ಪಂಚರಾಜ್ಯ ಚುನಾವಣೆ: ಬಿಜೆಪಿಯ ನಿರೀಕ್ಷೆ ಈಡೇರದಿದ್ದರೂ.. ಯೋಜನೆ ಫಲಿಸುತ್ತಿದೆ!

ಮೋದಿ ಸರ್ಕಾರದ ದುರಹಂಕಾರ ಮತ್ತು ಬೇಜವಾಬ್ದಾರಿಗಳಿಂದಾಗಿ ಜನರು ಎಲ್ಲೆಡೆ ಕೋವಿಡ್‌ಗೆ ಬಲಿಯಾಗುತ್ತಿರುವುದರ ಪರಿಣಾಮ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣ ಫಲಿತಾಂಶದಲ್ಲೂ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಕೋವಿಡ್ ಸೋಂಕಿನ ಅಸಾಮಾನ್ಯ ಏರಿಕೆಯ ನಡುವೆಯೂ ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೆ ಮೋದಿ ಸರ್ಕಾರದ ನೇರ ನಿರ್ದೇಶನದಂತೆ ಚುನಾವಣಾ ಅಯೋಗ ಪ. ಬಂಗಾಳದಲ್ಲಿ 8 ಸುತ್ತಿನ ಚುನಾವಣೆ ನಡೆಸಿತು. ಅಲ್ಲಿ ಬಿಜೆಪಿ ತನ್ನ ನಿರೀಕ್ಷೆಯಂತೆ ಸೀಟುಗಳನ್ನಾಗಲೀ, ಓಟುಗಳನ್ನಾಗಲೀ ಪಡೆಯದಿರಲೂ ಇರುವ ಹಲವು ಕಾರಣಗಳಲ್ಲಿ ಜನರ ಆರೋಗ್ಯದ ಬಗ್ಗೆ ಮೋದಿ ಸರ್ಕಾರ ತೋರಿದ ಈ ಅಕ್ಷಮ್ಯ ನಿರ್ಲಕ್ಷವೂ ಒಂದು ಕಾರಣವಾಗಿದೆ. ಹಾಗೆಯೇ ಕೇರಳದಲ್ಲಿ ಪಿನರಾಯ್ ವಿಜಯನ್ ಅವರ ನೇತೃತ್ವದ ಎಡರಂಗ ಸರ್ಕಾರ ಸತತವಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಕಾರಣವಾದ ಹಲವಾರು ಕಾರಣಗಳಲ್ಲಿ ಶೈಲಜಾ ಟೀಚರ್ ಮತ್ತು ವಿಜಯನ್ ಸರ್ಕಾರ ಕೋವಿಡ್ ಅನ್ನು ಬಿಜೆಪಿ ಸರ್ಕಾರಗಳಿಗಿಂತ ಉತ್ತಮವಾಗಿ ನಿಭಾಯಿಸಿದ್ದೂ ಒಂದು ಕಾರಣವಾಗಿದೆ.

ಅದೇನೇ ಇರಲಿ. ಈಗ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಹೊರಬಿದ್ದಿದೆ. ಪ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಗೆಲುವಿನ ಪ್ರಮಾಣ ಹಾಗೂ ಬಿಜೆಪಿಯ ಸಾಧನೆಯ ಸೀಮಿತತೆ ಮೂಡಿಸಿರುವ ಅಚ್ಚರಿಯನ್ನು ಹೊರತುಪಡಿಸಿದರೆ ಒಟ್ಟಾರೆ ಚುನಾವಣಾ ಫಲಿತಾಂಶಗಳು ನಿರೀಕ್ಷೆಯಂತೆಯೇ ಇವೆ.
ಪ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷ ಎಲ್ಲರ ನಿರೀಕ್ಷೆಯನ್ನು ಸುಳ್ಳುಮಾಡಿ ಹಿಂದೆಂದಿಗಿಂತಲೂ ಹೆಚ್ಚಿನ ಸೀಟುಗಳನ್ನೂ ( 294ರಲ್ಲಿ 213) ಹಾಗೂ ಓಟು ಶೇರುಗಳನ್ನೂ (48%) ಪಡೆದುಕೊಂಡು ಸತತ ಮೂರನೇ ಬಾರಿ ಅಧಿಕಾರ ರಚಿಸುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಕೂಟ ನಿರೀಕ್ಷೆಯಷ್ಟು ಸೀಟು ಹಾಗೂ ಓಟುಗಳನ್ನು ಪಡೆಯದಿದ್ದರೂ ಸರಳ ಬಹುಮತವನ್ನು ಸಾಧಿಸಿ ಅಧಿಕಾರವನ್ನು ಪಡೆದಿದೆ. ಕೇರಳದಲ್ಲಿ 40 ವರ್ಷಗಳ ಇತಿಹಾಸವನ್ನು ಮುರಿದು ಎಡರಂಗ ಸರ್ಕಾರ ಹೆಚ್ಚಿನ ಸೀಟು ಹಾಗೂ ಓಟು ಶೇರುಗಳ ಜೊತೆಗೆ ಸತತವಾಗಿ ಎರಡನೇ ಬಾರಿಗೆ ಸರ್ಕಾರ ರಚಿಸುತ್ತಿದೆ. ಅಸ್ಸಾಮಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬಂದರೂ ಸೀಟು ಹಾಗೂ ಓಟುಗಳ ಸಂಖ್ಯೆ ಮೊದಲಿಗಿಂತ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ದ್ರಾವಿಡ ರಾಜಕಾರಣದ ನೆರಳಲ್ಲೇ ಇರುವ ಪುದುಚೇರಿಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಸಹಭಾಗಿಯಾಗಿರುವ ಕೂಟ ಅಧಿಕಾರಕ್ಕೆ ಬರುತ್ತಿದೆ.

ಸೀಟು ಶೇರುಗಳ ಸಂಖ್ಯೆಗಳನ್ನು ಮಾತ್ರ ಗಮನಿಸಿದಲ್ಲಿ ಇದು ಬಿಜೆಪಿ ಮಾಡುತ್ತಿದ್ದ ಅಬ್ಬರ ಹಾಗೂ ಗೋದಿ ಮಾಧ್ಯಮಗಳು ನಿಜೆವೆಂದು ನಂಬಿಸುತ್ತಿದ್ದ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿದೆ ಎಂದೆನಿಸುವಂತಿದೆ.

ಅದರಲ್ಲೂ ಪ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿರಲಿ, ಮೂರಂಕಿಯ ಗಡಿಯನ್ನೂ ದಾಟದೆ ಕೇವಲ 77 ಸೀಟುಗಳಿಗೆ ಸೀಮಿತವಾಗಿದ್ದು ನೆಮ್ಮದಿ ಬಯಸುವ ಜನರಲ್ಲಿ ಒಂದು ದೊಡ್ಡ ನಿರಾಳವನ್ನು ಮೂಡಿಸಿದೆ. ಹಾಗೆಯೇ ಕೇರಳ ಹಾಗೂ ತಮಿಳುನಾಡಿನ ಫಲಿತಾಂಶಗಳೂ ಕೂಡಾ. ಈ ತಾತ್ಕಾಲಿಕ ನಿರಾಳತೆಯನ್ನು ಒದಗಿಸಿದಕ್ಕೆ ಈ ದೇಶ ಆ ಎಲ್ಲಾ ರಾಜ್ಯಗಳ ಜನರ ಪ್ರಜ್ನಾಶೀಲತೆಗೆ ಅಭಿನಂದನೆಗಳನ್ನು ತಿಳಿಸಬೇಕು.

ಇದು ಫ್ಯಾಸಿಸಂನ ಅವನತಿಯ ಪ್ರಾರಂಭವೇ?

ಆದರೆ, ಈ ನಿರಾಳವೂ ಅತಾರ್ಕಿಕ ಸಂಭ್ರಮಕ್ಕೂ ಅತಿಯಾದ ನಿರೀಕ್ಷೆಗಳಿಗೂ ಎಡೆಮಾಡಿಕೊಡುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಈ ಸಂಭ್ರಮವು ಗೆದ್ದವರ ಗೆಲುವನ್ನೂ ಉತ್ಪ್ರೇಕ್ಷಿಸಿ ಅರ್ಥಮಾಡಿಕೊಳ್ಳುವ ಹಾಗೂ ಬಿಜೆಪಿಯ ಸೋಲನ್ನು ಅದರ ಫ್ಯಾಸಿಸ್ಟ್ ರಾಜಕಾರಣದ ಅವನತಿಯ ಪ್ರಾರಂಭ ಎಂದೆಲ್ಲಾ ಅಂದಾಜಿಸುವ ಅತಿರೇಕಗಳನ್ನೂ ಹುಟ್ಟುಹಾಕುತ್ತಿದೆ.

ದುರದೃಷ್ಟವಶಾತ್, ಈ ಫಲಿತಾಂಶಗಳ ಮತೊಂದು ಮುಖವನ್ನು ನಿಷ್ಪಕ್ಷಪಾತವಾಗಿ ವಿಶ್ಲೇಷಿಸುವುದಾದಲ್ಲಿ ಬಿಜೆಪಿಯ ಉತ್ಪ್ರೇಕ್ಷಿತ ಅಂದಾಜುಗಳು ಸುಳ್ಳಾಗಿವೆಯೇ ವಿನಾ ಅವರ ಯೋಜನೆಗಳಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ . ವಾಸ್ತವದಲ್ಲಿ ಅವರ ಯೋಜಿತ ಹಿಂದೂತ್ವ ಮಧ್ಯಪ್ರವೇಶಗಳು ನಿಧಾನವಾಗಿ ಫಲಕೊಡುತ್ತಿವೆ ಎಂಬುದನ್ನೂ ಸಹ ಈ ಫಲಿತಾಂಶಗಳು ಮತ್ತೊಮ್ಮೆ ನಿರೂಪಿಸುತ್ತವೆ.

ಪ.ಬಂಗಾಳ- ಅತ್ತ ದರಿ, ಇತ್ತ ಪುಲಿ?!

ಉದಾಹರಣೆಗೆ, ಪ. ಬಂಗಾಳದಲ್ಲಿ 2016ರ ಚುನಾವಣೆಯ ವೇಳೆಯಲ್ಲಿ ಕೇವಲ ಶೇ. 10 ರಷ್ಟು ಓಟುಗಳನ್ನು ಮತ್ತು ಮೂರು ಸೀಟುಗಳನ್ನು ಮಾತ್ರ ಹೊಂದಿದ್ದ ಬಿಜೆಪಿ ಈಗ ಶೇ. 38 ರಷ್ಟು ಓಟುಗಳನ್ನು 77 ಸೀಟುಗಳನ್ನು ಪಡೆದುಕೊಂಡು ಏಕಮಾತ್ರ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. (ಪ. ಬಂಗಾಳದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಈ ಬಾರಿ ಎಡ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಒಬ್ಬರೂ ಪ. ಬಂಗಾಳದ ಅಸೆಂಬ್ಲಿಯಲ್ಲಿ ಇರುವುದಿಲ್ಲ). ಇದು 2019ರ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಪಡೆದುಕೊಂಡಿದ್ದ ಓಟುಗಳಿಗಿಂತ ಶೇ. 2 ರಷ್ಟು ಮಾತ್ರ ಕಡಿಮೆ. ಸಾಮಾನ್ಯವಾಗಿ ಪ್ರಬಲ ಪ್ರಾದೇಶಿಕ ಪಕ್ಷಗಳೆದುರು , ಅದರಲ್ಲೂ ಅತ್ಯಂತ ಜನಪ್ರಿಯವಾಗಿರುವ ಮಮತಾ ಬ್ಯಾನರ್ಜಿಯ ಎದುರು ಜನಮಾನ್ಯವಾದ ಒಂದು ಬಂಗಾಳಿ ಮುಖವೂ ಇಲ್ಲದೆಯೂ, ಬಿಜೆಪಿ ಪ. ಬಂಗಾಳದಲ್ಲಿ ಶೇ. 38ರಷ್ಟು ಓಟು ಶೇರುಗಳನ್ನು ಹೆಚ್ಚು ಕಡಿಮೆ ಸಧೃಡೀಕರಿಸಿಕೊಂಡಿದೆ.

ಇದಕ್ಕೆ ಇನ್ನೊಂದು ಆಯಾಮವೂ ಇದೆ. ಪ. ಬಂಗಾಳದಲ್ಲಿ ಶೇ. 30 ರಷ್ಟು ಅಂದರೆ ಹೆಚ್ಚೂ ಕಡಿಮೆ ಮೂರುಕೋಟಿ ಮುಸ್ಲಿಮ್ ಜನಸಂಖ್ಯೆ ಇದೆ. ಅವರೆಲ್ಲರೂ ಈ ಬಾರಿ ಪ್ರಪ್ರಧಮ ಬಾರಿಗೆ ಕಾಂಗ್ರೆಸ್, ಎಡಪಕ್ಷ ಹಾಗೂ ಹೊಸದಾಗಿ ಸ್ಪರ್ಧಿಸಿದ್ದ ಮುಸ್ಲಿಮ್ ಪಕ್ಷವೇ ಆಗಿದ್ದ ಐಎಸ್‌ಅಪ್ ಅನ್ನು ತಿರಸ್ಕರಿಸಿ ಮಮತಾ ಬ್ಯಾನರ್ಜಿಗೆ ಓಟು ಹಾಕಿದ್ದಾರೆ. ಅಂದರೆ ಮಮತಾ ಬ್ಯಾನರ್ಜಿಯ್ವರು ಪಡೆದಿರುವ ಶೇ. 48ರಷ್ಟು ಓಟುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮುಸ್ಲಿಮರ ಓಟಾಗಿದೆ.

ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಪಡೆದುಕೊಂಡಿರುವ 77 ಸೀಟುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೀಟುಗಳು ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಕ್ಷೇತ್ರಗಳ ಸೀಟುಗಳಾಗಿವೆ. ಹೀಗಾಗಿ ಬಿಜೆಪಿಯ ಒಟ್ಟಾರೆ ಓಟು ಶೇರು ಶೇ. 38 ಮಾತ್ರ ಆಗಿದ್ದರೂ, ಬಹುಸಂಕ್ಯಾತ ಹಿಂದೂಗಳ ಓಟಿನಲ್ಲಿ ಅದರ ಓಟು ಶೇರು ಹೆಚ್ಚಾಗಿಯೇ ಇದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ.ಬಂಗಾಳದಲ್ಲಿ ಅಧಿಕಾರ ರೂಢ ಪಕ್ಷಗಳು ಯಾವುದೇ ಇದ್ದರೂ- ಅದು ಸಿಪಿಎಂ ಆದರೂ ಸರಿ, ಟಿಎಂಸಿ ಆದರೂ ಸರಿ- ವಿರೋಧಿಗಳನ್ನು ಹಿಂಸಾತ್ಮಕವಾಗಿ ಬಗ್ಗುಬಡೆಯುವ ರಾಜಕೀಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡಿವೆ. 2011ರಲ್ಲಿ ಸಿಪಿಎಂ ನ ಈ ಹಿಂಸಾತ್ಮಕ ರಾಜಕೀಯದ ವಿರುದ್ಧವೇ ಟಿಎಂಸಿಯನ್ನು ಬಂಗಾಳದ ಜನತೆ ಗೆಲ್ಲಿಸಿದರು. ಆದರೆ ಅಧಿಕಾರಕ್ಕೆ ಬಂದಮೇಲೆ ಟಿಎಂಸಿ ಅದೇ ಬಗೆಯ ಟೈರನಿಯನ್ನು ಸಿಪಿಎಂ ಆದಿಯಾಗಿ ಎಲ್ಲಾ ವಿರೋಧಿಗಳ ಮೇಲೆ ಪ್ರಯೋಗಿಸುತ್ತಾ ಬಂದಿತು. ಹೀಗಾಗಿ ಟಿಎಂಸಿಯ ಹಿಂಸೆಯಿಂದ ಬಚಾವಾಗಬೇಕೆಂದರೆ ನಿತ್ರಾಣವಾಗಿರುವ ಸಿಪಿಎಂ ಆಗಲೀ, ಕಾಂಗ್ರೆಸ್ ಆಗಲೀ ಆಯ್ಕೆಯಲ್ಲವೆಂದು ಪರಿಗಣಿಸಿದ ಹಲವಾರು ಕಾಂಗ್ರೆಸ್ ಹಾಗೂ ಎಡಪಕ್ಷಗಳ ಬೆಂಬಲಿಗರು ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ಓಟು ಹಾಕಿದ್ದಾರೆ. ಈ ಬಾರಿ ರಾಮ್. ಆ ನಂತರ ವಾಮ್ ಎಂಬ ಜನಪ್ರಿಯ ಮಾತುಗಳು ಹಲವು ಕಡೆಯಿಂದ ಕೇಳಿಬರುತ್ತಿತ್ತೆಂದೂ ಪತ್ರಿಕೆಗಳು ವರದಿ ಮಾಡಿವೆ.

ಇದಲ್ಲದೆ ಈ ಫಲಿತಾಂಶವು ಬಿಜೆಪಿಯನ್ನೇ ಏಕೈಕ ವಿರೋಧ ಪಕ್ಷವನ್ನಾಗಿ ಮಾಡಿರುವುದರಿಂದ ಬರಲಿರುವ ದಿನಗಳಲ್ಲಿ ಟಿಎಂಸಿಯ ಪ್ರತಿಯೊಂದು ತಪ್ಪು ನಡೆಗಳು, ವೈಫಲ್ಯಗಳೂ, ಬಿಜೆಪಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಹಾಗೂ ಟಿಎಂಸಿಯ ಪ್ರಧಾನ ಬೆಂಬಲ ನೆಲೆಯಾಗಿರುವ ಮುಸ್ಲಿಮರ ವಿರುದ್ಧ ಬಿಜೆಪಿ ತನ್ನ ಕೋಮುವಾದಿ ದ್ವೇಶದ ರಾಜಕಾರಣವನ್ನು ವಿಸ್ಟೃತವಾಗಿ ನಡೆಸಲು ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಮೋದಿಯ ಫ್ಯಾಸಿಸ್ಟ್ ರಥಕ್ಕೆ ಈ ಚುನಾವಣೆ ಒಡ್ಡಿರುವುದು ಕೇವಲ ಒಂದು ರೋಡ್ ಹಂಪೇ ಹೊರತು ತಡೆಗೋಡೆಯಲ್ಲ. ಏಕೆಂದರೆ ಫ್ಯಾಸಿಸ್ಟ್ ರಾಜಕಾರಣವನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಎದುರಿಸುವ ಸಿಧಾಂತವಾಗಲೀ, ರಾಜಕೀಯವಾಗಲೀ ಟಿಎಂಸಿ ಗಿಲ್ಲ.

ಇನ್ನು ಸತತ 30ವರ್ಷ ಅಧಿಕಾರ ನಡೆಸಿದ ಕ್ಯಾಡರ್ ಮತ್ತು ಸಿದ್ಧಾಂತ ಆಧರಿತ ಪಕ್ಷವಾದ ಸಿಪಿಎಂ ಕೇವಲ ಹತ್ತು ವರ್ಷದಲ್ಲಿ ಶೇ. 5ರಷ್ಟು ಮತಗಳನ್ನೂ ಗಳಿಸದೇ ರಾಜಕೀಯ ಪ್ರಪಾತಕ್ಕೆ ಕುಸಿಯಲು ಕಾರಣವನ್ನು ಹೊರಗೆ ಹುಡುಕದೆ ತನ್ನೊಳಗೆ ಹುಡುಕುತ್ತಾ, ಆಳವಾದ ಆತ್ಮವಿಮರ್ಶೆ ಮಾಡಿಕೊಂಡು, ತಿದ್ದುಕೊಂಡು ಮರಳುವ ಯಾವ ಭರವಸೆಯನ್ನೂ ಕಳೆದ ಹತ್ತು ವರ್ಷಗಳಲ್ಲಿ ಒದಗಿಸಿಲ್ಲ. ಅದರ ಪರಿಣಾಮವೇ ಅದರ ಇಂದಿನ ಸ್ಥಿತಿ.

ಇನ್ನೂ ಕಾಂಗ್ರೆಸ್ ಬಗ್ಗೆ ಏನೂ ಹೇಳದಿರುವುದೇ ಒಳಿತು..

ಕೇರಳ- ಹೆಚ್ಚುತ್ತಿರುವ ಹಿಂದೂ ಓಟ್ ಬ್ಯಾಂಕ್

ಹಾಗೆಯೇ ಕೇರಳದಲ್ಲಿ ಈ ಸದ್ಯಕ್ಕೆ ಬಿಜೆಪಿ ರಾಜಕೀಯವಾಗಿ ಅಧಿಕಾರಕ್ಕೇರುವ ಕನಸು ಕಾಣಲು ಸಾಧ್ಯವಿಲ್ಲ ಎಂಬುದು ನಿಜವಾದರೂ, ಕಳೆದ ಹಲವಾರು ದಶಕಗಳಿಂದ ಮಹಾರಾಷ್ಟ್ರವನ್ನು ಬಿಟ್ಟರೆ ಅತಿ ಹೆಚ್ಚು ಆರೆಸ್ಸೆಸ್ ಶಾಕೆಗಳು ಕೆಲಸ ಮಾಡುತ್ತಿರುವುದು ಕೇರಳದಲ್ಲೇ. ಆ ನಿರಂತರ ಪ್ರಯತ್ನದ ಭಾಗವಾಗಿಯೇ, ಕಳೆದ ಒಂದು ದಶಕದಲ್ಲಿ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯ ಓಟು ಶೇರು ಶೇ. 10ಕ್ಕಿಂತ ಜಾಸ್ತಿಯೇ ಇದೆ. ಅಷ್ಟು ಮಾತ್ರವಲ್ಲ. ಹಲವಾರು ಕ್ಷೇತ್ರಗಳಲ್ಲಿ ಅದು ಎರಡನೇ ಅಥವಾ ಮೂರನೆಯ ಸ್ಥಾನದಲ್ಲಿರುತ್ತಿದೆ.
ಈ ಬಾರಿ ವಿಜಯನ್ ಸರ್ಕಾರದ ಬಗ್ಗೆ ಮೂಡಿದ ಗುಡ್ ವಿಲ್ ನ ನಡುವೆಯೂ ಬಿಜೆಪಿಯ ಓಟು ಶೇರು 2016ಕ್ಕೆ ಹೋಲಿಸಿದಲ್ಲಿ ಲಕ್ಷಗಳಲ್ಲಿ ಹೆಚ್ಚಿದೆ. ಅಷ್ಟು ಮಾತ್ರವಲ್ಲ. ಕೇವಲ ಹಿಂದೂಗಳ ಓಟು ಶೇರನ್ನು ಮಾತ್ರ ಪರಿಗಣಿಸಿದಲ್ಲಿ, ಅದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಗೆ ಹತ್ತಿರವಾಗಿದೆ (2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಒಟ್ಟಾರೆಯಾಗಿ ಶೇ. 14ರಷ್ಟು ಓಟುಗಳನ್ನು ಮಾತ್ರ ಪಡ್ವೆದುಕೊಂಡಿದ್ದರೂ, ಶೇ. 35 ರಷ್ಟು ಹಿಂದೂ ಓಟುಗಳ ಪಾಲು ಪಡೆದಿತ್ತು ). ಇದೆಲ್ಲಕ್ಕಿಂತ ಮುಖ್ಯವಾಗಿ ಅದು ರಾಷ್ಟ್ರೀಯ ಮಟ್ಟದಲ್ಲಿ ಹುಟ್ಟುಹಾಕುವ ಹಿಂದೂತ್ವ ಅಜೆಂಡಾಗಳಿಗೆ, ಉದಾಹರಣೆಗೆ ಶಬರಿ ಮಲೈ ಪ್ರವೇಶ ಇತ್ಯಾದಿ, ಕಾಂಗ್ರೆಸ್ಸೂ ಕೂಡಾ ಪರೋಕ್ಷ ಕುಮ್ಮಕ್ಕು ಕೊಡುತ್ತಾ ಬಂದಿದೆ. ಇಂದು ಕೇರಳದ ನಾಯರ್ ಇನ್ನಿತ್ಯಾದಿ ಪ್ರಬಲ ಜಾತಿ ಸಮುದಾಯಗಳಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿಯ ಪ್ರಭಾವ ವಿಸ್ತರಿಸುತ್ತಿದೆ. ಮತ್ತೊಂದು ಕಡೆ ಎಡರಂಗದ ಜಾತಿಗುರುಡು ರಾಜಕೀಯದಿಂದಾಗಿ ಉಪೇಕ್ಷಿತ ದಮನಿತ ಜಾತಿಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನವೂ ಬಿಜೆಪಿ-ಆರೆಸ್ಸೆಸ್ ಗಳ ಕಾರ್ಯಕ್ಷೇತ್ರವಾಗುವ ಸಾಧ್ಯತೆ ಇದೆ. ಇದನ್ನು ವಿಫಲಗೊಳಿಸುವ ಯಶಸ್ವೀ ಸಾಮಾಜಿಕ ಅಜೆಂಡಾ ಇಲ್ಲದೆ ಕೇರಳದಲ್ಲಿ ಹಿಂದೂತ್ವದ ಮುನ್ನೆಡೆಯನ್ನು ಹೆಚ್ಚು ಕಾಲ ತಡೆಗಟ್ಟಲು ಕಮ್ಯುನಿಸ್ಟರಿಗೂ ಸಾಧ್ಯವಿಲ್ಲ. ಈ ಚುನಾವಣೆಯೂ ಅದನ್ನೇ ಸಾಬೀತು ಮಾಡಿದೆ.

ತಮಿಳುನಾಡು-ಹಿಂದೂತ್ವದ ನೆಲೆಯಾಗುತ್ತಿರುವ ದಲಿತ ವಿರೋಧಿ ಶೂದ್ರತ್ವ

ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿಯ ಓಟುಶೇರು ಹಾಗೂ ಸೀಟು ಶೇರುಗಳು 2016ಕ್ಕಿಂತ ಹೆಚ್ಚಾಗಿದೆ. ಹಾಗೂ ದ್ರಾವಿಡ ರಾಜಕಾರಣವು ಬ್ರಾಹ್ಮಣ ಲಾಂಛನಗಳ ವಿರೋಧಿಯಾಗಿದ್ದರೂ ಆಂತರ್ಯದಲ್ಲಿ ಅಪ್ಪಟ ದಲಿತ ವಿರೋಧಿಯೂ ಆಗಿದೆ. ಹೀಗಾಗಿ ಅದು ನಿಧಾನವಾಗಿ ಬ್ರಾಹ್ಮಣೀಯವಾಗುತ್ತಿದೆ. ಹಾಗೂ ಕಾರ್ಪೊರೇಟ್ ಪರವೂ ಆಗುತ್ತಿದೆ.

ಈ ಎರಡೂ ಕಾರಣಗಳಿಂದಾಗಿ ಎರಡೂ ದ್ರಾವಿಡ ಪಕ್ಷಗಳು ಈ ಹಿಂದೆ ಯಾವುದೇ ಸೈದ್ಧಾಂತಿಕ ಆಕ್ಷೇಪಣೆಯೂ ಇಲ್ಲದೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದವು. ಹಾಗೆ ನೋಡಿದರೆ ತಮಿಳುನಾಡಿನ ಅಸೆಂಬ್ಲಿಯಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಅದು 2001ರಲ್ಲಿ ಡಿಎಂಕೆ ಯೊಂದಿಗೆ ಮಾಡಿಕೊಂಡಿದ್ದ ಮೈತ್ರಿಯ ಭಾಗವಾಗಿ!

ತಮಿಳುನಾಡಿನ ಮೇಲ್ಜಾತಿ ಹಾಗೂ ಮೇಲ್ಚನೆಯುಳ್ಳ ಶೂದ್ರ ಜಾತಿಗಳಲ್ಲಿ ಹಿಂದೂ- ಬ್ರಾಹ್ಮಣ್ಯದ ಸಂಸ್ಕೃತಿಗಳ ಬಗ್ಗೆ ಪೆರಿಯಾರ್ ಕಾಲದಲ್ಲಿದ್ದ ವಿರೋಧ ಕ್ರಮೇಣ ಕ್ಷಯಿಸುತ್ತಿದೆ. ಹೀಗಾಗಿಯೇ ಹಾಲಿ ಚುನಾವಣ ಪ್ರಚಾರಗಳಲ್ಲೂ ಸಹ ಡಿಎಂಕೆ ಪಕ್ಷವೂ ಬಿಜೆಪಿ ತನ್ನನ್ನು ಹಿಂದೂ ವಿರೋಧಿಯೆಂದು ಬಣ್ಣಿಸದಂತೆ ನೋಡಿಕೊಳ್ಳಲು ಎಲ್ಲಾ ಎ ಚ್ಚರಿಕೆಗಳನ್ನು ಮತ್ತು ಪರೋಕ್ಷ ರಾಜಿಗಳನ್ನು ಮಾಡಿಕೊಂಡಿತ್ತು. ತನ್ನ ಮೇಲೆ ಹಿಂದೂ ವಿರೋಧಿ ಎಂದು ದಾಳಿ ನಡೆದಾಗಲೂ ದ್ರಾವಿಡ ಸಿದ್ಧಾಂತದ ಪ್ರಮುಖ ಲಕ್ಷಣವಾದ ವೈಚಾರಿಕ ಸಂಗರ್ಷವನ್ನೂ ಬಿಟ್ಟುಕೊಟ್ಟು ತಾನೂ ಹಿಂದೂ ಅರ್ಥಾತ್ ಬ್ರಾಹ್ಮಣ್ಯ ವಿರೋಧಿಯಲ್ಲ ಎಂದು ತೋರಿಸಿಕೊಳ್ಳುವ ಬಿಜೆಪಿ ಖೆಡ್ಡಾಗೆ ಬಲಿಬಿದ್ದಿತ್ತು.

ಇನೂ ತಮಿಳುನಾಡಿನ ಸಾಂಸ್ಕೃತಿಕ ಸಂದರ್ಭದಲ್ಲೂ, ಮಾಧ್ಯಮಗಳಲ್ಲೂ ಈಗ ಬಿಜೆಪಿ ಮತ್ತದರ ಬ್ರಾಹ್ಮಣ್ಯ ರಾಜಕಾರಣ ಅಸ್ಪೃಷ್ಯವಾಗುಳಿದಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಹಿಂದೂತ್ವವು ಗಟ್ಟಿಗೊಳಿಸಿಕೊಳ್ಳುತ್ತಿರುವ ಈ ಸಾಮಾಜಿಕ ತಳಹದಿಯ ಪರಿಣಾಮವಾಗಿಯೇ ಚುನಾವಣೆಯಿಂದ ಚುನಾವಣೆಗೆ ಅದು ತನ್ನ ಅಸ್ಥಿತ್ವವನು ಗಟ್ಟಿಗೊಳಿಸಿಕೊಳ್ಳುತ್ತಾ ಬರುತ್ತಿದೆ. ಈ ಬಾರಿ ತಾನು ಸ್ಪರ್ಧಿಸಿದ 20 ಸೀಟುಗಳಲ್ಲಿ ಉತ್ತಮ ಅಂತರದೊಂದಿಗೆ (9000-24,000) 4 ಸೀಟುಗಳನ್ನು ಗೆದ್ದಿದೆ. ಇತರ ಎಲ್ಲಾ ಕ್ಷೇತ್ರಗಳಲ್ಲೂ ಬೇರುಬಿಡುತ್ತಿರುವ ಈ ಹಿಂದೂತ್ವದ ಸಂಸ್ಕೃತಿ ಮತ್ತು ರಾಜಕೀಯವನ್ನು ಎದುರಿಸುವ ಯಾವ ರಾಜಕೀಯವನ್ನು ಡಿಎಂಕೆ-ಕಾಂಗ್ರೆಸ್ ಕೂಟ ಹೊಂದಿಲ್ಲ.

ಇನ್ನೂ ಅಸ್ಸಾಂ ಹಾಗೂ ಪುದುಚೇರಿಗಳಲ್ಲಿ ಬಿಜೆಪಿಯ ರಾಜಕಾರಣ ಯಾವುದೇ ಹೆಚ್ಚಿನ ವಿರೋಧವಿಲ್ಲದೆ ಮುನ್ನಡೆಯುತ್ತಿದೆ.

ಏಕರೂಪಿ ಗೆಲುವಿಗೆ ಬಹುರೂಪಿ ಬಾಣಗಳು

ಹಾಗೆ ನೋಡಿದರೆ ಈ ಐದೂ ರಾಜ್ಯಗಳು ಭಾರತದ ವೈವಿಧ್ಯಮಯ ಸಾಮಾಜಿಕ ಇತಿಹಾಸ ಹಾಗೂ ಸಾಂಸ್ಕೃತಿಕ ಭಿನ್ನತೆಯನ್ನು ಹೊಂದಿರುವ ರಾಜ್ಯಗಳಾಗಿದ್ದು ಅದರ ಭಾಗವಾಗಿಯೇ ಅಲ್ಲಿನ ರಾಜಕೀಯ ಹಾಗೂ ರಾಜಕೀಯ ಪಕ್ಷಗಳೂ ರೂಪುಗೊಂಡಿವೆ. ಬ್ರಾಹ್ಮಣೀಯ ಫ್ಯಾಸಿಸ್ಟ ಪ್ರಭಾವದ ಮಾನದಂಡಗಳಲ್ಲಿ ನೋಡಿದರೆ ಪ. ಬಂಗಾಳ, ಕೇರಳ, ತಮಿಳುನಾಡುಗಳ ಸಾಮಾಜಿಕ ಪರಿಸರಗಳು ಸಾಪೇಕ್ಷವಾಗಿ ಇನ್ನೂ ತಮ್ಮ ಪ್ರಾದೇಶಿಕ ಅಸ್ಮಿತೆಗಳನ್ನೂ ಹಾಗೂ ತಮ್ಮ ಇತಿಹಾಸಕ್ಕೆ ತಕ್ಕನಾಗಿ ಉತ್ತರ ಭಾರತಕ್ಕಿಂತೆ ಹೆಚ್ಚಿನ ಸಾಮಾಜಿಕ- ಸಾಂಸ್ಕೃತಿಕ ಒಳಗೊಳ್ಳುವಿಕೆಯನ್ನು ಹೊಂದಿರುವ ರಾಜ್ಯಗಳಾಗಿದ್ದವು.

ಹೀಗಾಗಿಯೇ ಹಿಂದೂತ್ವ ರಾಜಕಾರಣಕ್ಕೆ ಈ ರಾಜ್ಯಗಳು ಅಷ್ಟು ಸುಲಭದ ತುತ್ತಾಗಿರಲಿಲ್ಲ.

ಆದ್ದರಿಂದಲೇ ಆರೆಸ್ಸೆಸ್ಸ್ ಮತ್ತು ಬಿಜೆಪಿಗಳು ಕಳೆದ ಹಲವಾರು ವರ್ಷಗಳಿಂದ ತಮ್ಮ ಎಲ್ಲಾ ರಾಜಕೀಯ, ಸೈದ್ಧಾಂತಿಕ, ಸಂಘಟನಾ ಹಾಗೂ ಸರ್ಕಾರಿ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಾ ಈ ರಾಜ್ಯಗಳಲ್ಲಿ ತನ್ನ ಸಾಮಾಜಿಕ ಹಾಗೂ ಸೈದ್ಧಾಂತಿಕ ಬೇರುಗಳನ್ನು ಗಟ್ಟಿಮಾಡಿಕೊಳ್ಳಲು ಯೋಜಿತವಾಗಿ ಕೆಲಸ ಮಾಡುತ್ತಾ ಬಂದಿವೆ.

ತಮಿಳುನಾಡಿನಲ್ಲಿ ಸಾಮಾಜಿಕ ನ್ಯಾಯದ ಜೊತೆಗೆ ಬೆರೆತುಕೊಂಡಿರುವ ದ್ರಾವಿಡ ಅಸ್ಮಿತೆಯನ್ನು ಒಡೆದು ಅದನ್ನು ಕೇವಲ ತಮಿಳು ಹಿರಿಮೆಯ ರಾಜಕೀಯವನ್ನಾಗಿಸಿ ಹಿಂದೂತ್ವದ ಚೌಕಟ್ಟಿನೊಳಗೆ ತಂದುಕೊಳ್ಳುವ(ನಾಮ್ ತಮಿಳರ್ ಕಚ್ಚಿ ಎಂಬ ಪಕ್ಷ ಈ ರಾಜಕೀಯದ ಭಾಗ), ಈ ಎಲ್ಲಾ ರಾಜ್ಯಗಳಲ್ಲೂ ಮೌನಗೊಳಿಸಲ್ಪಟ್ಟಿದ್ದ ಪ್ರಬಲಜಾತಿಗಳ ಜಾತಿ ಪ್ರತಿಷ್ಟೆಯನ್ನು ಕೆರಳಿಸಿ ಅದನ್ನು ತನ್ನೊಳಗೆ ಒಳಗೊಳಿಸುವ, ಪ. ಬಂಗಾಳದಲ್ಲಿ ಕಾಳಿ ಮಾತೆಯ ಜೊತೆಗೆ ಜೈ ಶ್ರೀರಾಂ ಘೋಶಣೆಯನ್ನು ಕೂಡಿಸುವ, ಶೋಷಿತ ಜಾತಿಗಳ ಪ್ರಜಾತಾಂತ್ರಿಕ ಐಡೆಂಟಿಟಿಯ ರಾಜಕೀಯವನ್ನು ಕೋಮುವಾದೀಕರಿಸಿ ಹಿಂದೂತ್ವದ ಚೌಕಟ್ಟಿನೊಳಗೆ ಕೂಡಿಸುವ , ಕಮ್ಯುನಿಸ್ಟರ ಬಗ್ಗೆಯಂತೂ ದೈಹಿಕ ಹಾಗೂ ಸೈದ್ಧಾಂತಿಕ ದಾಳಿಯನ್ನೂ ನಡೆಸುತ್ತಾ ಅಮಾನ್ಯಗೊಳಿಸುವ ಸಾಮಾಜಿಕ- ಸಾಂಸ್ಕೃತಿಕ ರಾಜಕಾರಣವನ್ನು ಮಾಡುತ್ತಾ ಈ ಎಲ್ಲಾ ರಾಜ್ಯಗಳಲ್ಲೂ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.ಇದಕ್ಕೆ ಕ್ರಮೇಣ ಈ ಎಲ್ಲಾ ರಾಜ್ಯಗಳ ಅವಕಾಶವಾದಿ ಮತ್ತು ಲಿಬರಲ್ ಹಾಗೂ ನಿಯೋ ಲಿಬರಲ್-ಕಾರ್ಪೊರೇಟ್ ರಾಜಕೀಯ ಶಕ್ತಿಗಳು ಕುಮ್ಮಕ್ಕಾದವು.

ಫ್ಯಾಸಿಸಂನ ಅಸಲಿ ಮುನ್ನಡೆಯನ್ನು ಚುನಾವಣ ಫಲಿತಾಂಶಗಳು ಬಿಚ್ಚಿಡಬಲ್ಲವೇ?

ಹೀಗಾಗಿ, ಹಿಂದೂತ್ವ-ಬ್ರಾಹ್ಮಣೆಯ- ಫ್ಯಾಸಿಸ್ಟ್ ವ್ಯವಸ್ಥೆಗೆ ಚುನಾವಣೆಗಳು ಒಂದು ಗುರಿಯಲ್ಲ. ಒಂದು ಸಾಧನ ಮಾತ್ರ.

ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಹೇಳಿದಂತೆ ಹಿಂದೂ ಸಮಾಜ (ಭ್ರಾಹ್ಮಣೀಯ ಸಮಾಜ ವ್ಯವಸ್ಥೆ) ಕಟ್ಟುವುದು ಅದರ ಪ್ರಧಾನ ಲಕ್ಷ್ಯ. ಹಿಂದೂ ರಾಷ್ಟ್ರ ಅದರ ಉತ್ಪನ್ನ. ಹೀಗಾಗಿಯೇ ಅದರ ಪ್ರಧಾನ ಲಕ್ಷ್ಯ ಹಿಂದೂ-ಬ್ರಾಹಣ್ಯ-ಕಾರ್ಪೊರೇಟ್ ಆಸಕ್ತಿಗಳನ್ನು ವಿರೋಧಿಸುವ ಇತಿಹಾಸ, ಸಂಸ್ಕೃತಿ, ರಾಜಕೀಯ ಸಿದ್ಧಾಂತಗಳನ್ನು ನಿರಂತರವಾಗಿ ಸೋಲಿಸುತ್ತಾ ಒಂದು ಪ್ರಬಲ ಸಾಮಾಜಿಕ ಶಕ್ತಿಯಾಗುವುದಾಗಿದೆ.
ಅದರ ಆಧಾರದಲ್ಲಿ ಅದು ರಾಜಕೀಯವನ್ನು ಮತ್ತು ಚುನಾವಣೆಯನ್ನು ಪ್ರವೇಶಿಸುತ್ತದೆ. ಹೀಗಾಗಿ ಅದರ ಗೆಲುವನ್ನು ಕೇವಲ ಚುನಾವಣೆಯ ಸಾಧನೆಗಳ ಮೂಲಕ ಮಾತ್ರ ಅಳೆಯಲಾಗದು. ಫ್ಯಾಸಿಸ್ಟರಿಗೆ ಚುನಾವಣಾ ಪ್ರಕ್ರಿಯೆಗಳೂ ಫ್ಯಾಸಿಸ್ಟ್ ರಾಜಕಾರಣದ ಪ್ರಚಾರ ರಂಗ. ಅದನ್ನು ಸಧೃಡೀಕರಣಗೊಳಿಸುವ ಸಾಧನ.

ಹೀಗಾಗಿ ಈ ಚುನಾವಣೆಗಳ ಫಲಿತಾಂಶವನ್ನೂ ಸಹ ಬಿಜೆಪಿ ಪಡೆದ ಸೀಟುಗಳ ಸಂಖ್ಯೆಯ ಮಾನದಂಡದಲ್ಲಿ ಮಾತ್ರವಲ್ಲದೆ, ಅದರ ಸೈದ್ಧಾಂತಿಕ-ರಾಜಕೀಯ ಯಾಜಮಾನ್ಯವನ್ನು ಸ್ಥಾಪಿಸುವ ದಿಕ್ಕಿನಲ್ಲಿ ಎಷ್ಟು ಯಶಸ್ವಿಯಾಗಿದೆಯೆಂಬ ಮಾನದಂಡದಲ್ಲಿ ಅಳೆಯಬೇಕು.

ಹಾಗೂ ಆ ಮಾನದಂಡದಲ್ಲಿ ಅದು ಎಲಾ ರಾಜ್ಯಗಳಲ್ಲೂ ಧೃಢವಾದ ಹೆಜ್ಜೆಗಳನ್ನಿರಿಸುತ್ತಿದೆ.

ಆದರೆ ಜನರು ಹಸಿಯುತ್ತಾರೆ..

ಹಾಗೂ ಅವರಿಗೆ ಅತ್ಯಗತ್ಯವಾದ ಆರ್ಥಿಕ ಅವಶ್ಯಕತೆಗಳಿರುತ್ತವೆ ಎನ್ನುವುದು ಯಾವಾಗಲು ಫ್ಯಾಸಿಸಂನ ಮುನ್ನಡೆಗೆ ಒಂದು ದೊಡ್ಡ ಅಡ್ಡಿ….

ಅವರ ಕಾರ್ಪೊರೇಟ್ ಪರ ಆರ್ಥಿಕ ನೀತಿಯಿಂದಾಗಿ ಅವರು ಅದನ್ನು ಪೂರೈಸಲಾರರು.

ಈ ಚುನಾವಣೆಗಳಲ್ಲೂ ಮಮತಾ ಬ್ಯಾನರ್ಜಿ ಬಂಗಾಳದಲ್ಲೂ ಹಾಗೂ ಬಿಜೆಪಿ ಅಸ್ಸಾಮಿನಲ್ಲೂ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ಕೊನೆಯ ಎರಡು ವರ್ಷಗಳಲ್ಲಿ ಜನರ ಅತ್ಯಾವಶ್ಯಕತೆಗಳನ್ನು ನೇರವಾಗಿ ಪೂರೈಸುವ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದರಿಂದ.

ಆದರೆ ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಕಾರ್ಪೊರೇಟ್ ಪರ ಆರ್ಥಿಕತೆ ಇದಕ್ಕೆ ಹೆಚ್ಚು ಸಂಪನ್ಮೂಲಗಳನ್ನು ಒದಗಿಸದಂತೆ ಮಾಡುತ್ತದೆ. ಅದು ಮತ್ತಷ್ಟು ಆರ್ಥಿಕ- ಸಾಮಾಜಿಕ ಸಂಕ್ಷೋಭೆಯನ್ನು ಹೆಚ್ಚಿಸುತ್ತದೆ.

ಆರೆಸ್ಸೆಸ್-ಬಿಜೆಪಿಗಳು ಅಂಥಾ ಬಿಕ್ಕಟ್ಟನ್ನು ದ್ವೇಷ ರಾಜಕಾರಣ, ಸಾಮಾಜಿಕ ಧೃವೀಕರಣದಂಥ ರಾಜಕೀಯದ ಮೂಲಕ ಜನರನ್ನು ಒಡೆದಾಳುತ್ತಾ ಮುಂದೂಡಲು ಪ್ರಯತ್ನಿಸುತ್ತವೆ.

ಅದಕ್ಕೆ ತದ್ವಿರುದ್ಧವಾಗಿ , ಈ ಬಿಕ್ಕಟ್ಟಿಗೆ ಕಾರಣವಾಗಿರುವ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಜನರನ್ನು ಒಟ್ಟುಗೂಡಿಸುವ ಪ್ರಬುದ್ಧ-ಸಮಾಜವಾದಿ ರಾಜಕಾರಣದ ಮೂಲಕ ಜನರನ್ನು ಸಮಾಜವನ್ನು ಪುನರ್ ಸಂಘಟಿಸುವ ಮೂಲಕವೂ ಮಾನವೀಯ ಪರಿಹಾರ ಹುಡುಕುವ ಅವಕಾಶ ದೇಶದ ಮುಂದಿದೆ..

ವಾಸ್ತವವಾಗಿ, ಫ್ಯಾಸಿಸ್ಟರ ಮುನ್ನಡೆಗೆ ಎದುರಾಗಿರುವ ಈ ರೋಡ್ ಹಂಪ್ ಒದಗಿಸಿರುವ ಅವಕಾಶವನ್ನು ಅಂತಾ ಒಂದು ರಾಜಕಾರಣಕ್ಕೆ ಬಳಸಿಕೊಂಡರೆ ಮಾತ್ರ ಈ ಚುನಾವಣ ಫಲಿತಾಂಶ ಒದಗಿಸಿರುವ ತಾತ್ಕಾಲಿಕ ನಿರಾಳಕ್ಕೆ ಒಂದು ಅರ್ಥವಿರುತ್ತದೆ.

ಅಲ್ಲವೇ?

– ಶಿವಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights