ರದ್ದಾದ ಕಾನೂನಿನ ಅಡಿಯಲ್ಲೂ 1000 ಪ್ರಕರಣ ದಾಖಲು; ರಾಜ್ಯ ಹಾಗೂ ಯುಟಿಗಳಿಗೆ ಸುಪ್ರೀಂ ನೋಟಿಸ್!
2015ರಲ್ಲಿಯೇ ರದ್ದು ಮಾಡಲಾಗಿರುವ ಐಟಿ ಕಾಯಿದೆಯ ‘ಸೆಕ್ಷನ್ 66 ಎ’ ಅಡಿಯಲ್ಲಿ ಇಂದಿಗೂ ಪ್ರಕರಣಗಳನ್ನು ದಾಖಸಿಲಾಗುತ್ತಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ದಾಖಲಾದ ಪ್ರಕರಣಗಳ ನೋಂದಣಿಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿದೆ. ಮಾತ್ರವಲ್ಲದೆ, ಹೈಕೋರ್ಟ್ಗಳಿಗೂ ಸೂಚನೆ ನೀಡುವುದಾಗಿ ತಿಳಿಸಿದೆ.
ರದ್ದುಗೊಳಿಸಲಾಗಿರುವ ಐಟಿ ಕಾಯ್ದೆ ‘ಸೆಕ್ಷನ್ 66 ಎ’ ಅಡಿಯಲ್ಲಿ ಜನರ ವಿರುದ್ದ ಇಂದಿಗೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಎನ್ಜಿಒವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಆರ್ಎಫ್ ನಾರಿಮನ್ ಮತ್ತು ಬಿ.ಆರ್. ಗವಾಯಿ ಅವರ ಪೀಠ, “ನ್ಯಾಯಾಂಗವನ್ನು ನಾವು ಪ್ರತ್ಯೇಕವಾಗಿ ನೋಡುತ್ತೇವೆ … ಮತ್ತು ಈ ವಿಷಯವು ನ್ಯಾಯಾಲಯಗಳಿಗೆ ಮಾತ್ರವಲ್ಲದೆ ಪೊಲೀಸರಿಗೂ ಸಂಬಂಧಿಸಿದೆ. ಹಾಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಲಾಗುವುದು” ಎಂದು ಹೇಳಿದೆ.
ಪೊಲೀಸ್ ರಾಜ್ಯ ವಿಷಯವಾಗಿರುವುದರಿಂದ, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿವಾದಿಯಾಗಿ ಮಾಡುವುದು ಉತ್ತಮ ಮತ್ತು ಈ ಸಂಬಂಧ ನಾವು ಒಂದು ಸಮಗ್ರ ಆದೇಶವನ್ನು ಜಾರಿಗೊಳಿಸಬಹುದು. ಇದರಿಂದ ಪ್ರಕರಣ ಒಂದೇ ಬಾರಿಗೆ ಇತ್ಯರ್ಥವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
“ಇಂದಿನಿಂದ ನಾಲ್ಕು ವಾರಗಳ ಅವಧಿಯಲ್ಲಿ ಇದನ್ನು ಮಾಡಬೇಕಾಗಿದೆ. ನಾಲ್ಕು ವಾರಗಳ ನಂತರ ವಿಷಯವನ್ನು ಪಟ್ಟಿ ಮಾಡಿ” ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಮೇಲೆ ಆರು ಮಂದಿ ಕಾಮುಕರಿಂದ ಅತ್ಯಾಚಾರ; ಮೂವರ ಬಂಧನ!
ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಎಂಬ ಎನ್ಜಿಒ – ಸೆಕ್ಷನ್ 66 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗುತ್ತಿದೆ. 2015ರ ನಂತರವೂ ಇದೂವರೆಗೂ 1,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ರದ್ದಾದ ಕಾನೂನನ್ನು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.
2012 ರಲ್ಲಿ ಶಿವಸೇನೆ ಸಂಸ್ಥಾಪಕ ಬಾಲ್ ಠಾಕ್ರೆ ನಿಧನದ ನಂತರ ನಗರವನ್ನು ಬಂದ್ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಕ್ಕೆ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಮುಂಬೈನ ಕಾನೂನು ವಿದ್ಯಾರ್ಥಿನಿ ಶ್ರೇಯಾ ಸಿಂಘಾಲ್ ಕೋರ್ಟ್ಗೆ ಮನವಿ ನೀಡಿದ್ದರು. ನಂತರ, ಸೆಕ್ಷನ್ 66 ಎ ಅನ್ನು ಮಾರ್ಚ್ 24, 2015 ರಂದು ರದ್ದುಗೊಳಿಸಲಾಯಿತು.
ರದ್ದಾದ ಸೆಕ್ಷನ್ 66ಎ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ “ಆಕ್ರಮಣಕಾರಿ ಸಂದೇಶಗಳನ್ನು ಪೋಸ್ಟ್ ಮಾಡುವ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುವ” ಅವಕಾಶ ಇತ್ತು.
ಇದನ್ನೂ ಓದಿ: ಆಗಸ್ಟ್ 1 ಮುಸ್ಲಿಂ ಮಹಿಳಾ ದಿನ: ತ್ರಿವಳಿ ತಲಾಖ್ ರದ್ದತಿ ಕಾನೂನು ಮುಸ್ಲಿಂ ಮಹಿಳೆಯರಿಗೆ ಹಾನಿಕಾರಕ: ಮುಸ್ಲಿಂ ಕಾನೂನು ಮಂಡಳಿ

