ಕೋಮು ಗಲಬೆಗೆ ಪ್ರಚೋದನೆ?; ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯುತ್ತೆ ಎಂದ ಪ್ರಕಾಶ್ ಬೆಳವಾಡಿ!
ಬಂಗಾಳ ಚುನಾವಣೆ ಮುಗಿದೆ, ಈಗಷ್ಟೇ ಫಲಿತಾಂಶ ಗೊತ್ತಾಗಿದೆ. ರಾಜ್ಯದಲ್ಲಿ ಗೆಲ್ಲುತ್ತೇವೆ ಎಂದು ಭಾರೀ ಅಬ್ಬರಿಸಿದ್ದ ಬಿಜೆಪಿ, ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆದ್ದಿಲ್ಲ. ಹೀಗಾಗಿ ಬಿಜೆಪಿಗರು ಹಾಗೂ ಬಿಜೆಪಿ ಬೆಂಬಲಿಗರು ಭಾರೀ ಅಸಮಾಧಾನಕ್ಕೆ ಒಳಗಾಗಿದ್ದಾರೆ. ಈ ಬೆನ್ನಲ್ಲೇ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ಕೋಮು ಗಲಬೆಗೆ ಪ್ರಚೋದನೆ ನೀಡುವಂತಹ ಪೋಸ್ಟ್ವೊಂದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅವರ ಪೋಸ್ಟ್ಅನ್ನು ಯಾವ ಅಯಾಮದಲ್ಲಿ ನೋಡಿದರೂ, ಅದು ಉದ್ರೇಕಕಾರಿ ಭಾಷೆ ಹೊಂದಿದೆ, ಅದರಲ್ಲಿ ಮುಸ್ಲಿಮರು ಅನ್ಯರು ಎಂಬ ವಾಸನೆ ಇದೆ. 2002 ರ ಗುಜರಾತ್ ಹತ್ಯಾಕಾಂಡದ ಸಮರ್ಥನೆಯಿದೆ. ಗೋಧ್ರಾ ಘಟನೆ ನಂತರ ನಾನು ಊಹಿಸಿದಂತೆ ಅಲ್ಲಿ ದೊಡ್ಡ ಪ್ರತೀಕಾರ ನಡೆಯಿತು ಎಂಬ ’ಹೆಮ್ಮೆಯೂ’ ಇದೆ.
ಅವರ ಪೋಸ್ಟಿನಲ್ಲಿ ಅಲ್ಪಸಂಖ್ಯಾತರ ಮೇಲೆ ’ಸಂಘಪರಿವಾರ’ ನಡೆಸುವ ದಾಳಿಗೆ ಪರೋಕ್ಷ ಬೆಂಬಲವಿದೆ. ಮೊದಲಿನಿಂದಲೂ ಬಿಜೆಪಿ ಆರಾಧಕರೇ ಆಗಿರುವ ಅವರು, ಈ ಮಟ್ಟಿಗೆ ಭಜರಂಗದಳದ ಪುಂಡರ ಭಾಷೆ ಬಳಸುತ್ತಾರೆ, ದ್ವೇಷ ಕಕ್ಕುತ್ತಾರೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈಗ ಅವರು ಗುಜರಾತ್ ಹತ್ಯಾಕಾಂಡ ಬಂಗಾಳದಲ್ಲಿ ನಡೆದೇ ನಡೆಯುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇಂಗ್ಲಿಷ್ನಲ್ಲಿ ಈ ಪೋಸ್ಟ್ ಇರುವ ಕಾರಣಕ್ಕೆ ಬಲಪಂಥೀಯರು ಹಾಗೂ ಬಿಜೆಪಿ ಬೆಂಬಲಿಗರು ಇದನ್ನು ಎಲ್ಲ ರಾಜ್ಯಗಳಿಗೂ ಹರಡತೊಡಗಿದ್ದಾರೆ.
ಅವರ ಪೋಸ್ಟ್ ಮೊದಲು ಓದಿ ಬಿಡಿ:
“27 ಫೆಬ್ರುವರಿ 2002 ರ ಬೆಳಿಗ್ಗೆ, ಗೋದ್ರಾ ಬಳಿ ರೈಲಿನಲ್ಲಿ 59 ಮಂದಿ ಕರಸೇವಕರನ್ನ ಸುಟ್ಟು ಕೊಂದಾಗ, ನನ್ನ ಒಬ್ಬ ಉದಾರವಾದಿ ನಿಲುವಿನ ಲಿಬರಲ್ ಗೆಳೆಯ – ಈಗ ಅವನ ಜೊತೆ ಗೆಳೆತನ ಇಲ್ಲ- ಅಹ್ಮದಾಬಾದಿನಿಂದ ಫೋನ್ ಮಾಡಿ, `ಇದು ಸಂಘಿಗಳಿಗೆ ಸರಿಯಾದ ಪಾಠ ಕಲಿಸುತ್ತದೆ’ ಅಂತ ಏನೋ ಹೇಳಿದ್ದ. ನಾನು ಹೇಳಿದ್ದೆ, ಇದಕ್ಕೆ ನೀಡಲಿರುವ ಪ್ರತೀಕಾರ ತ್ವರಿತವಾಗಿರುತ್ತದೆ ಮತ್ತು ಭೀಕರವಾಗಿರುತ್ತದೆ ಎಂದು. ಅದು ಹಾಗೇ ಆಯ್ತು.
ಹೌದು, ಗುಜರಾತಿನಲ್ಲಿ ಮುಸ್ಲಿಂ ಜನಸಂಖ್ಯೆ ಕೇವಲ 8% ಇರುವ ಕಾರಣ ಆ ಗಲಭೆ ಏಕಪಕ್ಷೀಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಬೇರೆ ಸನ್ನಿವೇಶವಿದೆ. ಮುಸ್ಲಿಮರು 30% ಇದ್ದಾರೆ. ಹೀಗಾಗಿ, ಪ್ರತೀಕಾರ ಅಷ್ಟೊಂದು ತ್ವರಿತವಾಗಿರುವುದಿಲ್ಲ. ಆದರೆ ತಪ್ಪು ತಿಳಿದುಕೊಳ್ಳಬೇಡಿ, ಅದು ಆಗಿಯೇ ಆಗುತ್ತದೆ. ಸಮಯ ಆದ ಹಾಗೆ ಹಿಂದು-ಮುಸ್ಲಿಂ ಗಲಭೆ ಏಳಲಿದೆ. ಅದು ಆದಾಗ, ಅದು ಬಹಳ ದುರಂತಮಯವಾಗಲಿದೆ, ಕ್ರೂರವಾಗಿರಲಿದೆ ಮತ್ತು ಸಂಘಟಿತವಾಗಿ ನಡೆಯಲಿದೆ.
ಈಗ ಬಹಳ ಶಾಂತ ರೀತಿಯಿಂದ ವರ್ತಿಸುವ ರಾಜ್ಯ ಸರ್ಕಾರ ಮತ್ತು ಲಿಬರಲ್ಗಳು, ’ಸಂಘಿಗಳಿಗೆ ಹಾಗೆ ಆಗಬೇಕು’ ಎಂತ ತಿಳಿದುಕೊಂಡಿದ್ದಾರೆ… ನಂತರ ಇವರೆಲ್ಲ ಲೆಕ್ಕಾಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತದೆ. ಈಗಾಗಲೇ ಇದನ್ನ ತಡೆಯಲು ಬಹಳ ತಡವಾಗಿದೆ” ಎಂದು ಪ್ರಕಾಶ್ ಬೆಳವಾಡಿ ಹೇಳಿದ್ದಾರೆ.
ಸರ್ಕಾರದ ಒಂದು ಕೋಟಿ ರೂ. ಅನುದಾನದಲ್ಲಿ ಭೈರಪ್ಪನವರ ’ಪರ್ವ’ ಕೃತಿಯನ್ನು ನಾಟಕವಾಗಿ ರೂಪಾಂತರಿಸುವ ಕೆಲಸದಲ್ಲಿರುವ ಪ್ರಕಾಶ್ ಅವರಿಗೆ, ಬಂಗಾಳ ಚುನಾವಣೆಯಲ್ಲಿ ಬಿಜೆಪಿಗಾದ ಹೀನಾಯ ಸೋಲು ತೀವ್ರವಾಗಿ ತಾಕಿದಂತಿದೆ.
ಚುನಾವಣಾ ಫಲಿತಾಂಶದ ನಂತರ ನೆಡೆಯುವ ಗಲಾಟೆಗಳನ್ನು ದೊಡ್ಡದು ಮಾಡಿ, ಹಳೆಯ ವಿಡಿಯೋಗಳನ್ನು ಹಾಕಿ, ’ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ’ ಎಂದು ಅಭಿಯಾನ ಮಾಡುತ್ತಿರುವ ಬಿಜೆಪಿಯ ಐಟಿ ಸೆಲ್ ಮತ್ತು ಅದರ ಬೆಂಬಲಿಗರ ಜಾಯಮಾನದಲ್ಲೇ ಪ್ರಕಾಶ ಬೆಳವಾಡಿಯವರ ಪೋಸ್ಟ್ ಕೂಡ ಇದೆ.
ಈ ಕುರಿತು ಫೇಸ್ಬುಕ್ ಮತ್ತು ಇತರ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಶರತ್ಚಂದ್ರ ಎನ್ನುವವರು, ’ಹಿಂದೆಯೂ ಎಫ್ಬಿಯಲ್ಲಿ ಅವರ ಪೋಸ್ಟ್ ಹೀಗೇ ಇದ್ದವಾದರೂ ನೇರವಾಗಿ ಸಂಘಪರಿವಾರದವರಂತೆ ಬರೆಯುತ್ತಿರಲಿಲ್ಲ. ಈಗ ತನ್ನ ನಿಜ ಮುಖದ ದರ್ಶನ ಮಾಡಿದ್ದಾರೆ ಈ ಬೆಳವಾಡಿ. ಈಗ ತನ್ನ ಪ್ರೊಫೈಲ್ ಅನ್ನೂ ಡಿ-ಆಕ್ಟಿವೇಟ್ ಮಾಡಿಕೊಂಡಿದ್ದಾರೆ’ ಎಂದು ಬರೆದಿದ್ದಾರೆ. ಈ ಪೋಸ್ಟ್ಗೆ ಬಂದ ಪ್ರತಿಕ್ರಿಯೆಗಳಲ್ಲಿ ಬೆಳವಾಡಿ ಅವರ ’ಸಂಘಪರಿವಾರ’ದ ಮನಸ್ಥಿತಿಯನ್ನು ಟೀಕಿಸಲಾಗಿದೆ.
Read Also: ‘ರಾಜ್ಯದಲ್ಲಿನ ಆಕ್ಸಿಜನ್ ಕೊರತೆ ಸಾವುಗಳಿಗೆ ಸರ್ಕಾರವೇ ನೇರ ಹೊಣೆ’ ಡಿ.ಕೆ ಶಿವಕುಮಾರ್

