ಕೊಸೊವೊ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಎಡಪಕ್ಷ; ಅಲ್ಬಿನ್ ಕುರ್ತಿಗೆ ಪ್ರಧಾನಿ ಪಟ್ಟ!

ಕೊರೊನಾ ನಂತರ ದಕ್ಷಿಣ ಯುರೋಪ್‌ನಲ್ಲಿರುವ ಕೊಸೊವೊದಲ್ಲಿ ನಡೆದ ಚುನಾವಣೆಯಲ್ಲಿ ಎಡ ಪಕ್ಷ ವೆಟೆವೆಂಡೋಸ್ಜೆ ಗೆಲುವು ಸಾಧಿಸಿದ್ದು, ಪಕ್ಷದ ನಾಯಕ ಅಲ್ಬಿನ್ ಕುರ್ತಿ ಅವರು ಕೊಸೊವೊ ರಾಷ್ಟ್ರದ ಪ್ರಧಾನಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಕೊರೊವೊದಲ್ಲಿ ಕೊರೊನಾ ವೈರಸ್‌, ಆರ್ಥಿಕ ಕುಸಿದ ಮತ್ತು ಸೆರ್ಬಿಯಾ ದೇಶದೊಂದಿಗಿನ ಮಾತುಕತೆ ಸ್ಥಗಿತ ಸೇರಿದಂತೆ ಹಲವಾರು ಪ್ರಮುಖ ವಿದ್ಯಮಾನಗಳು ಮುನ್ನೆಲೆಯಲ್ಲಿದ್ದ ಸಂದರ್ಭದಲ್ಲಿ ನಡೆದಿರುವ ಚುನಾವಣೆಯಲ್ಲಿ ವೆಟೆವೆಂಡೋಸ್ಜೆ ಪಕ್ಷವು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.

ಸೋಮವಾರ 98% ಮತ ಎಣಿಕೆ ಮುಗಿದಿದ್ದು, ಎಡಪಂಥೀಯ ನಿರ್ಣಯ ಚಳವಳಿ ಪಕ್ಷ ಎಂದು ಕರೆಯಲ್ಪಡುವ ವೆಟೆವೆಂಡೋಸ್ಜೆ 48% ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಕೊಸೊವೊದ ಸೆಂಟರ್-ರೈಟ್ ಡೆಮಾಕ್ರಟಿಕ್ ಪಾರ್ಟಿ ಅಥವಾ ಪಿಡಿಕೆ ಮತ್ತು ಕನ್ಸರ್ವೇಟಿವ್ ಆಡಳಿತದ ಕೊಸೊವೊದ ಡೆಮಾಕ್ರಟಿಕ್ ಲೀಗ್ ಅಥವಾ ಎಲ್ಡಿಕೆ ಎರಡೂ ಪಕ್ಷಗಳು ಸೋಲು ಅನುಭವಿಸಿವೆ.

ವೆಟೆವೆಂಡೋಸ್ಜೆ ಪಕ್ಷದ ಪ್ರಧಾನ ಮಂತ್ರಿಯಾಗುವ ನಿರೀಕ್ಷೆಯಿರುವ ನಾಯಕ ಅಲ್ಬಿನ್ ಕುರ್ತಿ ಮುಂದೆ “ದೇಶದ ಆರ್ಥಿಕತೆಯನ್ನು ಮೇಲೆತ್ತುವ, ಸಾಂಕ್ರಾಮಿಕ ರೋಗವನ್ನು ಎದುರಿಸುವ, ನಿರುದ್ಯೋಗವನ್ನು ಕಡಿಮೆ ಮಾಡುವ ಮತ್ತು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸವಾಲು ಇದೆ” ಎಂದು ಅಲ್‌ಜಜೀರಾ ವರದಿ ಮಾಡಿದೆ.

“ರಾಜ್ಯದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನ್ಯಾಯ ಮತ್ತು ಉದ್ಯೋಗಗಳಿಗಾಗಿ ನಾವು ಈ ಜನಾಭಿಪ್ರಾಯವನ್ನು ಗೆದ್ದಿದ್ದೇವೆ” ಎಂದು ಅಲ್ಬಿನ್ ಕುರ್ತಿ ಹೇಳಿದ್ದಾರೆ. “ನಮ್ಮ ಆದ್ಯತೆ ನ್ಯಾಯ ಮತ್ತು ಉದ್ಯೋಗಗಳು” ಎಂದು ಅವರು ಸಾರಿದ್ದಾರೆ.

ಕೊಸೊವೊದಾ 120 ಸ್ಥಾನಗಳ ಸಂಸತ್ತಿನಲ್ಲಿ ಅಲ್ಬಿನ್ ಕುರ್ತಿಗೆ ಅಗತ್ಯವಾದ 61 ಸ್ಥಾನಗಳು ದಕ್ಕಿಲ್ಲ. ಆದರೆ ಸೋತ ಮುಖ್ಯ ವಿರೋಧ ಪಕ್ಷಗಳೊಂದಿಗೆ ಯಾವುದೇ ಮೈತ್ರಿ ಇರುವುದಿಲ್ಲ, ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊಸೊವೊ ದೇಶವು 2008 ರಲ್ಲಿ ಸೆರ್ಬಿಯಾದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೆಚ್ಚಿನ ಪಾಶ್ಚಿಮಾತ್ಯ ರಾಷ್ಟ್ರಗಳು ಕೊಸೊವೊವನ್ನು ರಾಷ್ಟ್ರವೆಂದು ಒಪ್ಪಿಕೊಂಡಿವೆ. ಆದರೆ ಸೆರ್ಬಿಯಾ ಮತ್ತು ಅದರ ಮಿತ್ರ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ಇದನ್ನು ಒಪ್ಪುವುದಿಲ್ಲ.

ಇದನ್ನೂ ಓದಿ: ಗ್ರೇಟಾ ಥನ್ಬರ್ಗ್ “ಟೂಲ್ಕಿಟ್” ಪ್ರಕರಣ : ಬೆಂಗಳೂರಿನ ಯುವ ಹೋರಾಟಗಾರ್ತಿ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights