ಹತಾಶರಾದ ಕಾಬೂಲ್‌ನಲ್ಲಿರುವ ಭಾರತೀಯ ಕಾರ್ಮಿಕರು : ತಮ್ಮನ್ನು ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಮನವಿ!
ತಾಲಿಬಾನ್ ಉಗ್ರರು ಆಕ್ರಮಿಸಿಕೊಂಡಿರುವ ಕಾಬೂಲ್‌ನಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರು ತಮ್ಮನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಫಘಾನಿಸ್ತಾನವನ್ನು ತಾಲಿಬಾನ್‌ಗಳು ಸ್ವಾಧೀನಪಡಿಸಿಕೊಂಡಿದ್ದರಿಂದ ಕಾಬೂಲ್‌ನಲ್ಲಿ ಸಿಲುಕಿರುವ ಭಾರತೀಯ ಕಾರ್ಮಿಕರು ತಮ್ಮನ್ನು ಸ್ಥಳಾಂತರಿಸುವಂತೆ ಭಾರತ ಸರ್ಕಾರವನ್ನು ವಿನಂತಿಸಿದ್ದಾರೆ.
“ನಮ್ಮ ಕುಟುಂಬಗಳು ಅಳುತ್ತಿವೆ. ನಾವು ಇಲ್ಲಿಂದ ಹೊರಬರಲು ಹತಾಶರಾಗಿದ್ದೇವೆ. ನಾವು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದೆವು. ಆದರೆ ಅದಕ್ಕೆ ಪ್ರತಿಕ್ರಿಯೆ ಸಿಗುತ್ತಿಲ್ಲ. ನಾವು ಕಳುಹಿಸಿದ ಸಂದೇಶವನ್ನು ಮಾತ್ರ ಸ್ವೀಕರಿಸಲಾಗಿದೆ” ಎಂದು ಉತ್ತರ ಪ್ರದೇಶದ ಚಂದೌಲಿಯಿಂದ ಬಂದ ಕಾರ್ಮಿಕನಾದ ಸೂರಜ್ ವೀಡಿಯೋವೊಂದನ್ನ ಹರಿಬಿಟ್ಟಿದ್ದಾರೆ.
ಸೂರಜ್ ಪೋಷಕರು, ಪತ್ನಿ, ಮಗ ಮತ್ತು ಸಹೋದರ ಚಂದೌಲಿಯ ಮೊಘಲಸರೆಯಲ್ಲಿ ವಾಸಿಸುತ್ತಿದ್ದಾರೆ. ವೆಲ್ಡರ್ ಆಗಿ ಕೆಲಸ ಮಾಡುತ್ತಿರುವ ಸೂರಜ್, ಈ ವರ್ಷ ಜನವರಿಯಲ್ಲಿ ಕಾಬೂಲ್ ಗೆ ಹೋಗಿದ್ದರು. ಆದರೆ ಇದೇ ಸಂದರ್ಭದಲ್ಲಿ ತಾಲಿಬಾನಿಗಳು ಅಫಘಾನಿಸ್ತಾನ್ ನನ್ನು ಆಕ್ರಮಿಸಿಕೊಂಡಿದ್ದು ಕಾಬೂಲ್ ನಿಂದ ತಾಯ್ನಾಡಿಗೆ ಬರಲಾಗದೇ ಹತಾಶರಾಗಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಉನ್ನತ ಮಟ್ಟದಲ್ಲಿ ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ. ಕಳೆದ ಕೆಲವು ದಿನಗಳಲ್ಲಿ ಕಾಬೂಲ್‌ನಲ್ಲಿ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. “ಅಫ್ಘಾನಿಸ್ತಾನದಲ್ಲಿ ಇನ್ನೂ ಕೆಲವು ಭಾರತೀಯರು ಹಿಂದಿರುಗಲು ಬಯಸಿದ್ದಾರೆ ಮತ್ತು ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಬಾಗ್ಚಿ ಹೇಳಿದ್ದರು.
“ನಾವು ಅಫ್ಘಾನ್ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಫ್ಘಾನಿಸ್ತಾನವನ್ನು ತೊರೆಯಲು ಇಚ್ಛಿಸುವವರನ್ನು ಭಾರತಕ್ಕೆ ವಾಪಸ್ ಕಳುಹಿಸಲು ನಾವು ಅನುಕೂಲ ಮಾಡಿಕೊಡುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರರು ಹೇಳಿದ್ದಾರೆ. ಆದರೆ ಸೂರಜ್ ಹೇಳಿಕೆಯ ವೀಡಿಯೋ ಸದ್ಯ ಭಾರೀ ಸಂಚಲನ ಮೂಡಿಸಿದೆ.
ಭಾರತೀಯ ವಾಯುಪಡೆಯ ಸಿ -17 ವಿಮಾನ 120 ಭಾರತೀಯ ಅಧಿಕಾರಿಗಳೊಂದಿಗೆ ಮಂಗಳವಾರ ಬೆಳಿಗ್ಗೆ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಟಿತು. ಪ್ರಯಾಣಿಕರಲ್ಲಿ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ, ಐಟಿಬಿಪಿ ಸಿಬ್ಬಂದಿ ಮತ್ತು ನಾಲ್ವರು ಮಾಧ್ಯಮದವರು ಸೇರಿದ್ದಾರೆ.
ಯುಎಸ್ ಸೈನ್ಯದ ನಿರ್ಗಮನದ ನಂತರ ತಾಲಿಬಾನ್ ಅಫ್ಘಾನಿಸ್ತಾನವನ್ನು ಮತ್ತೆ ವಶಪಡಿಸಿಕೊಂಡಿದೆ. ಹೀಗಾಗಿ ಅಫ್ಘಾನಿಸ್ತಾನದಿಂದ ಹೊರಬರಲು ಹತಾಶರಾಗಿ ಸಾವಿರಾರು ಜನರು ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಾಣದ ಹಂಗು ತೊರೆದು ವಿಮಾನ ಹತ್ತುವ ದೃಶ್ಯಗಳು ಕಂಡುಬಂದವು.
ಭಾನುವಾರ ತಾಲಿಬಾನ್ ರಾಜಧಾನಿ ಕಾಬೂಲ್ ಮೇಲೆ ಹಿಡಿತ ಸಾಧಿಸಿತು. ದೇಶಕ್ಕೆ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಎಂದು ಮರುನಾಮಕರಣ ಮಾಡಲಾಗಿದೆ.