ರಾಜ್ಯದ ಜನರಿಗೆ ಶಾಕ್‌: ಟಿವಿ, ಬೈಕ್, ಫ್ರಿಡ್ಜ್ ಇದ್ದರೆ BPL ಕಾರ್ಡ್‌ ಕಟ್‌!

ಹೊಸದಾಗಿ ಸಚಿವ ಸಂಪುಟ ಸೇರಿರುವ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ರಾಜ್ಯದ ಜನರಿಗೆ ಶಾಕ್‌ ನೀಡಿದ್ದು, ಮನೆಯಲ್ಲಿ ಟಿವಿ, ಬೈಕ್, ಫ್ರಿಡ್ಜ್ ಇದ್ದರೆ ಅವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ.

‘ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು, ಮನೆಯಲ್ಲಿ ಬೈಕ್, ಟೆಲಿವಿಷನ್, ಫ್ರಿಡ್ಜ್ ಹೊಂದಿದ್ದವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇಂತಹ ಬಿಪಿಎಲ್ ಕಾರ್ಡುದಾರರು ತಮ್ಮ ಕಾರ್ಡ್‌ಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಮತ್ತು ವರ್ಷಕ್ಕೆ 1.20 ಲಕ್ಷ ರೂಗಿಂತ ಅಧಿಕ ವರಮಾನ ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಿರುವಂತಿಲ್ಲ. ಅವುಗಳನ್ನು ಮಾರ್ಚ್ 31ರ ಒಳಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಸಮೀಕ್ಷೆ ನಡೆಸಿ ಕಾರ್ಡುಗಳನ್ನು ಹಿಂಪಡೆಯುತ್ತದೆ. ಏಪ್ರಿಲ್ ಬಳಿಕ ಸರ್ಕಾರ ಬಿಪಿಎಲ್ ಕಾರ್ಡುದಾರರ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಈ ಎಲ್ಲ ಸೌಲಭ್ಯಗಳು ಇದ್ದರೂ ಬಿಪಿಎಲ್ ಕಾರ್ಡು ಹೊಂದಿದ್ದರೆ ಅಂತಹವರಿಗೆ ದಂಡದ ಜತೆಗೆ ಶಿಕ್ಷೆ ಸಹ ನೀಡಲಾಗುತ್ತದೆ ಎಂದು ಉಮೇಶ್ ಕತ್ತಿ ಎಚ್ಚರಿಕೆ ನೀಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿಗೆ ಆಹಾರ ಧಾನ್ಯಗಳನ್ನು ಒದಗಿಸಲು ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಆದರೆ ಆರ್ಥಿಕವಾಗಿ ಸದೃಢರಾಗಿರುವ ಕುಟುಂಬದವರು ಕೂಡ ಸುಳ್ಳು ಮಾಹಿತಿ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂತಹವರಿಗೆ ಕಾರ್ಡ್ ವಾಪಸ್ ನೀಡಲು ಅವಕಾಶ ಕೊಡಲಾಗಿತ್ತು. ಶೇ 55-60ರಷ್ಟು ಮಂದಿ ಮಾತ್ರ ಕಾರ್ಡ್ ಹಿಂದಿರುಗಿಸಿದ್ದಾರೆ. ಈಗ ಉಳಿದವರಿಗೆ ಕಡೆಯ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೇಪಾಳ-ಶ್ರೀಲಂಕಾದಲ್ಲಿಯೂ BJP ಸರ್ಕಾರ ರಚಿಸಲು ಅಮಿತ್‌ ಶಾ ಯೋಜಿಸಿದ್ದಾರೆ: ತ್ರಿಪುರ ಸಿಎಂ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ರಾಜ್ಯದ ಜನರಿಗೆ ಶಾಕ್‌: ಟಿವಿ, ಬೈಕ್, ಫ್ರಿಡ್ಜ್ ಇದ್ದರೆ BPL ಕಾರ್ಡ್‌ ಕಟ್‌!

  • February 15, 2021 at 5:11 pm
    Permalink

    ಮುಂದಿನ ಸಲ ಬಿಜೆಪಿ ಕರ್ನಾಟಕದಲ್ಲಿ ಕಟ್ ಚಿಂತಿಸಬೇಡಿ.

    Reply

Leave a Reply

Your email address will not be published.

Verified by MonsterInsights