ಕೋವಿಡ್ ಆಸ್ಪತ್ರೆಯ ಐಸಿಯುಗೆ ನುಗ್ಗಿದ ಮಳೆ ನೀರು : ಕಂಗಾಲಾದ ರೋಗಿಗಳು…!

ಕೋವಿಡ್ ಆಸ್ಪತ್ರೆಯ ಐಸಿಯುಗೆ ಮಳೆ ನೀರು ನುಗ್ಗಿ ರೋಗಿಗಳು ಕಂಗಾಲಾದ ಘಟನೆ ಕೇರಳದಲ್ಲಿ ನಡೆದಿದೆ.

60 ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡಿನ ಟಾಟಾ ಟ್ರಸ್ಟ್ ನಿರ್ಮಿಸಿದ ಕೋವಿಡ್ ಆಸ್ಪತ್ರೆ ಮಳೆಗೆ ಸೋರುತ್ತಿದ್ದು ರೋಗಿಗಳು ಮತ್ತು ವೈದ್ಯರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯನ್ನು 128 ಕಸ್ಟಮೈಸ್ ಮಾಡಿದ ಶಿಪ್ಪಿಂಗ್ ಕಂಟೇನರ್‌ಗಳನ್ನು ಒಟ್ಟುಗೂಡಿಸುವ ಮೂಲಕ ವೇಗವಾಗಿ ಸ್ಥಾಪಿಸಲಾಗಿದೆ. ಇದು ಜಿಲ್ಲೆಯ ಕೋವಿಡ್ ಚಿಕಿತ್ಸೆಗಾಗಿ ಸ್ಥಾಪಿಸಿದ ಆಸ್ಪತ್ರೆಯಲ್ಲಿ ಒಂದಾಗಿದೆ. ಇಲ್ಲಿನ ಬಹುತೇಕ ಎಲ್ಲಾ ವಾರ್ಡಗಳು ಸೋರಿಕೆಯಾಗುತ್ತಿವೆ ಎಂದು ಸಿಬ್ಬಂದಿಗಳು ಹೇಳುತ್ತಾರೆ.

128 ಶಿಪ್ಪಿಂಗ್ ಕಂಟೇನರ್‌ಗಳಲ್ಲಿ, 40 ಕಂಟೇನರ್‌ಗಳಲ್ಲಿ ರೋಗಿಗಳನ್ನು ದಾಖಲಿಸಲಾಗಿದೆ. ಕಂಟೇನರ್‌ಗಳಲ್ಲಿ ಹನ್ನೆರಡು ತೀವ್ರ ನಿಗಾ ಘಟಕಗಳಿವೆ. ಒಂದು ಕಡೆ ಛಾವಣಿಯಿಂದ ಮಳೆನೀರು ಸುರಿದರೆ, ಮತ್ತೊಂದೆಡೆ ಗಾಳಿಗೆ ಕಿಟಕಿಯಿಂದ ನೀರು ಆಸ್ಪತ್ರೆ ಒಳಗೆ ಪ್ರವೇಶಿಸುತ್ತದೆ. ಮಾತ್ರವಲ್ಲದೇ ಮುಂಭಾಗದ ಬಾಗಿಲಿನ ಮೂಲಕವೂ ನೀರು ನುಗ್ಗುತ್ತದೆ. “ರಾತ್ರಿಯಿಡಿ ಮಳೆನೀರನ್ನು ಶುಚಿಗೊಳಿಸಲು ಸಿಬ್ಬಂದಿಗಳು ಹರಸಾಹಸವೇ ಪಡುವಂತಾಗಿದೆ. ಕಿಟಕಿಗಳಿಂದ ನೀರು ಗೋಡೆಗಳ ಮೇಲೆ ವಿದ್ಯುತ್ ಪ್ಲಗ್‌ಗಳ ಮೇಲೆ ಹರಿಯುತ್ತದೆ. ಹಾಗೆಂದು ನಾವು ಐಸಿಯುನಲ್ಲಿನ ಪವರ್ ಆಫ್ ಮಾಡಲು ಸಹ ಸಾಧ್ಯವಿಲ್ಲ. ಹೀಗಾಗಿ ಮಳೆ ನೀರು ಸೋರಿಕೆಯನ್ನು ತಕ್ಷಣ ಸರಿಪಡಿಸಬೇಕು” ಎಂದು ಸಿಬ್ಬಂದಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

“ಕಳೆದ ವರ್ಷವೇ ಜಿಲ್ಲಾ ವೈದ್ಯಕೀಯ ಅಧಿಕಾರಿ (ಡಿಎಂಒ)ಗಳಿಗೆ ಸೋರಿಕೆ ಬಗ್ಗೆ ವರದಿ ಮಾಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ನಾವು ಟಾಟಾ ಟ್ರಸ್ಟ್ ಅಧಿಕಾರಿಗಳನ್ನು ಸಹ ಸಂಪರ್ಕಿಸಿದ್ದೇವೆ ಆದರೆ ಯಾರೂ ಸೋರಿಕೆಯನ್ನು ಸರಿಪಡಿಸುತ್ತಿಲ್ಲ” ಎಂದು ಅವರು ಹೇಳಿದರು.

ಟಾಟಾ ಟ್ರಸ್ಟ್ ಐದು ತಿಂಗಳಲ್ಲಿ ಶಿಪ್ಪಿಂಗ್ ಕಂಟೇನರ್‌ಗಳನ್ನು ಬಳಸಿ ಆಸ್ಪತ್ರೆಯನ್ನು ನಿರ್ಮಿಸಿತು ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಸೆಪ್ಟೆಂಬರ್ 9, 2020 ರಂದು ಉದ್ಘಾಟಿಸಿದರು.

ಇದು ಅಕ್ಟೋಬರ್ 28, 2020 ರಂದು ರೋಗಿಗಳನ್ನು ಪ್ರವೇಶಿಸಲು ಪ್ರಾರಂಭಿಸಿತು. ಡಿಸೆಂಬರ್ ಮಳೆಯ ಸಮಯದಲ್ಲಿ ಸೋರಿಕೆ ವರದಿಯಾಗಿದೆ.
10-ಅಡಿ ಎತ್ತರ 10-ಅಡಿ ಅಗಲದ ಅಳತೆಯ ನಾಲ್ಕು ಯುಪಿವಿಸಿ ಕಿಟಕಿಗಳಿವೆ. ಸಿಲಿಕೋನ್ ಜೆಲ್ ಬಳಸಿ ಕಿಟಕಿಗಳನ್ನು ಸರಿಯಾಗಿ ಮುಚ್ಚಲಾಗಿಲ್ಲ. ಎಲ್ಲಾ ಕಿಟಕಿಗಳ ಮೂಲಕ ಮತ್ತು ಛಾವಣಿಯ ಮೂಲಕವೂ ನೀರು ಹರಿಯುತ್ತದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದಾಗ, ಟಾಟಾ ಅಧಿಕಾರಿಗಳು ಕಂಟೇನರ್‌ಗಳಿಗೆ 30 ವರ್ಷಗಳ ವಾರೆಂಟಿ ನೀಡಿದರು ಎಂದು ಆರೋಗ್ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇದು ಮೊದಲ ಮಳೆಯಲ್ಲಿಯೇ ಸೋರಿಕೆ ಸಂಭವಿಸುತ್ತಿದೆ ಎಂದು ಸಿಬ್ಬಂದಿ ಮತ್ತು ರೋಗಿಗಳು ಅಸಮಧಾನಗೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights