ಉಚಿತ ಮೆಡಿಕಲ್ ಕಿಟ್ ನೀಡಿ ಬಡ ಸೋಂಕಿತರಿಗೆ ನೆರವಾದ ಡಿ.ಕೆ. ಸುರೇಶ್!

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಸೋಂಕಿತರಿಗೆ ಕೆಲವಾರು ಜನಪ್ರತಿನಿಧಿಗಳು ಸಹಾಯ ಹಸ್ತ ಚಾಚಿದ್ದಾರೆ. ಈ ಪೈಕಿ ಡಿಕೆ ಸುರೇಶ್ ಕೂಡ ಬಡ ಸೋಂಕಿತರ ನೆರವಿಗೆ ನಿಂತಿದ್ದಾರೆ.

ಒಂದು ವರ್ಷದಿಂದ ಜನರನ್ನು ಹಿಂಡಿ ಹಿಪ್ಪೆಯಾಗಿಸಿದ ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ವೈದ್ಯರು, ಪೊಲೀಸರು, ಕೊರೊನಾ ಕಾರ್ಯಕರ್ತರು ಬಿಡುವಿಲ್ಲದೇ ಕೊರೊನಾ ವಿರುದ್ಧ ಹೋರಾಡಲು ಮುಂಚುಣಿಯಲ್ಲಿದ್ದಾರೆ. ಅದೆಷ್ಟೇ ಪ್ರಯತ್ನಪಟ್ಟರೂ ಮಹಾಮಾರಿ ಕೊರೊನಾ ಕೆಲ ಜನರನ್ನು ಬಲಿತೆಗೆದುಕೊಳ್ಳುತ್ತಲೇ ಇದೆ. ಇಂಥ ಬಡ ಸೊಂಕಿತರಿಗೆ ಡಿ.ಕೆ. ಸುರೇಶ್ ನೆರವಾಗುತ್ತಲೇ ಇದ್ದಾರೆ.

ಡಿಕೆ ಸುರೇಶ್ ಕಳೆದ ವರ್ಷ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ನಿಂದ ಹಿಡಿದು ಆಹಾರ ಕಿಟ್ ವರೆಗೂ ಪೂರೈಸಿದ್ದು, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದ ರೈತರಿಂದ ಬೆಳೆ ಖರೀದಿಸಿ ಜನ ಸಾಮಾನ್ಯರಿಗೆ ಉಚಿತವಾಗಿ ಹಂಚಿಕೆ ಮಾಡಿ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಮಾದರಿ ಕಾರ್ಯಕ್ರಮವನ್ನು ಪಕ್ಷಬೇಧ ಮರೆತು ಅನೇಕರು ರಾಜ್ಯಾದ್ಯಂತ ಅನುಷ್ಠಾನಕ್ಕೆ ತಂದಿದ್ದರು. ಹೀಗೆ ಹತ್ತು ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸುರೇಶ್ ಅವರು ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಜನರ ಜೀವ ರಕ್ಷಣೆಗೆ ತಮ್ಮ ಬದ್ಧತೆ ಮೆರೆದಿದ್ದಾರೆ.

ನಗರದ ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜನರ ನೆರವಿಗೆಂದು ಬೆಂಗಳೂರಲ್ಲಿ ಪ್ರತ್ಯೇಕ ಕೋವಿಡ್ ಸಹಾಯವಾಣಿ ಕೇಂದ್ರವನ್ನು (War Room, ದೂರವಾಣಿ ಸಂಖ್ಯೆ : 080-37121133) ಅವರು ಆರಂಭಿಸಿದ್ದಾರೆ. 12 ಮಂದಿ ಈ ವಾರ್ ರೂಂನಲ್ಲಿ ಕೆಲಸ ಮಾಡುತ್ತಿದ್ದಾರೆ. 30 ಮಂದಿ ವೈದ್ಯರು ಈ ಸಹಾಯವಾಣಿ ಕೇಂದ್ರದ ಜತೆ ಸಂಯೋಜಿತರಾಗಿದ್ದಾರೆ. ವಾರ್ ರೂಂನ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಸೋಂಕಿತರಿಗೆ ವೈದ್ಯರಿಂದ ಸಲಹೆ, ಚಿಕಿತ್ಸೆ ಮಾರ್ಗದರ್ಶನ ನೀಡುವುದರ ಜತೆಗೆ ಅಗತ್ಯ ಔಷಧಿ ಖರೀದಿಸಲು ಸಾಧ್ಯವಾಗದ ಬಡವರ ಮನೆ ಬಾಗಿಲಿಗೆ ಸುರೇಶ್ ಅವರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ, ಉಚಿತವಾಗಿ ಮೆಡಿಕಲ್ ಕಿಟ್ ಕೂಡ ವಿತರಿಸುತ್ತಿದ್ದಾರೆ.

ಈ ಕಿಟ್ ನಲ್ಲಿ ಪಲ್ಸ್ ಆಕ್ಸಿಮೀಟರ್, ದೇಹದ ಉಷ್ಣತೆ ಪರೀಕ್ಷಿಸುವ ಥರ್ಮಾಮೀಟರ್, ವಿವಿಧ ಮಾತ್ರೆ, ಔಷಧಿ, ಮಾಸ್ಕ್, ಸ್ಯಾನಿಟೈಸರ್, ಇರುತ್ತದೆ.

ಪ್ರತಿ ಕಿಟ್ ಬೆಲೆ ಸುಮಾರು 3500 ನಿಂದ 4000 ರಷ್ಟಿದ್ದು, ಇದುವರೆಗೂ 2000 ಬಡವರಿಗೆ ಈ ಮೆಡಿಕಲ್ ಕಿಟ್ ವಿತರಿಸಲಾಗಿದೆ. ಸುರೇಶ್ ಅವರ ಈ ಸೇವೆಯನ್ನು ಕ್ಷೇತ್ರದ ಜನ ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights