ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ : ಬೆದರಿದ ಎತ್ತುಗಳು – ಆಯತಪ್ಪಿ ಕೆಳಗಡೆ ಬಿದ್ದ ‘ಕೈ’ ಶಾಸಕರು..!

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಂದು ನಗರದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ವೇಳೆ ಎತ್ತುಗಳು ಹೆದರಿ ಬಂಡಿಯಲ್ಲಿದ್ದ ನಾಲ್ಕೈದು ಶಾಸಕರು ಕೆಳ ಬಿದ್ದ ಘಟನೆ ನಡೆದಿದೆ.

ದಿನದಿಂದ ದಿನಕ್ಕೆ ರಾಜ್ಯದ ಜನತೆಗೆ ಬೆಲೆ ಏರಿಕೆ ನುಂಗಲಾರದ ತುತ್ತಾಗಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿವಂತೆ ಆಗ್ರಹಿಸಿ ಬೆಂಗಳೂರಿನ ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಪ್ರತಿಭಟನೆ ವೇಳೆ ಎತ್ತಿನ ಬಂಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ,ಹೆಚ್.ಕೆ.ಪಾಟೀಲ್,ಅಂಜಲಿ ನಿಂಬಾಳ್ಕರ್, ವೀಣಾ ಅಚ್ಚಯ್ಯ,ಕುಸುಮ ಶಿವಳ್ಳಿ, ಪ್ರಿಯಾಂಕ್ ಖರ್ಗೆ, ಶಾಸಕರು ವಿಧಾನಸೌಧ ಚಲೋ ಹಮ್ಮಿಕೊಂಡಿದ್ದರು. ಪ್ರತಿಭಟನಾ ರ್ಯಾಲಿ ವಿಧಾನಶೌಧಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಎತ್ತು ಎರಡು ಕಾಲುಗಳನ್ನು ಎತ್ತಿದ್ದರಿಂದ ಬಂಡಿಯಲ್ಲಿದ್ದ ಶಾಸಕರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಸಂಗಮೇಶ್, ಅಶೋಕ್ ಪಟ್ಟಣ ವಿಧಾನ ಸೌಧ ಗೇಟ್ ಬಳಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಕಾರ್ಯಕರ್ತರು ಅವರನ್ನು ಮೇಲೆತ್ತುವ ಮೂಲಕ ಮತ್ತೆ ಎತ್ತಿನ ಬಂಡಿಗೆ ಹತ್ತಿಸಿದರು.

ಇಂದು ವಿಧಾನಸೌಧ ಸದನದಲ್ಲಿ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಿದ ಕೈ ನಾಯಕರು ನೂರಾರು ಕಾರ್ಯಕರ್ತರು ಸಮ್ಮುಖದಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಎತ್ತಿನ ಬಂಡೆಯಲ್ಲಿ ಏಳೆಂಟು ಜನ ನಿಂತಿದ್ದರಿಂದ ಎತ್ತುಗಳಿಗೆ ಭಾರ ಹೆಚ್ಚಾಗಿ ಜೊತೆಗೆ ಅಧಿಕ ಜನಗಳಿಂದ ಹೆದರಿದ ಎತ್ತುಗಳು ಕಾಲುಗಳು ಎತ್ತಿವೆ. ತಕ್ಷಣ ಆಯತಪ್ಪಿ ಮೂರು ನಾಲ್ಕು ಶಾಸಕರು ಎತ್ತಿನ ಬಂಡಿಯಿಂದ ಕೆಳಗೆ ಬಿದ್ದಿರುವುದು ಕಂಡು ಬಂತು. ಇನ್ನೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ಕೈಹಿಡಿದು ಕೆಳಗೆ ಬೀಳುವುದರಿಂದ ಬಚಾವ್ ಆಗಿದ್ದಾರೆ.

ವಿಧಾನಸೌಧಕ್ಕೆ ಪ್ರವೇಶಕ್ಕೆ ಪೊಲೀಸರು ನಿರಾಕರಿಸಿದರೂ ಮನವೊಲಿಸುವ ಮೂಲಕ ಎತ್ತುಗಳು ವಿಧಾನಸೌಧದ ಒಳಗೆ ಪ್ರವೇಶಿಸುತ್ತಿದ್ದಂತೆ ಈ ಘಟನೆ ನಡೆದಿದೆ. ಇನ್ನೂ ನಗುತ್ತಲೇ ಕೆಳಗೆ ಬಿದ್ದ ಶಾಸಕರು ಮೇಲೇಳುತ್ತಾ ಮತ್ತೆ ಎತ್ತಿನ ಬಂಡಿ ಹತ್ತಿದ್ದಾರೆ.

 

 

Spread the love

Leave a Reply

Your email address will not be published. Required fields are marked *