ಹರಿಯಾಣ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ; ಬಹುಮತ ಗೆದ್ದು ಸರ್ಕಾರ ಉಳಿಸಿಕೊಂಡ BJP

ರೈತ ಹೋರಾಟದ ಹಿನ್ನೆಲೆಯಲ್ಲಿ ಹರಿಯಾಣ ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ಕಾಂಗ್ರೆಸ್ ಮಂಡಿಸಿದ್ದ‌ ಅವಿಶ್ವಾಸ ನಿರ್ಣಯವನ್ನು ಮನೋಹರ್ ಲಾಲ್ ಖಟ್ಟರ್ ಸರ್ಕಾರ ಸೋಲಿಸಿದ್ದು, ವಿಶ್ವಾಸ ಮತ ಗಳಿಸುವಲ್ಲಿ ಯಶಸ್ವಿಯಾಗಿದೆ.

90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ 88 ಶಾಸಕರಿದ್ದಾರೆ. ಈ ಪೈಕಿ ಬಿಜೆಪಿ 40 ಸ್ಥಾನಗಳನ್ನು ಹೊಂದಿತ್ತು. ಮಿತ್ರರಾಷ್ಟ್ರ ದುಶ್ಯಂತ್ ಚೌತಲಾ ಅವರ ಜನ್ನಾಯಕ್ ಜನತಾ ಪಕ್ಷ (ಜೆಜೆಪಿ) 10 ಶಾಸಕರು, ಕಾಂಗ್ರೆಸ್ 30 ಮತ್ತು 07 ಮಂದಿ ಸ್ವತಂತ್ರ ಶಾಸಕರಿದ್ದಾರೆ. ಇವರಲ್ಲಿ ಜೆಜೆಪಿ ಶಾಸಕರು ಮತ್ತು ಐವರು ಸ್ವತಂತ್ರ ಶಾಸಕರು ಸರ್ಕಾರವನ್ನು ಬೆಂಬಲಿಸಿದ್ದು, ಬಿಜೆಪಿ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ದೆಹಲಿ ಗಡಿಯಲ್ಲಿ ರೈತ ಹೋರಾಟ ಆರಂಭವಾದ ನಂತರ ಹರಿಯಾಣದಲ್ಲಿ ಹಲವಾರು ಹಳ್ಳಿಗಳು ಬಿಜೆಪಿ ಮತ್ತು ಬಿಜೆಪಿ ನಾಯಕರನ್ನು ಬಹಿಷ್ಕರಿಸಿವೆ. ಅಲ್ಲದೆ, ಸಾರ್ವಜನಿಕವಾಗಿ ಬಿಜೆಪಿ ವಿರುದ್ದ ಜನಾಭಿಪ್ರಾಯವೂ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತ ಪರವಿರುವ ಬಿಜೆಪಿ ಹಾಗೂ ಜೆಜೆಪಿ ಶಾಸಕರು ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಕರೆಕೊಟ್ಟಿದ್ದ ಕಾಂಗ್ರೆಸ್‌, ಹರಿಯಾಣದ ಬಿಜೆಪಿ ಸರ್ಕಾರವು ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತು ಪಡಿಸಬೇಕು ಎಂದು ಹೇಳಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು.

ಆದರೆ, ಬಿಜೆಪಿ, ಜೆಜೆಪಿ ಹಾಗೂ ಸ್ವತಂತ್ರ ಶಾಸಕರ ಬೆಂಬಲಿದಿಂದಾಗಿ ಕಟ್ಟರ್‌ ಅವರ ಸರ್ಕಾರ ಬಹುಮತವನ್ನು ಸಾಬೀತು ಪಡಿಸಿದ್ದು, ಸರ್ಕಾರವನ್ನು ಉಳಿಸಿಕೊಂಡಿದೆ.

“ಅವಿಶ್ವಾಸ ನಿರ್ಣಯವು ಯಾವ ಶಾಸಕರು ಸರ್ಕಾರದೊಂದಿಗೆ ನಿಂತಿದ್ದಾರೆ ಮತ್ತು ಯಾವ ಶಾಸಕರು ರೈತರೊಂದಿಗೆ ನಿಂತಿದ್ದಾರೆ ಎಂಬುದನ್ನು ಜನರಿಗೆ ತಿಳಿಸುತ್ತದೆ” ಎಂದು ಈ ಹಿಂದೆ ವಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದರು.

ಬಿಜೆಪಿ-ಜೆಜೆಪಿ ಸರ್ಕಾರವು “ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಂಡಿದೆ” ಮತ್ತು “ಸಾರ್ವಜನಿಕ ಅಭಿಪ್ರಾಯಕ್ಕೆ ದ್ರೋಹ ಬಗೆದಿರುವ ಒಕ್ಕೂಟ ಸರ್ಕಾರವು ಒಂದರ ನಂತರ ಒಂದರಂತೆ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ” ಎಂಬ ಕಾರಣಕ್ಕಾಗಿ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಲಿದೆ ಎಂದು ಹೂಡಾ ಈ ಮೊದಲು ತಿಳಿಸಿದ್ದರು.

ಇದನ್ನೂ ಓದಿ: ಒಂದು ದೇಶ- ಒಂದೇ ಚುನಾವಣೆ; ಸಾಂವಿಧಾನಿಕ ಸರ್ವಾಧಿಕಾರಕ್ಕೆ BJP ಸಂಚು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights