ತನ್ನ ಸಾವಿಗೆ 03 ಕೃಷಿ ಕಾಯ್ದೆಗಳೇ ಕಾರಣ: ಪತ್ರ ಬರೆದಿಟ್ಟು ರೈತ ಆತ್ಮಹತ್ಯೆ!

ತನ್ನ ಸಾವಿಗೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳೇ ಕಾರಣ ಎಂದು ಪತ್ರ ಬರೆದಿಟ್ಟು ಪ್ರತಿಭಟನಾನಿರತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿಕ್ರಿ ಗಡಿಯ ಪ್ರತಿಭಟನಾ ಸ್ಥಳದಿಂದ ಏಳು ಕಿ.ಮೀ ಅಂತರದಲ್ಲಿ ನಡೆದಿದೆ.

ಹರಿಯಾಣದ ಹಿಸಾರ್‌ ಜಿಲ್ಲೆಯ 49 ವರ್ಷದ ರಾಜ್ಬೀರ್‌ ಹಿಸಾರ್ ಎಂಬ ರೈತ ಮರವೊಂದಕ್ಕೆ ನೇಣು ಬಿಗಿದುಕೊಂಡು ಭಾನುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಹದ್ದೂರ್‌ ನಗರ ಪೊಲೀಸರು ತಿಳಿಸಿದ್ದಾರೆ.

ರಾಜ್ಬೀರ್ ಅವರು ತಮ್ಮ ಸಾವಿಗೂ ಮುನ್ನ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದು, ಕೇಂದ್ರದ ಇತ್ತೀಚಿನ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿರುವುದರಿಂದಾಗಿ ತಾವು ನೊಂದಿರುವುದಾಗಿ ಬರೆದಿದ್ದಾರೆ. ಮೂರು ಕಾಯ್ದೆಗಳನ್ನೂ ರದ್ದುಪಡಿಸುವ ಮೂಲಕ ಕೇಂದ್ರವು ತನ್ನ ಕೊನೆಯ ಆಶಯವನ್ನು ಈಡೇರಿಸಬೇಕು ಎಂದು ಅವರು ಕೇಳಿದ್ದಾರೆ.

ಕಳೆದ ತಿಂಗಳು, ಇದೇ ಟಿಕ್ರಿ ಗಡಿಯಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದ ಹರಿಯಾಣದ ಜಿಂದ್‌ ಮೂಲದ ರೈತ ಪ್ರತಿಭಟನಾ ಸ್ಥಳದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅದಕ್ಕೂ ಮುನ್ನ,ಹರಿಯಾಣದ ಇನ್ನೊಬ್ಬ ರೈತ ಟಿಕ್ರಿ ಗಡಿಯಲ್ಲಿ ವಿಷಕಾರಿ ವಸ್ತುವನ್ನು ಸೇವಿಸಿದ್ದರು. ಅವರನ್ನು  ದೆಹಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಅಲ್ಲದೆ, ದೆಹಲಿ ಗಡಿಯಲ್ಲಿ ರೈತರ ಹೋರಾಟ ಆರಂಭವಾದಾಗಿನಿಂದ ಇಲ್ಲಿಯವರೆಗೆ 200ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಕುರಿತು ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, 2020, ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020. ಈ ಮೂರು ಕಾಯ್ದೆಗಳನ್ನೂ ಸರ್ಕಾರ ಹಿಂಪಡೆಯಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದು, ರೈತರ ಪ್ರತಿಭಟನೆ 100 ದಿನಗಳನ್ನು ದಾಟಿದೆ.

ಇದನ್ನೂ ಓದಿ: ರೈತ ಹೋರಾಟಕ್ಕೆ 100 ದಿನ: ಸರ್ಕಾರದ ದಮನ vs ಪುಟಿದೇಳುತ್ತಿರುವ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights