ಪ್ರವಾಹವಾಗಿ 2 ವರ್ಷ ಕಳೆದರೂ ಸಿಕ್ಕಿಲ್ಲ ವಸತಿ; ಕ್ಷೌರಿಕನ ಅಂಗಡಿಯಲ್ಲೇ ಬದುಕುತ್ತಿದೆ ಕುಟುಂಬ!
ಕಳೆದ ಎರಡು ವರ್ಷಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಮೈಸೂರಿನ ಸರಗುರು ತಾಲ್ಲೂಕಿನ ಬಿಡರಹಳ್ಳಿಯ 40 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಈ ಗ್ರಾಮದ ಚೆಲುವಿ ಮತ್ತು ಅವರ ಕುಟುಂಬ ಮನೆ ಕಳೆದುಕೊಂಡಿದ್ದು, 2 ವರ್ಷಗಳಿಂದ ಕ್ಷೌರಿಕನ ಅಂಗಡಿಯಲ್ಲಿ ವಾಸಿಸುತ್ತಿದ್ದಾರೆ.
2019ರಲ್ಲಿ ಉಂಟಾದ ಪ್ರವಾಹದಿಂದ ಸರಗೂರು ತಾಲ್ಲೂಕಿನ ಕಬಿನಿ ತಗ್ಗು ಪ್ರದೇಶದ ಬಿದರಹಳ್ಳಿಯ ಗ್ರಾಮಸ್ಥರ ಮನೆಗಳು ನಾಶವಾಗಿವೆ. ಘಟನೆ ನಡೆದು ಎರಡು ವರ್ಷಗಳು ಕಳೆದಿದ್ದರೂ, ಅಧಿಕಾರಿಗಳು ಮತ್ತು ಸರ್ಕಾರ ನೀಡಿದ ಭರವಸೆಗಳು ಇನ್ನೂ ಕಾಗದದ ಆಳೆಗಳಲ್ಲೇ ಉಳಿದಿವೆ.
ಪ್ರವಾಹದಲ್ಲಿ ಹಲವಾರು ಮನೆಗಳು ಹಾನಿಗೊಳಗಾಗಿದ್ದು, ಸರ್ಕಾರವು ಆ ಹಳ್ಳಿಯ ಎತ್ತರದ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸುವುದಾಗಿಯೂ, 43 ಮನೆಗಳನ್ನು ನಿರ್ಮಿಸುವುದಾಗಿಯೂ ಹೇಳಿತ್ತು.ಜೊತೆಗೆ ಆ ಕುಟುಂಬಗಳಿಗೆ 50,000 ಪರಿಹಾರವನ್ನು ಒದಗಿಸಿತ್ತು.
ನಂತರ ವಸತಿ ಸಚಿವ ವಿ.ಸೋಮಣ್ಣ, ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರ ಜೊತೆಗೂಡಿ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ನಿರ್ಮಾಣವು ಆರಂಭವಾಯಿತು ಆದರೆ ವಿವಿಧ ಕಾರಣಗಳಿಂದಾಗಿ ಇದೂವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.
ಇದನ್ನೂ ಓದಿ: ಯುಎಪಿಎ ಅಡಿಯಲ್ಲಿ ಬುಡಕಟ್ಟು ಜನಾಂಗದ ದಮನ; ಪ್ರತಿ ವರ್ಷವೂ ಏರುತ್ತಲೇ ಇದೆ ಬಂಧನದ ಸಂಖ್ಯೆ!
“ಘಟನೆ ನಡೆದು ಎರಡು ವರ್ಷಗಳು ಕಳೆದಿವೆ. ಆದರೆ ಜನರ ಕುಂದುಕೊರತೆಗಳು ಇನ್ನೂ ಹಾಗೆ ಉಳಿದಿವೆ. ನಾವು ಪ್ರತಿಭಟನೆ ನಡೆಸಿ ನಿವಾಸಿಗಳನ್ನು ತಹಶೀಲ್ದಾರ್ ಮತ್ತು ಡಿಸಿ ಕಚೇರಿಗಳಿಗೆ ಕರೆದೊಯ್ದಿದ್ದೇವೆ. ಆದರೆ ಇಲ್ಲಿಯವರೆಗೆ ಏನೂ ಫಲ ನೀಡಿಲ್ಲ” ಎಂದು ಎಸ್ಯುಸಿಐ(ಸಿ) ಜಿಲ್ಲಾ ಕಾರ್ಯನಿರ್ವಾಹಕ ಸದಸ್ಯ ಟಿ.ಆರ್. ಸುನಿಲ್ ಹೇಳಿದ್ದಾರೆ.
ಕಬಿನಿ ಜಲಾಶಯ ನಿರ್ಮಾಣಕ್ಕಾಗಿ ಇಲ್ಲಿಗೆ ಬಂದ ಹಳ್ಳಿಯ ಜನರು ಮತ್ತು ಅವರ ಪೂರ್ವಜರು ಇಲ್ಲಿ ನೆಲೆಸಿದ್ದರು. ಅಲ್ಲದೆ, ಇತರ ಕೆಲಸಗಳನ್ನು ಮಾಡಿಕೊಂಡು ಜೀವನೋಪಾಯವನ್ನು ನಡೆಸುತ್ತಿದ್ದಾರೆ.
“ಕೊರೊನಾ ಸೋಂಕು ನಮ್ಮ ಜೀವನವನ್ನು ಶೋಚನೀಯಗೊಳಿಸಿದೆ. ಯಾವುದೇ ಕೆಲಸವಿಲ್ಲದೆ, ನಾವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದೇವೆ. ಇದರ ಜೊತೆಗೆ, ನಾವು ಭೂ ಕುಸಿತ ಮತ್ತು ಕಾಡು ಪ್ರಾಣಿಗಳ ಬೆದರಿಕೆಯ ಭಯದಲ್ಲಿ ಬದುಕುತ್ತಿದ್ದೇವೆ” ಎಂದು ಚೆಲುವಿ ಹೇಳಿದ್ದಾರೆ.
ಈ ಬಗ್ಗೆ ಕೇಳಿದಾಗ, “ಪುನರ್ವಸತಿಗಾಗಿ ನೀರಾವರಿ ಇಲಾಖೆಗೆ ಸೇರಿದ ಭೂಮಿಯನ್ನು ಆರಂಭದಲ್ಲಿ ಮಂಜೂರು ಮಾಡಲಾಯಿತು. ನಂತರ ಅದನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಕೆಲವು ತಿಂಗಳುಗಳನ್ನು ತೆಗೆದುಕೊಂಡಿತು. ಇನ್ನೇನು ಕೆಲಸ ಆರಂಭವಾಗಬೇಕಿತ್ತು. ಆದರೆ, ಕೊರೊನಾ ಅದಕ್ಕೆ ಅಡ್ಡಿಯುಂಟುಮಾಡಿತು” ಎಂದು ಸರಗೂರು ತಹಶೀಲ್ದಾರ್ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಸಂವಿಧಾನ ರಚನೆಯಲ್ಲಿ ವಿಳಂಬದ ಕುರಿತ 1949ರ ಕಾಟೂರ್ನ್; 2012ರಲ್ಲಿ ಸದ್ದು ಮಾಡಿದ್ದೇಕೆ?

