ದಿಶಾ ರವಿ ಬಂಧನಕ್ಕೆ ವಿರೋಧ; ಮಂಡ್ಯದಲ್ಲಿ ಮಹಿಳಾ ಮುನ್ನಡೆ ಪ್ರತಿಭಟನೆ!

ಟೂಲ್‌ಕಿಟ್‌ ಪ್ರಕರಣದಲ್ಲಿ ಬಂಧಿತಳಾಗಿರುವ 21 ವರ್ಷದ ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಅವರ ಬಂಧನವನ್ನು ವಿರೋಧಿಸಿ ಮಹಿಳಾ ಮುನ್ನಡೆ ಸಂಘಟನೆಯ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು ಮೂಲದ ಯುವತಿಯನ್ನು ದೆಹಲಿ ಪೊಲೀಸರು ಬೆಂಗಳೂರಿಗೆ ಬಂದು ಏಕಾಏಕಿ ಬಂಧಿಸಿದ್ದಾರೆ. ಬೆಂಗಳೂರಿನ ಪೊಲೀಸರಿಗೆ ಮಾಹಿತಿಯನ್ನೂ ನೀಡದೇ ಅನ್ಯ ರಾಜ್ಯದ ಪೊಲೀಸರು ದಿಶಾ ಅವರನ್ನು ಬಂಧಿಸಿರುವ ನಡೆ ಖಂಡನಾರ್ಹ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಸರ್ವಾಧಿಕಾರಿ ನಡೆಯನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸರ ಕಾಳಜಿಯುಳ್ಳ ದಿಶಾ ರವಿ ಅವರು ಜಾಗತಿಕ ತಾಪಮಾನ ವಿಚಾರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ಸ್ಪೀಡನ್ ದೇಶದ ಗ್ರೇಟಾ ಥನ್ ಬರ್ಗ್ ಮತ್ತು ದಿಶಾ ಇಬ್ಬರು ಸಹ ಪಯಣಿಗರು. ದಿಶಾ ಮತ್ತು ಗ್ರೆಟಾ ಕೂಡಿ ಪ್ರತಿ ಶುಕ್ರವಾರ ‘ಭವಿಷ್ಯಕ್ಕಾಗಿ ಶುಕ್ರವಾರ’ ಎಂಬ ಹೆಸರಿನಲ್ಲಿ ಶಾಲಾ ಹವಾಮಾನ ಮುಷ್ಕರ ಆಂದೋಲನವನ್ನು 2019 ರಲ್ಲಿ ಸಂಘಟಿಸುತ್ತಿದ್ದಾರೆ. ಈ ಆಂದೋಲನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿದ್ದಾರೆ. ಇಂತಹ ಹೋರಾಟ ನಡೆಸುತ್ತಿರುವ ದಿಶಾ ನಮ್ಮ ದೇಶದ ಹೆಮ್ಮೆ ಎಂದು ಹಿರಿಯ ವಕೀಲ ಬಿ.ಟಿ. ವಿಶ್ವನಾಥ್‌ ಹೇಳಿದ್ದಾರೆ.

ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿರುವ ಗ್ರೇಟಾ ಅವರನ್ನು ಸ್ವೀಡನ್‌ ಸರ್ಕಾರ ಆತಿಥ್ಯದಲ್ಲಿ ನಡೆಸಿಕೊಂಡರೆ, ಭಾರತದಲ್ಲಿ ದಿಶಾ ಅವರನ್ನು ಖೈದಿಯನ್ನಾಗಿ ನಡೆದಿಕೊಳ್ಳಲಾಗುತ್ತಿದೆ. ಸರ್ಕಾರ ದಿಶಾರನ್ನು ಬಂಧಿಸಿದೆ. ಇದು ಅಲ್ಲಿನ ಸರ್ಕಾರದ ಧೋರಣೆಗೂ ಇಲ್ಲಿನ ಸರ್ಕಾರದ ಧೋರಣೆಗೂ ಇರುವ ವ್ಯತ್ಯಾಸವನ್ನು ತೋರಿಸುತ್ತದೆ. ದಿಶಾರವರನ್ನು ಸನ್ಮಾನಿಸ ಬೇಕಾದ ಜಾಗದಲ್ಲಿ ಅವರನ್ನು ಖೈದಿಯಾಗಿ ಭಂದಿಸಿರುವುದು ಇಡೀ ವಿಶ್ವದ ಮುಂದೆ ಭಾರತ ತಲೆ ತಗ್ಗಿಸುವಂತೆ ಕೃತ್ಯ ಎಂದು ಅವರು ಹೇಳಿದ್ದಾರೆ.

