ಸಿಎಂ ಖುರ್ಚಿಗೆ ಸಂಚಕಾರ?; ನಿಜಕ್ಕೂ ಬಿಎಸ್ವೈಗೆ ಕೊರೊನಾ ಬಂದಿತ್ತಾ? ಇವೆ ಹಲವು ಅನುಮಾನಗಳು!
ದೇಶದಾದ್ಯಂತ ಕೊರೊನಾ ಸೋಂಕಿನ ಎರಡನೆ ಅಲೆ ತೀವ್ರ ರೀತಿಯಲ್ಲಿ ಹಬ್ಬುತ್ತಿದ್ದು, ಹಲವಾರು ರಾಜ್ಯಗಳಲ್ಲಿ ಸೋಂಕಿತರಿಗೆ ವೆಂಟಿಲೇಟರ್ ಹಾಸಿಗೆ, ಆಮ್ಲಜನಕ ಸಿಗದೇ ಇದ್ದರೂ, ಕೇಂದ್ರ ಸರ್ಕಾರ ಕೈಚೆಲ್ಲಿ ಕೂತಿದೆ. ರಾಜ್ಯದಲ್ಲಿ ಕೂಡಾ ಕೊರೊನಾ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಹೊತ್ತಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ಹೆಚ್ಚಿನ ಯಾವುದೆ ಸೌಲಭ್ಯಗಳನ್ನು ಮಾಡುತ್ತಿರುವಂತೆ ತೋರುತ್ತಿಲ್ಲ. ಎರಡನೆ ಬಾರಿಗೆ ಕೊರೊನಾ ಸೋಂಕು ಬಂದಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಯಡಿಯೂರಪ್ಪ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆದರೆ ತಜ್ಞ ವೈದ್ಯರುಗಳು ಒಬ್ಬ ಮನುಷ್ಯನಿಗೆ ಕೊರೊನಾ ಎರಡನೆ ಬಾರಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇರಬೇಕಾದರೆ ರಾಜ್ಯಪಾಲರು ಸರ್ವಪಕ್ಷಗಳ ಸಭೆಯನ್ನು ನಡೆಸಿ ಅನಧೀಕೃತವಾಗಿ ರಾಜ್ಯದ ಆಡಳಿತ ಯಂತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದು ರಾಜ್ಯದ ಮುಖ್ಯಮಂತ್ರಿಯ ಬದಲಾವಣೆಗೆ ವೇದಿಕೆ ತಯಾರಾಗುತ್ತಿದೆಯೆ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಬಿಜೆಪಿಯಲ್ಲಿ ಆಂತರಿಕ ಕಲಹ ನಡೆದಿದ್ದು, ರಾಜ್ಯಗಳು ತಮ್ಮ ಸ್ವಾಯತ್ತತೆ ಕಳೆದುಕೊಳ್ಳುವಂತೆ ಪಕ್ಷವು ಮಾಡುತ್ತಿದೆ ಎಂದು ಆರೋಪಗಳು ಎದ್ದಿದೆ. ಆರೋಪವನ್ನು ಸಮರ್ಥಿಸುವಂತೆ ಚುನಾಯಿತ ಸರ್ಕಾರ ಇದ್ದಾಗಲು ರಾಜ್ಯಪಾಲರು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಬಿಜೆಪಿ ಪಕ್ಷದೊಳಗೆ ಯಡಿಯೂರಪ್ಪ ವಿರುದ್ದ ಮೊದಲಿನಿಂದಲೂ ಅಸಮಧಾನಗಳು ಇದ್ದವು. ಹಲವಾರು ಬಿಜೆಪಿ ನಾಯಕರು ಬಹಿರಂಗವಾಗಿಯೆ ಯಡಿಯೂರಪ್ಪ ಅವರ ವಿರುದ್ದ ಕಿಡಿಕಾರಿದ್ದರು. ಬಿಜೆಪಿಯ ಉನ್ನತ ನಾಯಕರಿಗೂ ಬಿಎಸ್ವೈ ಮುಖ್ಯಮಂತ್ರಿ ಆಗುವುದು ಬೇಕಿರಲಿಲ್ಲ. ಆದರೆ ಯಡಿಯೂರಪ್ಪ ಅವರ ಜಾತಿ ಬಲ ಇವೆಲ್ಲವನ್ನು ಕಟ್ಟಿ ಹಾಕುವಂತಾಗಿತ್ತು.
ಸಮಾಜವಾದಿ ಅಧ್ಯಯನ ಕೇಂದ್ರ ಫೇಸ್ಬುಕ್ ಗ್ರೂಪ್ ನಡೆಸಿದ, ‘ಕೊರೊನಾ ಎರಡನೆ ಅಲೆ’ ಕುರಿತ ಸಂವಾದದಲ್ಲಿ ಮಂಗಳೂರಿನ ಖ್ಯಾತ ವೈದ್ಯರಾರ ಶ್ರೀನಿವಾಸ ಕಕ್ಕಿಲ್ಲಾಯ ಅವರು, ಒಬ್ಬ ಮನುಷ್ಯನಿಗೆ ಎರಡನೆ ಬಾರಿಗೆ ಕೊರೊನಾ ಸೋಂಕು ಬರುವುದಿಲ್ಲ ಎಂದು ಖಚಿತವಾಗಿ ಹೇಳಿದ್ದಾರೆ. ವಿಜ್ಞಾನಿಗಳ ವಲಯ ಕೂಡಾ ಎರಡನೆ ಬಾರಿ ಕೊರೊನಾ ಬರುವುದರ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದಲೇ ಮುಖ್ಯಮಂತ್ರಿ ಯಡಿಯೂಪ್ಪ ಅವರಿಗೆ ಎರಡನೆ ಬಾರಿ ಕೊರೊನಾ ಪಾಸಿಟಿವ್ ಆಗಿರುವುದು ಬಾರಿ ಅನುಮಾನಗಳನ್ನು ಮೂಡಿಸಿದೆ.
ಮುಖ್ಯಮಂತ್ರಿಗೆ ಎರಡನೆ ಬಾರಿಗೆ ಪಾಸಿಟಿವ್ ಎಂದು ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದ ನಂತರ ರಾಜ್ಯದಲ್ಲಿ ಆಡಳಿತ ಯಂತ್ರವನ್ನು ರಾಜ್ಯಪಾಲರು ಅನಧೀಕೃತವಾಗಿ ಕೈಗೆತ್ತಿಕೊಂಡಿದ್ದಾರೆ. ರಾಜ್ಯದಲ್ಲಿ ಒಂದು ಚುನಾಯಿತ ಸರ್ಕಾರ ಇರುವಾಗ ಮಂಗಳವಾರದಂದು ಕೊರೊನಾ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ರಾಜ್ಯಪಾರು ಕರೆದಿದ್ದರು. ಇದಕ್ಕೆ ಕಾಂಗ್ರೆಸ್ ಕೂಡಾ ಅನುಮಾನ ವ್ಯಕ್ತಪಡಿಸಿತ್ತು. ಅಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್, “ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥ್ಯವೇ ಅಥವಾ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನದ ಬಾಗವೇ? ಎಂದು ಪ್ರಶ್ನಿಸಿತ್ತು. ಜೊತೆಗೆ ಆಡಳಿತ ಪಕ್ಷದವರಾದ ಸಚಿವ ಈಶ್ವರಪ್ಪ ಕೂಡಾ ಸಭೆಯ ಬಗ್ಗೆ ಅಪಸ್ವರ ಎತ್ತಿದ್ದರು.
ಇಷ್ಟಕ್ಕೆ ನಿಲ್ಲದೆ ರಾಜ್ಯಪಾಲರು, ಬುಧವಾರದಂದು ಯುನಿವರ್ಸಿಟಿ ಸಭೆಗಳನ್ನು ಕೂಡಾ ತಮ್ಮ ಅಧ್ಯಕ್ಷತೆಯಲ್ಲಿ ನಡೆಸಿದ್ದಾರೆ.
ಇದನ್ನೂ ಓದಿ: ರಾಜೀನಾಮೆಗೆ ರೆಡಿಯಾದ ಈಶ್ವರಪ್ಪ!? ಯಡಿಯೂರಪ್ಪ ಪದಚ್ಯುತಿಗೆ RSS ಮೂಲದ BJPಗರ ಸಿದ್ದತೆ!?
ಮುಖ್ಯಮಂತ್ರಿ ಎರಡನೆ ಬಾರಿಗೆ ಕೊರೊನಾ ಎಂದು ಆಸ್ಪತ್ರೆಗೆ ದಾಖಲಾಗಿದ್ದರೂ ಅವರಿಗೆ, ಆಸ್ಪತ್ರೆಯಲ್ಲಿ ಅವರಿಗೆ ಕೇವಲ ‘ಜಿಂಕ್’ ಮಾತ್ರೆಗಳನ್ನು ಮಾತ್ರ ನೀಡಲಾಗುತ್ತಿದೆ ಎನ್ನಲಾಗಿದೆ. ಜೊತೆಗೆ ಅಲ್ಲಿ ಅವರ ಕೊರೊನಾ ಪರೀಕ್ಷೆಯನ್ನು ಕೂಡಾ ದಾಖಲಾಗಿರುವ ಆಸ್ಪತ್ರೆಯಲ್ಲಿ ನಡೆಸಿಲ್ಲ ಎನ್ನಲಾಗಿದ್ದು, ಹೊರಗಿನಿಂದ ಕೊರೊನಾ ಪರೀಕ್ಷೆ ನಡೆಸಿಲಾಗಿದೆ ಎಂದು ತಿಳಿದು ಬಂದಿದೆ. ಈ ಪರೀಕ್ಷೆಗಳ ವರದಿಯ ಬಗ್ಗೆ ಕೂಡಾ ಅನುಮಾನಗಳಿವೆ ಎಂದು ಮೂಲಗಳು ತಿಳಿಸಿವೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಯಡಿಯೂಪ್ಪ ಕೊರೊನಾ ಬಂದಿದೆ ಎಂದು ಒಂದೆ ಆಸ್ಪತ್ರೆಗೆ ಈ ಹಿಂದೆ ದಾಖಲಾಗಿದ್ದರು. ಒಂದು ಮೂಲಗಳ ಮಾಹಿತಿಯಂತೆ, ಅವರಿಬ್ಬರಿಗೂ ಆಗ ಕೊರೊನಾ ಬಂದಿರಲಿಲ್ಲ, ಆ ವೇಳೆ ಮುಖ್ಯಮಂತ್ರಿಯ ಕುರ್ಚಿ ಅಲುಗಾಡುತ್ತಿದ್ದು, ಸಿದ್ದರಾಮಯ್ಯ ನನ್ನ ಜೊತೆ ಇದ್ದಾರೆ ಎಂಬ ಸಂದೇಶವನ್ನು ಹೈಕಮಾಂಡ್ಗೆ ಕಳುಹಿಸುವ ಉದ್ದೇಶದಿಂದ ಇಬ್ಬರೂ ಒಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.
ಮತ್ತೊಂದು ಮೂಲದ ಪ್ರಕಾರ, “ಕಳೆದ ಬಾರಿ ಯಡಿಯೂರಪ್ಪ ಅವರ ಕುರ್ಚಿ ಅಲುಗಾಡುತ್ತಿದ್ದಾಗ ಕೊರೊನಾ ಎಂದು ಆಸ್ಪತ್ರೆಗೆ ದಾಖಲಾಗಿದ್ದು, ಆದರೆ ಅಂದು ಅವರಿಗೆ ಕೊರೊನಾ ಬಂದಿರಲಿಲ್ಲ. ಅದು ಅವರನ್ನು ಕಿತ್ತು ಹಾಕಲು ಭಾರಿ ಪ್ರಯತ್ನ ನಡೆದಿತ್ತು. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ಕೊರೊನಾದಿಂದ ರಾಜ್ಯವು ಸಂಕಷ್ಟಕ್ಕೆ ಈಡಾಗಿರುವ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಇದಾದೆಯು ಬಿಜೆಪಿಗೆ ಇಲ್ಲ, ಅಥವಾ ಬದಲಾವಣೆ ಮಾಡಿದರೆ ಅದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ. ಆದ್ದರಿಂದ ಕಳೆದ ಬಾರಿ ಕೊರೊನಾ ಬಂದಿದ್ದು ಸುಳ್ಳು ಎಂಬ ಅನುಮಾನವಿದ್ದರೂ, ಈ ಬಾರಿ ಕೊರೊನಾ ಬಂದಿದ್ದು ನಿಜವೆ ಆಗಿದೆ” ಎಂದು ತಿಳಿಸಿದೆ.
ಇದೀಗ ಮುಖ್ಯಮಂತ್ರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪರಿಸ್ಥತಿ ಕೆಟ್ಟದಾಗಿದೆ. ಜೊತೆಗೆ ರಾಜಕೀಯವು ನಡೆಯುತ್ತಿದೆ. ಒಟ್ಟಿನಲ್ಲಿ ‘ರಾಜಕೀಯ ಕೊರೊನಾ’ದಲ್ಲಿ ಯಡಿಯೂರಪ್ಪ ಬಲಿಯಾಗುತ್ತಾರೋ ಅಥವಾ ಹೈಕಮಾಂಡ್ಗೆ ಕೊರೊನಾ ಬರಿಸುತ್ತಾರೋ ಎಂದು ಕಾದು ನೋಡಬೇಕಾಗಿದೆ!
ಇದನ್ನೂ ಓದಿ: ನೂರಾರು ಕೋಟಿ ಆದಾಯ; ಆದರೂ, ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆದಿಲ್ಲ ಲೆಕ್ಕಪರಿಶೋಧನೆ!

