ಬಿವೈ ವಿಜಯೇಂದ್ರಗಿಲ್ಲ ಸಚಿವ ಸ್ಥಾನ : ಬೆರಳು ಕುಯ್ದುಕೊಂಡು ಅಭಿಮಾನಿ ಆಕ್ರೋಶ!
ಬಿವೈ ವಿಜಯೇಂದ್ರರಿಗೆ ಸಚಿವ ಸ್ಥಾನ ನೀಡದಕ್ಕೆ ಅಭಿಮಾನಿಯೊಬ್ಬರು ಬೆರಳು ಕುಯ್ದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದಾರೆ. ಆದರೆ ನಿರೀಕ್ಷೆಯಂತೆ ಬಿವೈ ವಿಜಯೇಂದ್ರ ಅವರಿಗೆ ಸ್ಥಾನ ನೀಡಲಾಗಿಲ್ಲ. ಹೀಗಾಗಿ ಮಂಡ್ಯದ ಶಿವಕುಮಾರ್ ಆರಾಧ್ಯ ಬೆರಳು ಕುಯ್ದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
‘ವಿಜಯೇಂದ್ರ ಇಲ್ಲದಿದ್ರೆ ಅದು ಸಚಿವ ಸಂಪುಟವೇ ಅಲ್ಲ. ನನಗೆ ನೋವಾಗುತ್ತಿದೆ. ಸಾಯಬೇಕು ಅನ್ಸುತ್ತಿದೆ. ಸತ್ತರೆ ನನಗೂ ಕುಟುಂಬ ಇದೆ. ನಮ್ಮ ಸಾಹೇಬರ ಮಗನನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ. ಅವರೇನ್ ಪಕ್ಷ ಕಟ್ಟಿದ್ದಾರಾ? ಸೈಕಲ್ ತುಳಿದು ಬಿಎಸ್ ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ. ನನ್ನ ನೋವು ರಕ್ತದ ಮೂಲಕ ಹೈಕಮಾಂಡ್ ಗೆ ತಿಳಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಬೆರಳು ಕುಯ್ದುಕೊಂಡು ವಿಜಯೇಂದ್ರ ಅಭಿಮಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಮನನೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಾಲಾಪುರ ಗ್ರಾಮದ ರವಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಂಡ ರವಿ ಕುಟುಂಬಕ್ಕೆ ಭೇಟಿ ನೀಡಿದ ಯಡಿಯೂರಪ್ಪ 5 ಲಕ್ಷ ರೂಪಾಯಿ ಪರಿಹಾರ ನೀಡಿದರು.ಜೊತೆಗೆ ಅವರ ಮನೆ ದುರಸ್ಥಿ ಮಾಡಿಸಲೂ ಇನ್ನೂ 5 ಲಕ್ಷ ರೂ. ನೀಡುವ ಭರವಸೆ ನೀಡಿದ್ದರು.