ರಾಜ್ಯಕ್ಕೆ ಕೈಕೊಟ್ಟ ಕೇಂದ್ರ: ಯೋಜನೆಗಳಿಗಿಲ್ಲ ಅನುದಾನ; ಹಲವು ಯೋಜನೆಗಳು ಸ್ಥಗಿತ!

ಕೇಂದ್ರ ಸರ್ಕಾರ ದೇಶದಲ್ಲಿ ಜಿಎಸ್‌ಟಿ ಜಾರಿಗೆ ತಂದಾಗಿನಿಂದ ಜಿಎಸ್‌ಟಿ ಪರಿಹಾರದ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಸರಿಯಾದ ರೀತಿಯಲ್ಲಿ ಜಿಎಸ್‌ಟಿ ಪರಿಹಾರವನ್ನು ನೀಡುತ್ತಿಲ್ಲ ಎಂಬ ಆರೋಪ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಇದೆ. ಇರದಲ್ಲಿ ಕರ್ನಾಟಕವೇನೂ ಹೊರತಾಗಿಲ್ಲ.

ಕೇವಲ ಜಿಎಸ್‌ಟಿ ಪರಿಹಾರ ಮಾತ್ರವಲ್ಲದೆ, ಕೇಂದ್ರ ಸರ್ಕಾರವೇ ಜಾರಿಗೆ ತಂದಿರುವ ಹಲವು ಯೋಜನೆಗಳಿಗೂ ಕೇಂದ್ರ ಸರ್ಕಾರ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂಬುದು ಇದೀಗ ಮುನ್ನಲೆಗೆ ಬಂದಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಾದ ಸ್ವಚ್ಛ ಭಾರತ್ ಮಿಷನ್, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಸೇರಿದಂತೆ ಹತ್ತು ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಬಿಡಿಗಾಸು ಕೂಡ ಬಿಡುಗಡೆ ಮಾಡಿಲ್ಲ. ಅಲ್ಲದೆ, ರಾಜ್ಯ ಸರ್ಕಾರ ಕೂಡ ತಾನು ಹೊಂದಾಣಿಕೆ ಮಾಡಬೇಕಾದ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಬಹುತೇಕ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದೆ.

ಅಲ್ಲದೆ, ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ, ತೋಟಗಾರಿಕೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯದ ಪಾಲುದಾರಿಕೆಯ ಹತ್ತು ಯೋಜನೆಗಳಿಗೂ ಜುಲೈ ಅಂತ್ಯದವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಪ್ರಜಾವಾಣಿ ಪತ್ರಿಕೆ ವಿಶೇಷ ವರದಿ ಮಾಡಿದೆ.

ಗ್ರಾಮ ಸಡಕ್‌, ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಆವಾಸ್, ಕೃಷಿ ಯಾಂತ್ರಿಕತೆಯ ಮೇಲಿನ ಉಪ ಅಭಿಯಾನ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ಸಂವಿಧಾನದ 275(1)ನೇ ವಿಧಿಯಡಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆ ಮತ್ತು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅನುದಾನವೇ ಬಿಡುಗಡೆಯಾಗಿಲ್ಲ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಶೀಲನಾ ಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳೇ ಬಹಿರಂಗಪಡಿಸಿವೆ.

 ಚಿತ್ರ ಕೃಪೆ: ಪ್ರಜಾವಾಣಿ
ಚಿತ್ರ ಕೃಪೆ: ಪ್ರಜಾವಾಣಿ

ಏಳು ಯೋಜನೆಗಳು ಆರಂಭವೇ ಆಗಿಲ್ಲ:

ಹತ್ತು ಯೋಜನೆಗಳ ಪೈಕಿ ಏಳು ಯೋಜನೆಗಳು ಇನ್ನೂ ಆರಂಭವನ್ನೇ ಪಡೆದುಕೊಂಡಿಲ್ಲ. ಆದರೆ, ಪಂಚಾಯತ್ ರಾಜ್‌ ಇಲಾಖೆ ಮತ್ತು ವಸತಿ ಇಲಾಖೆಗಳು ಹಿಂದಿನ ವರ್ಷದ ಅನುದಾನವನ್ನೇ ಬಳಸಿಕೊಂಡು ಕಾಮಗಾರಿ ಆರಂಭಿಸಿವೆ. ಹಿಂದಿನ ವರ್ಷದ ಅನುದಾನದಲ್ಲಿ 334.64 ಕೋಟಿ ರೂ.ಗಳನ್ನು ಬಳಕೆ ಮಾಡಲು ಪಂಚಾಯತ್ ರಾಜ್ ಇಲಾಖೆ ಕ್ರಿಯಾಯೋಜನೆ ರೂಪಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಡಿಯಲ್ಲಿ ಗ್ರಾಮ ಸಡಕ್‌ ಯೋಜನೆಗೆ ಕೇಂದ್ರ ಸರ್ಕಾರ 900 ಕೋಟಿ ರೂ. ಮತ್ತು ರಾಜ್ಯ ಸರ್ಕಾರ 600 ಕೋಟಿ ರೂ ಅನುದಾನ ನೀಡಬೇಕು. ಆದರೆ, ಈ ಆರ್ಥಿಕ ವರ್ಷದಲ್ಲಿ ಇದೂವರೆಗೂ ಯಾವುದೇ ಅನುದಾನವನ್ನು ಎರಡೂ ಸರ್ಕಾರಗಳು ಬಿಡುಗಡೆ ಮಾಡಿಲ್ಲ. ಹೀಗಾಗಿ, ಹಿಂದಿನ ಆರ್ಥಿಕ ವರ್ಷದಲ್ಲಿ ಉಳಿದಿದ್ದ 271.36 ಕೋಟಿ ರೂ. ಗಳಲ್ಲಿ 251.39 ಕೋಟಿ ರೂ.ಗಳನ್ನು ಬಳಕೆ ಮಾಡಲು ಮುಂದಾಗಿರುವ ಇಲಾಖೆ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ಸ್ವಚ್ಛ ಭಾರತ ಯೋಜನೆಗೆ ಕೇಂದ್ರ ಸರ್ಕಾರ 249.60 ಕೋಟಿ ರೂ ಮತ್ತು ರಾಜ್ಯ ಸರ್ಕಾರ 166.40 ಕೋಟಿ ರೂ ಒದಗಿಸಬೇಕಿದೆ. ಈ ಯೋಜನೆಯಡಿ 680.23 ಕೋಟಿ ರೂ ಪ್ರಾರಂಭಿಕ ಶಿಲ್ಕು ಇತ್ತು. ಅದರಲ್ಲೇ 83.25 ಕೋಟಿ ರೂ ಬಳಕೆ ಮಾಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆಯ ಅನುಷ್ಠಾನಕ್ಕೆ ಜೀವ ತುಂಬುತ್ತಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಕೇಂದ್ರ 300 ಕೋಟಿ ರೂ ಮತ್ತು ರಾಜ್ಯ 200 ಕೋಟಿ ರೂ ವೆಚ್ಚ ಮಾಡಬೇಕಿದೆ. ಈ ಯೋಜನೆಯಡಿ ಕಳೆದ ವರ್ಷ ಒದಗಿಸಿದ್ದ ಅನುದಾನದಲ್ಲಿ 404.77 ಕೋಟಿ ರೂ ಉಳಿಕೆಯಾಗಿತ್ತು. ಅದರಲ್ಲಿ 26.81 ಕೋಟಿ ರೂ ಮಾತ್ರ ಬಳಕೆ ಮಾಡಲಾಗಿದೆ.

ಆರ್ಥಿಕ ಇಲಾಖೆಯಿಂದ ನಿರ್ಬಂಧ: 

ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ವಿಳಂಬವಾದರೂ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ, ಕೋವಿಡ್‌, ಜಿಎಸ್‌ಟಿ ಪಾಲು ಹಂಚಿಕೆ ಮತ್ತು ಪರಿಹಾರದ ಮೊತ್ತದಲ್ಲಿ ಕಡಿತವಾಗಿರುವುದರಿಂದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರವು ಮುಂಗಡವಾಗಿ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡಬಾರದು ಎಂದು ಆರ್ಥಿಕ ಇಲಾಖೆ ನಿರ್ಬಂಧ ವಿಧಿಸಿರುವುದಾಗಿ ಮೂಲಗಳು ತಿಳಿಸಿವೆ.

Read Also: 2023ರ ವಿಧಾನಸಭೆ ಚುನಾವಣೆಗೆ 102 ಜೆಡಿಎಸ್‍ ಅಭ್ಯರ್ಥಿಗಳ ಪಟ್ಟಿ ಸಿದ್ದವಿದೆ: ಹೆಚ್‌ಡಿ ಕುಮಾರಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights