ಬಾಂಗ್ಲಾದೇಶಿ ಮಹಿಳೆಯ ಮೇಲೆ ‘ಅತ್ಯಾಚಾರ’; ಬಿಎಸ್‌ಎಫ್ ಯೋಧನ ಬಂಧನ!
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅರೆಸೇನಾ ಪಡೆಗಳ ಶಿಬಿರದೊಳಗೆ ವಿಚಾರಣೆ ನಡೆಸುವ ನೆಪದಲ್ಲಿ ಬಾಂಗ್ಲಾದೇಶದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಿಎಸ್ಎಫ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಅಕ್ರಮವಾಗಿ ಭಾರತದ ಗಡಿಯನ್ನು ಪ್ರವೇಶಿಸಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಿ, ಅರೆಸೇನಾ ಪಡೆಗಳ ಶಿಬಿರದಲ್ಲಿ ಇರಿಸಲಾಗಿತ್ತು. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರ ಮೇಲೆ ಆರೋಪಿ ಬಿಎಸ್ಎಫ್ ಸಬ್ ಇನ್ಸ್‌ಪೆಕ್ಟರ್‌ನನ್ನು ಗುರುವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಜುಲೈ 27 ರ ರಾತ್ರಿ ಈ ಘಟನೆ ನಡೆದಿದೆ. ಇದು ಬೆಳಕಿಗೆ ಬಂದ ನಂತರ, ಬಿಎಸ್ಎಫ್ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ಅಮಾನತುಗೊಳಿಸಿದ್ದೇವೆ” ಎಂದು ಅರೆಸೈನಿಕ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವಾಗ ಸಂತ್ರಸ್ತ ಮಹಿಳೆ ಮತ್ತು ಬಾಂಗ್ಲಾದೇಶದ ಗೋಪಾಲಗಂಜ್ ಮೂಲದ ಇನ್ನೊಬ್ಬ ಮಹಿಳೆಯನ್ನು ಬಂಧಿಸಲಾಗಿತ್ತು.
ಇಬ್ಬರು ಮಹಿಳೆಯರು ಕಾನೂನುಬಾಹಿರವಾಗಿ ಜೌಡಾಂಗಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸುತ್ತಿದ್ದಾರೆ. ಇವರನ್ನು ಬಿಎಸ್‌ಎಫ್‌ನ 158 ನೇ ಬೆಟಾಲಿಯನ್ ಸಿಬ್ಬಂದಿ ಬಂಧಿಸಿದ್ದಾರೆ.
ಇದನ್ನೂ ಓದಿ: ಕ್ವಾಟ್ರಾಸ್‌ಗೆ ಕರೆದೊಯ್ದು ಬುಡಕಟ್ಟು ಯುವತಿ ಮೇಲೆ ಅತ್ಯಾಚಾರ; ಅರಣ್ಯಾಧಿಕಾರಿ ಬಂಧನ!
“ಬಿಎಸ್ಎಫ್ ಸಿಬ್ಬಂದಿ ಇಬ್ಬರನ್ನೂ ಅರೆಸೇನಾ ಪಡೆಗಳ ಖರೆರ್ ಮಠ ಶಿಬಿರಕ್ಕೆ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಯಾರೂ ಇಲ್ಲದಿದ್ದಾಗ, ಆರೋಪಿ ಸೈನಿಕನು ಸಂತ್ರಸ್ತ ಮಹಿಳೆಯನ್ನು ವಿಚಾರಣೆ ಮಾಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು ಮಹಿಳೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಮತ್ತು ಬಂಗಾವ್ ಹೆಚ್ಚುವರಿ ಮುಖ್ಯ ನ್ಯಾಯಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆತನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯ ಗೌಪ್ಯ ಹೇಳಿಕೆಯನ್ನು ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ದಾಖಲಿಸಿದ್ದಾರೆ ಮತ್ತು ಆಕೆಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಕಿಯರ ಮೇಲೆ ಅತ್ಯಾಚಾರ; ರಾತ್ರಿ ವೇಳೆ ಮಕ್ಕಳನ್ನು ಏಕೆ ಕಳಿಸಬೇಕು ಎಂದ ಗೋವಾ ಸಿಎಂ!