ಇಲ್ಲಿನ ಮಾಧ್ಯಮಗಳು ದಿಶಾರವರನ್ನು ಭಯೋತ್ಪಾದಕಿ, ದೇಶದ್ರೋಹಿ ಎಂದು ಬಿಂಬಿಸುತ್ತಿರುವುದು ನಿಜವಾಗಲೂ ನಾಚಿಕೇಡಿನ ವಿಷಯ. ನಮ್ಮ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ವಾಧಿಕಾರಿ ತನದಿಂದಾಗಿ ಇಲ್ಲಿನ ವಾಕ್‌ಸ್ವಾತಂತ್ರ್ಯ,ಪ್ರಜಾಪ್ರಭುತ್ವ ಹಾಗೂ ಹಾಗೂ ಸಂವಿಧಾನದ ಆಶಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ರೈತರ, ಕಾರ್ಮಿಕರ, ದಲಿತರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ, ದಾಳಿಯನ್ನು ಖಂಡಿಸಿ ಧ್ವನಿಎತ್ತುವ ಪ್ರತಿಯೊಬ್ಬರನ್ನು ದೇಶದ್ರೋಹಿಗಳ ಸಾಲಿಗೆ ಸೇರಿಸಿ ಬಂಧಿಸುತ್ತಿರುವುದು ಫ್ಯಾಸಿಸ್ಟ್‌ ಆಳ್ವಿಕೆಯ ಪ್ರತೀಕವಾಗಿದೆ ಎಂದು ಮಹಿಳಾ ಮುನ್ನಡೆಯ ಕಾರ್ಯದರ್ಶಿ ಕಮಲಾ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯು ಹೆಚ್ಚು ದಿನ ನಡೆಯುವುದಿಲ್ಲ. ಇಡೀ ದೇಶದ ಜನರು ಹೆಚ್ಚೆತ್ತುಕೊಳ್ಳುತ್ತಿದ್ದಾರೆ. ಪ್ಂಜಾಬ್ ಮಾದರಿಯನ್ನು ಅನುಸರಿಸಿ ಬಿಜೆಪಿ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಹಾಗಾಗಿ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಬಿಜೆಪಿ ಸರ್ಕಾರ ನಿಲ್ಲಿಸಬೇಕು.  ಹೋರಾಟಗಾರರ ಮೇಲಿನ ಸುಳ್ಳು ಕೇಸುಗಳನ್ನು ರದ್ದು ಮಾಡಿ ಎಲ್ಲರನ್ನೂ ಬಿಡುಗಡೆ ಗೊಳಿಸಬೇಕು. ಇಲ್ಲವಾದಲ್ಲಿ ದೆಹಲಿ ಮಾದರಿಯ ಹೋರಾಟಗಳು ಎಲ್ಲ ಕಡೆ ಪ್ರಾರಂಭವಾಗುತ್ತವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಮಹಿಳಾ ಮುನ್ನಡೆಯ ಅಂಜಲಿ, ಈಶ್ವರಿ, ಕರ್ನಾಟಕ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಸಂಜೆ ಸಮಾಚಾರ ಪತ್ರಿಕೆ ನಾಗೇಶ್, ಸಂತೋಷ್, ಪ್ರಕಾಶ್, ಕರ್ನಾಟಕ ಶ್ರಮಿಕ ಶಕ್ತಿಯ ಸುಬ್ರಮಣ್ಯ, CITU ನ ಕುಮಾರಿ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: ದಿಶಾ ಬಂಧನ: ನಮ್ಮ ಶಕ್ತಿಯನ್ನು ಮರೆತಿದ್ದೇವೆ; ಈಗಲಾದರೂ ಸದ್ದು ಮಾಡೋಣ: ದಿಶಾ ಬೆಂಬಲಕ್ಕೆ ನಟಿ ರಮ್ಯಾ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights