ಪಾಕಿಸ್ತಾನದಲ್ಲಿ ಬಸ್ ಅಪಘಾತ : 30 ಮಂದಿ ಸಾವು – 40 ಕ್ಕೂ ಹೆಚ್ಚು ಜನರಿಗೆ ಗಾಯ!

ಪಾಕಿಸ್ತಾನದಲ್ಲಿ ಬಸ್ ಅಪಘಾತಕ್ಕೀಡಾಗಿ 30 ಮಂದಿ ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ ಜಿಲ್ಲೆಯ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರಲ್ಲಿ ಹೆಚ್ಚಿನವರು ಬುಧವಾರ ಈದ್-ಉಲ್ ಅಹಾ ಆಚರಿಸಲು ತಮ್ಮ ಊರಿಗೆ ಹೋಗುತ್ತಿದ್ದ ಕಾರ್ಮಿಕರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಸಿಯಾಲ್‌ಕೋಟ್‌ನಿಂದ ರಾಜನ್‌ಪುರಕ್ಕೆ ಹೋಗುವಾಗ ಲಾಹೋರ್‌ನಿಂದ 430 ಕಿ.ಮೀ ದೂರದಲ್ಲಿರುವ ಡೇರಾ ಘಾಜಿ ಖಾನ್ ಜಿಲ್ಲೆಯ ತೌನ್ಸಾ ಬೈಪಾಸ್ ಬಳಿಯ ಸಿಂಧೂ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಗಾಯಗೊಂಡ ಪ್ರಯಾಣಿಕ ಹೇಳುವಂತೆ, ಬಸ್‌ನ ಚಾಲಕ ನಿದ್ರೆಗೆ ಜಾರಿದ್ದಾನೆ. ನಿಯಂತ್ರಣ ಕಳೆದುಕೊಂಡ ವಾಹನ ಅಪಘಾತಕ್ಕೆ ಒಳಗಾಗಿದೆ.

ಘಟನೆ ಬಗ್ಗೆ ದು:ಖ ವ್ಯಕ್ತಪಡಿಸಿದ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಟ್ವೀಟ್ ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ವಾಹನ ಚಾಲಕರಿಗೆ ಮನವಿ ಮಾಡಿದ್ದಾರೆ.

ಪಂಜಾಬ್ ಸಿಎಂ ಉಸ್ಮಾನ್ ಬುಜ್ದಾರ್ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದರು ಆದರೆ ಸಂತ್ರಸ್ತರಿಗೆ ಯಾವುದೇ ಪರಿಹಾರವನ್ನು ಘೋಷಿಸಲಿಲ್ಲ.

ಪಾಕಿಸ್ತಾನದಲ್ಲಿ ಟ್ರಾಫಿಕ್ ಅಪಘಾತಗಳು ಸಾಮಾನ್ಯವಾಗಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಅತಿಯಾದ ವೇಗ, ಕೆಟ್ಟ ರಸ್ತೆಗಳು ಮತ್ತು ತರಬೇತಿ ಪಡೆಯದ ಚಾಲಕರಿಂದ ಉಂಟಾಗುತ್ತವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights