ಪ್ರತಿ ಹಳ್ಳಿಯಲ್ಲೂ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ: ಯೋಗಿ ಸರ್ಕಾರದ ವಿರುದ್ದ ಬಿಜೆಪಿ ನಾಯಕರೇ ಆಕ್ರೋಶ!
ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಯೋಗಿ ಸರ್ಕಾರ ವಿಫಲವಾಗಿದೆ. ಕೊರೊನಾ 2ನೇ ಅಲೆಯಲ್ಲಿ ಪ್ರತಿ ಹಳ್ಳಿಯಲ್ಲಿಯೂ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಆಡಳಿತಾರೂಢ ಬಿಜೆಪಿಯ ನಾಯಕರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಮೊದಲ ಅಲೆಯಿಂದ ಎದುರಾದ ಬಿಕ್ಕಟ್ಟು, ಸಾವು-ನೋವುಗಳಿಂದ ಸರ್ಕಾರ (ಆರೋಗ್ಯ ಇಲಾಖೆ) ಯಾವುದೇ ಪಾಠ ಕಲಿಯಲಿಲ್ಲ. ಸರ್ಕಾರದ ಬೇಜವಾಬ್ದಾರಿ ತನದಿಂದಾಗಿಯೇ ಕೊರೊನಾ 2ನೇ ಅಲೆಯಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದರು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಹೇಳಿದ್ದಾರೆ.
COVID-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ರಾಜ್ಯದ ಪ್ರತಿ ಹಳ್ಳಿಯಲ್ಲಿಯೂ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಸೋಂಕಿಗೆ ಬಲಿಯಾದವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮೋದಿ-ಯೋಗಿ ನಡುವೆ ಭಿನ್ನಮತ; ಯುಪಿ ಸಿಎಂ ಬದಲಾವಣೆ?; ಬಿಜೆಪಿ ಹೇಳಿದ್ದೇನು?
75 ವರ್ಷಗಳ ಸ್ವಾತಂತ್ರ್ಯದ ನಂತರ, 34 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಬಲ್ಲಿಯಾ ಜಿಲ್ಲೆಯಲ್ಲಿ ವೈದ್ಯರು ಅಥವಾ ಔಷಧಿಗಳಿಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಲ್ಲಿಯಾಗೆ ಬೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮಾಡಿದ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅಧಿಕಾರಿಗಳು ಸಿಎಂ ಅವರಿಗೆ ಸುಳ್ಳು ವರದಿ ನೀಡಿ ದಾರಿ ತಪ್ಪಿಸಿದ್ದಾರೆ. ಸತ್ಯವನ್ನು ಸಿಎಂ ಅರಿತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರೈತರಿಗೆ ಡೀಸೆಲ್ ಸಬ್ಸಿಡಿ ನೀಡಬೇಕೆಂದು ಬಿಜೆಪಿ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?