ಖಾತೆ ಬ್ಲಾಕ್‌; ಸಂಸದೀಯ ಸಮಿತಿಗೆ ಟ್ವಿಟರ್ ಸಂಸ್ಥೆ ಕೊಟ್ಟ ಕಾರಣವೇನು?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಟ್ವಿಟರ್ ಖಾತೆಯನ್ನು 2020 ರ ನವೆಂಬರ್ ತಿಂಗಳಿನಲ್ಲಿ ಬ್ಲಾಕ್ ಮಾಡಲಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾದ ಫೇಸ್‌ಬುಕ್ ಮತ್ತು ಟ್ವಿಟರ್‌ನ ಕಾರ್ಯನಿರ್ವಾಹಕರನ್ನು ಸಂಸದೀಯ ಸಮಿತಿ ತರಾಟೆಗೆ ತೆಗೆದುಕೊಂಡಿದೆ.

ಸಂಸದೀಯ ಸಮಿತಿಯ ಕಾರ್ಯಸೂಚಿಯಂತೆ, ನಾಗರಿಕರ ಹಕ್ಕುಗಳನ್ನು ಕಾಪಾಡುವುದು, ಸಾಮಾಜಿಕ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗವನ್ನು ತಡೆಯುವುದು ಮತ್ತು ಡಿಜಿಟಲ್ ವೇದಿಕೆಯಲ್ಲಿ ಮಹಿಳೆಯರ ಸುರಕ್ಷತೆ ಕುರಿತ ವಿಷಯಗಳನ್ನು ಚರ್ಚಿಸಬೇಕಿತ್ತು. ಆದರೆ ಇಲ್ಲಿ, “ಅಮಿತ್ ಶಾ ಅವರ ಟ್ವಿಟರ್ ಖಾತೆಯನ್ನು ಏಕೆ ಬ್ಲಾಕ್ ಮಾಡಲಾಯಿತು? ಈ ಹಕ್ಕನ್ನು ನಿಮಗೆ ಯಾರು ನೀಡಿದರು? ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ” ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಅಮಿತ್ ಶಾ ಅವರ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದ ಚಿತ್ರಕ್ಕೆ ಸಂಬಂಧಿಸಿದಂತೆ ಕಾಪಿರೈಟ್ಸ್‌ ಸಮಸ್ಯೆ ಇದ್ದುದರಿಂದ ಅವರ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಬೇಕಾಯಿತು. ಇದು ಆಕಸ್ಮಿಕವಾಗಿ ಆದ ತೊಂದರೆ. ಬಳಿಕ ಅವರ ಖಾತೆಯನ್ನು ಮತ್ತೆ ಚಾಲ್ತಿಯಲ್ಲಿಡಲಾಯಿತು” ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಸುವೇಂದು ಅಧಿಕಾರಿ ರ‍್ಯಾಲಿಯಲ್ಲಿ ಗೋಲಿ ಮಾರೋ ಘೋಷಣೆ: ಮೂವರು BJP ಮುಖಂಡರ ಬಂಧನ!

ಅಮೆರಿಕದಲ್ಲಿ ದ್ವೇಷ ಭಾಷಣ ಮತ್ತು ಹೇಳಿಕೆಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ವಿವಾದದ ಹಿನ್ನಲೆಯಲ್ಲಿ, “ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲದಿರುವಾಗ ಟ್ವಿಟರ್ ಖಾತೆಯನ್ನು ಹೇಗೆ ಬ್ಲಾಕ್ ಮಾಡಬಹುದು” ಎಂದು ಸಮಿತಿಯಲ್ಲಿದ್ದ ಬಿಜೆಪಿ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ.

“ಹಿಂಸೆಗೆ ಪ್ರಚೋದನೆ ನೀಡುವ ಕಂಟೆಂಟ್‌ಗಳನ್ನು ತೆಗೆದುಹಾಕುವುದಕ್ಕೆ ನಮ್ಮಲ್ಲಿ ಬಲವಾದ ನಿಯಮಗಳಿವೆ” ಎಂದು ಟ್ವಿಟರ್ ಮತ್ತು ಫೇಸ್‌ಬುಕ್ ಎರಡೂ ಸ್ಪಷ್ಟಪಡಿಸಿವೆ.

ವಾಷಿಂಗ್ಟನ್ ಕ್ಯಾಪಿಟಲ್‌ ಮೇಲೆ ನಡೆದ ಹಿಂಸಾಚಾರದ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಟ್ವಿಟರ್ ನಿರ್ಬಂಧಿಸಿತ್ತು. ಇದು ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಉದಾಹರಣೆ ಎಂದು ಅವರು ಹೇಳಿದ್ದಾರೆ.

2020 ರ ಆಗಸ್ಟ್‌‌ನಲ್ಲಿ ತನ್ನ ನೀತಿಗಳಲ್ಲಿ ಫೇಸ್‌ಬುಕ್ ಪಕ್ಷಪಾತ ಮಾಡುತ್ತಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ವರದಿಯಲ್ಲಿ, “ಆಡಳಿತರೂಡ ಬಿಜೆಪಿಯ ಬಗ್ಗೆ ತನ್ನ ವ್ಯಾಪಾರ ಹಿತಾಸಕ್ತಿಗಳಿಗಾಗಿ ಒಲವು ತೋರಿಸಿದೆ ಹಾಗೂ ಫೇಸ್‌ಬುಕ್‌ನ ಕಾರ್ಯನಿರ್ವಾಹಕಿಯಾಗಿದ್ದ ಆಂಖೀ ದಾಸ್ ಮುಸ್ಲಿಂ ವಿರೋಧಿ ಟೀಕೆಗಳನ್ನು ಮಾಡಿದ್ದ ಬಿಜೆಪಿ ನಾಯಕನ ಪರವಾಗಿ ಲಾಬಿ ಮಾಡಿದ್ದಾರೆ” ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಕೇಂದ್ರದಲ್ಲಿ BJP ಮತ್ತೆ ಅಧಿಕಾರಕ್ಕೆ ಬಂದರೆ 3,500 ಮಸೀದಿಗಳು ನೆಲಸಮ: ಅಸ್ಸಾಂ ಸಂಸದ

ಈ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜಕಾರಣಿಯೊಬ್ಬರ ಖಾತೆಯನ್ನು ಅಮಾನತ್ತು ಮಾಡಿದ್ದ ಫೇಸ್‌ಬುಕ್, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತಾದರೂ ದ್ವೇಷ ಭಾಷಣಗಳನ್ನು ನಿಗ್ರಹಿಸಲು ಇನ್ನೂ ಉತ್ತಮವಾಗಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಒಪ್ಪಿಕೊಂಡಿತ್ತು. ಅಲ್ಲದೆ ಅದರ ಕಾರ್ಯನಿರ್ವಾಹಕಿಯಾಗಿದ್ದ ಆಂಖೀ ದಾಸ್ ಕೂಡಾ ಫೇಸ್‌ಬುಕ್ ತೊರೆದಿದ್ದರು.

ಭಾರತದಲ್ಲಿ ಐದು ಕಚೇರಿಗಳನ್ನು ನಡೆಸುತ್ತಿರುವ ಫೇಸ್‌ಬುಕ್, ಅಕ್ಟೋಬರ್ ತಿಂಗಳೊಂದರಲ್ಲೇ ಶತಕೋಟಿ ಡಾಲರ್‌ಗಳಷ್ಟು ದುಡ್ಡನ್ನು ಹೂಡಿಕೆ ಮಾಡಿದೆ. ಫೇಸ್‌ಬುಕ್ ಭಾರತವನ್ನು ಬಳಕೆದಾರರ ವಿಷಯದಲ್ಲಿ ತನ್ನ ಅತಿದೊಡ್ಡ ಮಾರುಕಟ್ಟೆಯೆಂದು ಪರಿಗಣಿಸಿದೆ.

ಈ ಕಾರಣಕ್ಕೆ ಫೇಸ್‌ಬುಕ್ ಮತ್ತು ಟ್ವಿಟರ್ ಭಾರತದ ಆಡಳಿತಾರೂಢ ಬಿಜೆಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿದೆ ಎಂದು ಈ ಹಿಂದೆ ಹಲವರು ಆರೋಪಿಸಿದ್ದರು.

ಇದನ್ನೂ ಓದಿ: ಚುನಾವಣೆ ಗೆಲ್ಲಲು BJP 40 ಯೋಧರನ್ನು ಬಲಿ ಕೊಟ್ಟಿದೆ: ಶಿವಸೇನೆ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights