ನಾರದ ಲಂಚ ಪ್ರಕರಣ: ನಾಲ್ವರು ಟಿಎಂಸಿ ಮುಖಂಡರಿಗೆ ಗೃಹಬಂಧನ!
ಪಶ್ಚಿಮ ಬಂಗಾಳದಲ್ಲಿ ನಾರದ ಪ್ರಕರಣ ಎಂದೇ ಕರೆಸಿಕೊಳ್ಳುತ್ತಿರುವ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಟಿಎಂಸಿ ಸಚಿವರು ಸೇರಿದಂತೆ ನಾಲ್ವರು ಟಿಎಂಸಿ ಮುಖಂಡರಿಗೆ ಕೊಲ್ಕತ ಹೈಕೋರ್ಟ್ ಗೃಹಬಂಧನ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೊಲ್ಕತ್ತಾ ಹೈಕೋರ್ಟ್‌ನ ತ್ರಿಸದಸ್ಯ ಪೀಠವು, ಬಂಗಾಳದ ಸಚಿವರಾದ ಫಿರ್ಹಾದ್ ಹಕೀಂ ಮತ್ತು ಸುಬ್ರತ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಟಿಎಂಸಿ ಸದಸ್ಯರಾಗಿದ್ದ ಸೊವನ್ ಚಟರ್ಜಿ ಅವರಿಗೆ ಗೃಹ ಬಂಧನ ವಿಧಿಸಿದ್ದು, ಮಧ್ಯಂತರ ಜಾಮೀನು ವಿಚಾರಣೆ ಪೂರ್ಣಗೊಳ್ಳುವವರೆಗೂ ಗೃಹ ಬಂಧನ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.
ಈ ನಾಲ್ವರು ಟಿಎಂಸಿ ಮುಖಂಡರನ್ನು ಮೇ 17ರಂದು ಸಿಬಿಐ ಬಂಧಿಸಿತ್ತು. ನಂತರ ಕೊಲ್ಕತ್ತಾದ ಸೆಷನ್ಸ್ ಕೋರ್ಟ್ ನಾಲ್ವರಿಗೂ ಜಾಮೀನು ನೀಡಿತ್ತು. ಕೋರ್ಟ್‌ನ ಜಾಮೀನನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು.
ಸಿಬಿಐ ಸಲ್ಲಿಸಿರುವ ಮೇಲ್ಮನವಿಯನ್ನು ಪರೀಶಿಲಿಸಿರುವ ಹೈಕೋರ್ಟ್, ಜಾಮೀನಿಗೆ ತಡೆಯಾಜ್ಞೆ ನೀಡಿದ್ದು, ಗೃಹ ಬಂಧನದಲ್ಲಿಡುವಂತೆ ಸೂಚನೆ ನೀಡಿದೆ.
2014 ರಲ್ಲಿ ನಡೆದ ಸ್ಟಿಂಗ್ ಆಪರೇಷನ್ನ ಫಲಿತಾಂಶ ಇದು. ಪತ್ರಕರ್ತರೊಬ್ಬರು ಬಿಸಿನೆಸ್ಮನ್ ರೀತಿಯಲ್ಲಿ ಬಂಗಾಳದಲ್ಲಿ ಹೂಡಿಕೆ ಮಾಡುವುದಾಗಿ ಹೋಗಿ 7 ಟಿಎಂಸಿ ಸಂಸದರು, 4 ಸಚಿವರು, ಒಬ್ಬ ಶಾಸಕ ಮತ್ತು ಒಬ್ಬ ಪೊಲೀಸ್ ಅಧಿಕಾರಿಗೆ ಲಂಚವಾಗಿ ಹಣ ನೀಡಿದ್ದರು. ಎಲ್ಲವನ್ನೂ ರೆಕಾರ್ಡ್ ಮಾಡಿದ್ದರು. ಈ ಟೇಪ್ಗಳನ್ನು 2016 ರ ವಿಧಾನಸಭಾ ಚುನಾವಣೆಗಳ ಮುಂಚೆ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.
Read Also: ಚಿಪ್ಕೊ ಚಳುವಳಿ ನೇತಾರ, ಪರಿಸರವಾದಿ ಸುಂದರ್‌ಲಾಲ್ ಬಹುಗುಣ ಕೊರೊನಾದಿಂದ ಸಾವು!