ತರಬೇತಿಯಲ್ಲಿದ್ದ ಮಹಿಳಾ ಪಿಎಸ್‌ಐ ಮೇಲೆ ಅತ್ಯಾಚಾರಕ್ಕೆ ಯತ್ನ; ಎಸ್‌ಐ ಅಮಾನತು – ಬಂಧನ!
ಪ್ರೊಬೆಷನರಿ ತರಬೇತಿಯಲ್ಲಿದ್ದ 29 ವರ್ಷದ ಮಹಿಳಾ ಪಿಎಸ್‌ಐ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ಸಬ್‌ಇನ್ಸ್‌ಪೆಕ್ಟರ್‌ಅನ್ನು ಅಮಾನತು ಗೊಳಿಸಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
2014ನೇ ಬ್ಯಾಚ್‌ನ ಶ್ರೀನಿವಾಸರೆಡ್ಡಿ ಎಂಬ ಎಸ್‌ಐ ತನ್ನ ಠಾಣೆಯಲ್ಲಿ ಪ್ರೊಬೆಷನರಿ ಪಿಎಸ್‌ಐ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಬೆಲ್ಲದ ಉಗ್ರಾಣದ ಮೇಲೆ ದಾಳಿ ನಡೆಸಬೇಕು ಎಂದು ಶ್ರೀನಿವಾಸ ರೆಡ್ಡಿ ಸೋಮವಾರ ರಾತ್ರಿ ಮಹಿಳಾ ಪಿಎಸ್‌ಐ ಅವರನ್ನು ತನ್ನ ಖಾಸಗಿ ವಾಹನದಲ್ಲಿ ಕರೆದೊಯ್ದಿದ್ದಾನೆ. ಆಕೆ ಉಳಿದ ಸಹೋದ್ಯೋಗಿಗಳ ಬಗ್ಗೆ ಕೇಳಿದಾಗ, ತನಗೆ ನಂಬಲರ್ಹ ಮೂಲದಿಂದ ಸುಳಿವು ಸಿಕ್ಕಿದೆ. ಈ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ಯಾರಿಗೂ ತಿಳಿಸಲು ಸಾಧ್ಯವಿಲ್ಲ ಎಂದು ಆತ ಹೇಳಿದ್ದಾನೆ. ನಂತರ, ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಅತ್ಯಾಚಾರಕ್ಕೆ ಯತ್ನಸಿದ್ದಾರೆ. ಆಕೆ ತೀವ್ರ ವೀರೋಧ ವ್ಯಕ್ತಪಡಿಸಿದ ನಂತರ ಆಕೆಯನ್ನು ಮತ್ತೆ ನಿವಾಸಕ್ಕೆ ತಂದು ಬಿಟ್ಟಿದ್ದಾನೆ ಎಂದು ವಾರಂಗಲ್ ಪೊಲೀಸ್ ಕಮೀಷನರ್ ತರುಣ್ ಜೋಷಿ ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಮಹಿಳಾ ಪಿಎಸ್‌ಐ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಶ್ರೀನಿವಾಸರೆಡ್ಡಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ ಮೂರು ವರ್ಷಗಳಲ್ಲಿ 348 ಜನರು ಪೊಲೀಸ್ ಕಸ್ಟಡಿಯಲ್ಲಿ ಸಾವು: 1189 ಜನರ ಮೇಲೆ ದೌರ್ಜನ್ಯ!