ಪ್ರವಾಹಕ್ಕೆ ಸಿಲುಕಿದ ಮದುವೆ ವಾಹನ : ಮದುಮಗ ಸೇರಿ 15 ಜನರ ರಕ್ಷಣೆ!

ರಾಜ್ಯದಲ್ಲಿ ಕಳೆದ ಮೂರು ನಾಲ್ಕು ದಿನದಿಂದ ಭಾರೀ ಮಳೆಯಾಗುತ್ತಿದ್ದು ಕರುನಾಡಿನ ಜನ ತತ್ತರಿಸಿ ಹೋಗಿದ್ದಾರೆ. ಅಧಿಕ ಮಳೆಯಿಂದಾಗಿ ಕಾರವಾರದ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಮದುವೆ ದಿಬ್ಬಣ ತುಂಬಿರುವ ವಾಹನ ಪ್ರವಾಹದಲ್ಲಿ ಸಿಲುಕಿ ಅವಾಂತರವೇ ಸೃಷ್ಟಿಯಾಗಿತ್ತು.

ಹೌದು… ಮದುವೆ ದಿಬ್ಬಣ ತುಂಬಿರುವ ವಾಹನ ಕಾರವಾರದ ಗಂಗಾವಳಿ ನದಿಯ ಪ್ರವಾಹದಲ್ಲಿ ಸಿಲುಕಿದ್ದರ ಪರಿಣಾಮ ವಾಹನದಲ್ಲಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿ ಅಪಾಯದಿಂದ ಪಾರು ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಶೀರೂರು ಬಳಿ ನಡೆದಿದೆ. ಗಂಗಾವಳಿ ನದಿ ಉಕ್ಕಿ ಹರಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66 ಬಂದ್ ಆಗಿತ್ತು. ನದಿ ನೀರು ಪ್ರವಾಹದಂತೆ ಹರಿಯುತ್ತಿದ್ದರೂ ವಾಹನ ನದಿ ನೀರಿನಲ್ಲಿ ರಸ್ತೆ ಮಧ್ಯೆ ಸಿಲುಕಿಕೊಂಡಿದೆ.

ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದಾಗ ವಾಹನ ನೀರಿನಲ್ಲಿ ಸಿಲುಕಿಕೊಂಡಿದ್ದು, ವಾಹನದಲ್ಲಿ ಮದುಮಗ ಸೇರಿ ಹದಿನೈದಕ್ಕೂ ಹೆಚ್ಚು ಜನ ಇದ್ದರು. ಶೀರೂರು ಬಳಿ ಊರಿಗೆ ಊರೇ ಮುಳುಗಡೆಯಾಗಿದ್ದು, ಈ ವೇಳೆ ಮದುವೆ ದಿಬ್ಬಣದ ವಾಹನವೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು.

ಇದೇ ಸಂದರ್ಭದಲ್ಲಿ ಮೊಗಟಾ ಗ್ರಾಮ ಪಂಚಾಯಿತಿಯ ಆಂಧೆ ಗ್ರಾಮದ ಜನರನ್ನು ರಕ್ಷಿಸಲು ತೆರಳುತ್ತಿದ್ದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ನಿರ್ದೇಶಕ ರಾಜು ಹರಿಕಂತ್ರ ಹಾಗೂ ಅವರ ಸ್ನೇಹಿತರ ತಂಡ, ವಾಹನದಲ್ಲಿ ಸಿಲುಕಿಕೊಂಡಿರುವ ಎಲ್ಲರನ್ನು ತಮ್ಮ ಜೀವದ ಹಂಗು ತೊರೆದು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights