ಪ್ರತಿಭಟನಾ ನಿರತ ದೆಹಲಿ ಗಡಿಗಳಲ್ಲಿ ರಾತ್ರಿ ನಡೆದಿದ್ದೇನು? ಕರ್ನಾಟಕದ ಪತ್ರಕರ್ತರು ಕಂಡ ನೈಜ ಚಿತ್ರಣ!
ಜ.26ರ ಗಣರಾಜ್ಯೋತ್ಸವದ ದಿನ ನಡೆದ ಅಹಿತಕರ ಘಟನೆಯ ನಂತರ, ರೈತರ ಹೋರಾಟವನ್ನು ಮಣಿಸಲು ಸರ್ಕಾರ ಭಾರೀ ಷ್ಯಡ್ಯಂತ್ರಗಳನ್ನು ರೂಪಿಸುತ್ತಿರುವುದಾಗಿ ತಿಳಿದುಬಂದಿದೆ. ಸರ್ಕಾರ ಪಿತೂರಿಯ ಭಾಗವಾಗಿ ಗಾಝೀಯಾಪುರ್ ಗಡಿಯಲ್ಲಿರುವ ರೈತರ ಮೇಲೆ ಪೊಲೀಸರ ದಮನ ಆರಂಭವಾಗಿದ್ದು, ದಮನಕ್ಕೆ ಪ್ರತಿಯಾಗಿ ಸಾವಿರಾರು ರೈತರು ಹರಿಯಾಣ-ಉತ್ತರ ಪ್ರದೇಶದಿಂದ ಹೋರಾಟದ ಸ್ಥಳಕ್ಕೆ ತೆರಳುತ್ತಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ದೆಹಲಿ ಗಡಿಗಳಲ್ಲಿ ಕಳೆದ ರಾತ್ರಿ ಏನೆಲ್ಲಾ ನಡೆಯಿತು ಎಂಬುದನ್ನು ಕರ್ನಾಟಕದಿಂದ ಪ್ರತಿಭಟನಾ ಸ್ಥಳಕ್ಕೆ ತೆರಳಿರುವ ಪರ್ಯಾಯ ಮಾಧ್ಯಮದ ಪತ್ರಕರ್ತರು ವಿವರಿಸಿದ್ದಾರೆ. ಸಂಪೂರ್ಣ ಡೀಟೇಲ್ಸ್ ಹೀಗಿದೆ.
1. ಸಿಂಘುವಿನಲ್ಲಿ ಏನಾಯಿತು?
ಸುಮಾರು 30 ಜನ (ಸ್ಥಳೀಯರೆಂದು ಗೋದಿ ಮೀಡಿಯಾ ಹೇಳಿದ್ದು) ಪೊಲೀಸ್ ಪ್ರೊಟೆಕ್ಷನ್‌ನಲ್ಲಿ ಟಿವಿ ಕ್ಯಾಮೆರಾಗಳನ್ನೂ ಕರೆತಂದು ಸುಮಾರು ಒಂದು ಕಿ.ಮೀ ದೂರದಲ್ಲಿ ಒಂದು ಪ್ರೊಟೆಸ್ಟ್ ಪೋಸ್ ಕೊಟ್ಟು ಹೋಗಿದ್ದಾರೆ. ಅಲ್ಲಿರುವ ಸುಮಾರು 50,000 ಜನರಿಗೆ ಇದರ ಸುಳಿವೇ ಇಲ್ಲ. ಯಾವ ಸ್ಥಳೀಯರೂ ಇದನ್ನು ವಿರೋಧಿಸಿಲ್ಲ. ಏಕೆಂದರೆ ಸುಮಾರು 12 ಕಿ.ಮೀ.ವರೆಗೆ ಈ ಪ್ರತಿಭಟನಾಕಾರರು ಗುಂಪಾಗಿ ಇದ್ದಾರೆ. ವಾಸ್ತವವೇನೆಂದರೆ ಇಲ್ಲಿಗೆ ಬಂದು ಇದರ ವಿರುದ್ಧವೇ ಪ್ರತಿಭಟನೆ ಮಾಡಲು ಹೆದರುವಷ್ಟು ಇಲ್ಲಿನ ಸಂಖ್ಯೆ ಇದೆ. ಪಂಜಾಬಿ ಯುವಜನರಿಂದ ಈ ಪ್ರದೇಶ ತುಂಬಿ ಹೋಗಿದೆ.
2. ಟಿಕ್ರಿಯಲ್ಲಿ ಏನಾಯಿತು?
ಇಲ್ಲಿಯೂ 40,000ದಷ್ಟು ಜನರಿದ್ದಾರಾದರೂ ಅವರು 25 ಕಿ.ಮೀ.ಗಳಷ್ಟು ಜಾಗದಲ್ಲಿ ಚದುರಿ ಹೋಗಿದ್ದಾರೆ. ಹಾಗಾಗಿ ಅಲ್ಲಲ್ಲಿ ಅವರ ಮೇಲೆ ದಾಳಿ ನಡೆಸಬಹುದು ಎಂಬ ನಿರೀಕ್ಷೆಯಿತ್ತು. (ಸ್ವತಃ ನಮ್ಮ ತಂಡ ಸಂದರ್ಶನಕ್ಕಾಗಿ ಟಿಕ್ರಿ ಬಾರ್ಡರ್ ಮೆಟ್ರೋ ಸ್ಟೇಷನ್‌ನಿಂದ ಸ್ವಲ್ಪ ದೂರದ ಒಂದು ಮನೆಗೆ ತೆರಳಿದ್ದರು. ಅಲ್ಲಿ ಬಂದೂಕುಧಾರಿ ಗೂಂಡಾಗಳು ಹೋಗಿ ಹೆದರಿಸಿದ್ದರು. ಈ ಬಗ್ಗೆ ಪ್ರತ್ಯೇಕ ಸ್ಟೋರಿ ಬರಲಿದೆ). ಆದರೆ ಅಂಥದ್ದೇನೂ ಆಗಿಲ್ಲ. ಇಡೀ ಟಿಕ್ರಿ ಬಾರ್ಡರ್ ಸುರಕ್ಷಿತವಾಗಿದೆ.
3. ಘಾಜಿಪುರ ಬಾರ್ಡರ್’ನಲ್ಲಿ ಏನಾಯಿತು?
ಇದು ಉತ್ತರ ಪ್ರದೇಶದ ಭಾಗ. ಇಲ್ಲಿ ಪೊಲೀಸರು ಖಾಲಿ ಮಾಡಬೇಕೆಂದು ಅಲ್ಟಿಮೇಟಂ ಕೊಟ್ಟಿದ್ದಲ್ಲದೇ ನೀರು ಕಟ್ ಮಾಡಿದ್ದರು. ಮೊಬೈಲ್ ಟಾಯ್ಲೆಟ್‌ಗಳನ್ನು ಎತ್ತಿಕೊಂಡು ಹೋಗಿಬಿಟ್ಟರು. ಒಂದು ಹಂತದಲ್ಲಿ ಶಾಂತಿಯುತವಾಗಿ ಎಲ್ಲರೂ ಬಂಧನಕ್ಕೊಳಗಾಗೋಣ ಎಂಬ ನಿಲುವಿಗೆ ಬರಬಹುದು ಎಂದು ಕಾಣುತ್ತಿತ್ತು. ಆದರೆ ಯಾವಾಗ ಸ್ಥಳೀಯ ಬಿಜೆಪಿ ಎಂಎಲ್‌ಎ ಹಾಗೂ ಇತರ ಬಿಜೆಪಿ ಕಾರ್ಯಕರ್ತರು ಬಂದು ನೇರವಾಗಿ ಪ್ರತಿಭಟನಾಕಾರರನ್ನು ಎಬ್ಬಿಸಲು ಪ್ರಯತ್ನಿಸಿದರೋ, ಹಾಗೂ ಕೆಲವರು ನೇರವಾಗಿ ವೇದಿಕೆ ಏರಲು ಹೊರಟರೋ ಇಡೀ ಸನ್ನಿವೇಶ ಬದಲಾಯಿತು. ಬಿಕೆಯು ಟಿಕಾಯಿತ್ ನಾಯಕ ರಾಕೇಶ್ ಟಿಕಾಯಿತ್ ಮೈಕ್ ಎತ್ತಿಕೊಂಡು ಮಾಡಿದ 30 ನಿಮಿಷಗಳ ಭಾಷಣ ಇದೀಗ ವೈರಲ್.
ಇದನ್ನೂ ಓದಿ: ರೈತ ಮುಖಂಡರ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಲು ಅಮಿತ್ ಶಾ ಆದೇಶ!
ನಮ್ಮ ಮೇಲೆ ಗುಂಡು ಹಾರಿಸಲಿ, ನಾನಿಲ್ಲೇ ನೇಣು ಹಾಕಿಕೊಳ್ಳುತ್ತೇನೆ, ಆದರೆ ಸತ್ಯಾಗ್ರಹದ ಜಾಗ ಖಾಲಿ ಮಾಡಲ್ಲ ಎಂದು ರಾಕೇಶ್ ಮಾಡಿದ ಭಾಷಣ ಸಂಚಲನ ಮೂಡಿಸಿತು. ಸ್ವಲ್ಪ ಹೊತ್ತಿನಲ್ಲಿ ರಾಕೇಶ್ ಟಿಕಾಯಿತ್ ಅವರ ಊರಿನ ಮನೆಯ ಮುಂದೆ ಸಾವಿರಾರು ಜನರು ಸೇರಿದರು ಮತ್ತು 10.45ರ ಹೊತ್ತಿಗೆ ಅವರ ಮೊದಲ ಗುಂಪು ಘಾಜಿಪುರ ಸೇರಿಯಾಗಿತ್ತು. ಬೆಳಗಿನ ಹೊತ್ತಿಗೆ 10,000 ಜನರಾದರೂ ಸೇರಬೇಕು ಎಂದು ಕರೆ ನೀಡಿದ್ದಾರೆ.
ಒಂದೆರಡು ಕಡೆ ನಡೆಯುತ್ತಿದ್ದ ನಿರಂತರ ಸತ್ಯಾಗ್ರಹ ನಿಂತಿದೆ ಎಂಬ ಸುದ್ದಿ ಇದೆ, ಅದೇ ಸಂದರ್ಭದಲ್ಲಿ ಪಂಜಾಬಿನಾದ್ಯಂತ ನಡೆಯುತ್ತಿದ್ದ ಧರಣಿ ಸತ್ಯಾಗ್ರಹಗಳಲ್ಲಿ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ. ಹರಿಯಾಣದ ವಿವಿಧ ಹಳ್ಳಿಗಳ ಪಂಚಾಯತ್‌ಗಳಲ್ಲಿ ದೆಹಲಿಗೆ ತೆರಳಬೇಕು ಎಂಬ ನಿರ್ಣಯ ಕೈಗೊಂಡಿದ್ದಾರೆ.
ಚಳವಳಿಯ ತೀವ್ರತೆ ಉತ್ತರ ಪ್ರದೇಶದ ಕಡೆಯೂ ಹೆಚ್ಚುತ್ತಿದೆ. ಸ್ವಲ್ಪ ಹೊತ್ತಿನಲ್ಲಿ ಸಂಪೂರ್ಣ ಸುದ್ದಿ ನೀಡಲಾಗುತ್ತದೆ.
ಇದನ್ನೂ ಓದಿ: ರೈತರ ಪರೇಡ್‌ನಲ್ಲಿ ಪೊಲೀಸರ ದಾಳಿ; ವಾಸ್ತವವನ್ನು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ತಿರುಚಿದ್ದು ಹೀಗೆ!