ಕರ್ನಾಟಕ ಅಧಿವೇಶನ: ಆನ್‌ಲೈನ್ ಜೂಜು ನಿಷೇಧಕ್ಕೆ ಮಸೂದೆ ಮಂಡನೆ; ಅಂಗೀಕಾರವಾದರೆ ಅಪರಾಧಿಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ!

ಕರ್ನಾಟಕ ಪೊಲೀಸ್ ಕಾಯ್ದೆ, 1963 ಕ್ಕೆ ತಿದ್ದುಪಡಿ ಮಾಡುವ ಮೂಲಕ ರಾಜ್ಯದಲ್ಲಿ ಆನ್‌ಲೈನ್ ಜೂಜಾಟ ಅಥವಾ ಮೊಬೈಲ್ ಫೋನ್ ಅಪ್ಲಿಕೇಶನ್‌ಗಳಲ್ಲಿ ಬೆಟ್ಟಿಂಗ್ ಅನ್ನು ನಿಷೇಧಿಸುವ ಮಸೂದೆಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿದ್ದಾರೆ.

ಮುಂದಿನ ವಾರ ವಿಧಾನಸಭೆಯಲ್ಲಿ ಇದು ಚರ್ಚೆಗೆ ಬರಲಿದೆ. ಮಸೂದೆಯು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಪ್ರಕಾರ ಎಲ್ಲ ರೀತಿಯ ಆನ್‌ಲೈನ್ ಜೂಜಾಟವನ್ನು ನಿರ್ಬಂಧಿಸಲು ಪ್ರಸ್ತಾಪಿಸಿದೆ. ಅಲ್ಲದೆ, ಕ್ರಿಕೆಟ್‌ ಸೇರಿದಂತೆ ಹಣದ ರೂಪದಲ್ಲಿ ಜೂಜು ಮತ್ತು ಬೆಟ್ಟಿಂಗ್ ಮತ್ತು ಹಣ ವರ್ಗಾವಣೆಯು ಕೂಡ ಮಸೂದೆಯ ವ್ಯಾಪ್ತಿಗೆ ಬರಲಿದೆ.

ತಿದ್ದುಪಡಿ ಮಸೂದೆಯು ಅಂಗೀಕಾರ ಪಡೆದರೆ, ಆನ್‌ಲೈನ್ ಜೂಜನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡುತ್ತದೆ. ಅಪರಾಧ ಸಾಬೀತಾದರೆ, ರೂ. 25,000 ದಿಂದ 1 ಲಕ್ಷದವರೆಗೆ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮೊದಲ ಅಪರಾಧಕ್ಕೆ, ಒಂದು ವರ್ಷ ಜೈಲು ಶಿಕ್ಷೆಯೊಂದಿಗೆ 1,000 ರೂ ದಂಡ ಎಂದು ಹೇಳಲಾಗಿದೆ.

ವಿರೋಧ ಪಕ್ಷಗಳು ಕರ್ನಾಟಕದಾದ್ಯಂತ ಕೆಲವು ಕ್ಲಬ್‌ಗಳಲ್ಲಿ ಮನರಂಜನೆಯ ನೆಪದಲ್ಲಿ ನಡೆಯುತ್ತಿರುವ ಜೂಜಿನ ವಿಷಯವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ.

ತಮಿಳುನಾಡು ವಿಧಾನಸಭೆಯಲ್ಲಿ ಇದೇ ರೀತಿಯ ಮಸೂದೆಯನ್ನು ಅಂಗೀಕರಿಸಲಾಯಿತು ಮತ್ತು ಕೆಲವು ಮಧ್ಯಸ್ಥಗಾರರು, ವಿಶೇಷವಾಗಿ ಗೇಮಿಂಗ್ ತಂತ್ರಜ್ಞಾನ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ: ‘ನಾನು ಯಾರ ಬೂಟ್ ನೆಕ್ಕಿಲ್ಲ’ – ಬೊಮ್ಮಾಯಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights