‘ಬೊಮ್ಮಾಯಿ ರಬ್ಬರ್ ಸ್ಟ್ಯಾಂಪ್ ಸಿಎಂ’ – ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ!

ಬಸವರಾಜ್ ಬೊಮ್ಮಾಯಿ ನೂತನ ಸಿಎಂ ಆಗಿ ಸಿಂಹಾಸನವನ್ನು ಅಲಂಕರಿಸುತ್ತಿದ್ದಂತೆ ರಾಜ್ಯದ ಜನತೆಯಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ ನೆರೆ ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸಿಎಂ ಇಂದು ದೆಹಲಿಗೆ ಹಾರಿದ್ದು ನಾಡಿನ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮಧ್ಯೆ ‘ಬೊಮ್ಮಾಯಿ ರಬ್ಬರ್ ಸ್ಟ್ಯಾಂಪ್ ಸಿಎಂ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, “ನೆರೆ ಪರಿಹಾರ ನೀಡದೇ, ಸಚಿವ ಸಂಪುಟ ರಚನೆ ಮಾಡಿಲ್ಲ. ಅವರು ಹೈಕಮಾಂಡ್ ಬಳಿ ನೆರೆ ಪರಿಹಾರ ಕೇಳಬೇಕು. ಜಿಲ್ಲೆಗಳಲ್ಲಿ ನೋಡಿಕೊಳ್ಳಲು ಯಾರೂ ಮಂತ್ರಿಗಳಿಲ್ಲ. ಸಂಪುಟ ರಚನೆಯಾಗಬೇಕು. ಇದ್ಯಾವುದು ಆಗದೇ ಕಾಲಹರಣ ಮಾಡುತ್ತಿದ್ದಾರೆ. ಬೊಮ್ಮಾಯಿ ರಬ್ಬರ್ ಸ್ಟ್ಯಾಂಪ್ ಸಿಎಂ” ಎಂದು ದೂರಿದ್ದಾರೆ.

ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ” ಬಿಜೆಪಿ ಆತಂರಿಕ ವಿಚಾರ ಬಗ್ಗೆ ನಾನು ಮಾತನಾಡಲ್ಲ. ಸಿಎಂ ಬೊಮ್ಮಾಯಿಗೆ ರಾಜ್ಯದ ಹಿತ ಮುಖ್ಯವಲ್ಲ. ಕಳೆದ ಬಾರಿ ಪ್ರವಾಹ ಬಂದರೂ ಬಿಜೆಪಿ ಏನೂ ಮಾಡಿಲ್ಲ. 5 ಲಕ್ಷ ಪರಿಹಾರ ಅಂದ್ರು. ಆದರೆ ಪರಿಹಾರ ಕೊಟ್ಟಿಲ್ಲ. ನೆರೆ ಜನರ ಮನೆ ಬಿದ್ದು ಹೋಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ನೆರವು ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಪ್ರವಾಹ ಸಂದರ್ಭದಲ್ಲಿ ದೆಹಲಿಗೆ ಹೋಗುವುದು ಅನಿವಾರ್ಯತೆ ಏನಿತ್ತು” ಎಂದು ಪ್ರಶ್ನಿಸಿದ್ದಾರೆ.

ಇಂದು ರಾಜ್ಯದ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಧನ್ಯವಾದ ತಿಳಿಸಲು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಜನ ತತ್ತಿರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಎಂ ನೆರೆ ಸಂತ್ರಸ್ತರ ಸಂಕಷ್ಟ ಕೇಳುವ ಬದಲು ಧನ್ಯವಾದ ತಿಳಿಸಲು ದೆಹಲಿಗೆ ಹಾರಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಬೊಮ್ಮಾಯಿ ಸರ್ಕಾರ ಟೈಮ್ ಪಾಸ್ ಸರ್ಕಾರ ಎಂದು ದೂರಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights