ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್ ನೀಡುವಂತಹ ಆರ್ಥಿಕ ಪರಿಸ್ಥಿತಿ ಇಲ್ಲ: ಸಾರಿಗೆ ಸಚಿವ ಶ್ರೀರಾಮುಲು

ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತಹ ಆರ್ಥಿಕ ಪರಿಸ್ಥಿತಿ ಸದ್ಯಕ್ಕೆ ರಾಜ್ಯದಲ್ಲಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಜೆಡಿಎಸ್‍ ಸದಸ್ಯೆರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಂದು ಲಕ್ಷ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಲಾಗಿದೆ. ಹಿಂದುಳಿದ ವರ್ಗಗಳ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‍ ಪಾಸ್ ನೀಡಲು ಆರ್ಥಿಕ ಪರಿಸ್ಥಿತಿ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಆದರೆ, ಅಂತಹ ಆರ್ಥಿಕ ಸ್ಥಿತಿ ಈಗ ಇಲ್ಲ ಎಂದು ಹೇಳಿದ್ದಾರೆ.

ಯಾರಿಗೋ ಲಾಭ ಮಾಡಿಕೊಡುವ ಸಲುವಾಗಿ ಸೇವಾ ಸಿಂಧು ಅಪ್ಲಿಕೇಷನ್ ಮಾಡಲಾಗಿದೆ. ಅದರಲ್ಲಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು 150 ರೂ. ಪಾವತಿಸಬೇಕು. ಕಚೇರಿಗೆ ಅಲೆಯಬೇಕು. ಪ್ರತಿ ವರ್ಷ ಪಾಸ್ ನವೀಕರಣಕ್ಕೆ ಹೊಸ ಪ್ರಕ್ರಿಯೆಗಳನ್ನೇ ಪಾಲನೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಜೆಡಿಎಸ್‌ ಎಂಎಲ್‌ಸಿ ಮರಿತಿಬ್ಬೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಸಾರಿಗೆ ಇಲಾಖೆಗೆ 2781 ಹುದ್ದೆಗಳು ಮಂಜೂರಾಗಿದ್ದು, 1252 ಮಂದಿ ಕೆಲಸ ಮಾಡುತ್ತಿದ್ದಾರೆ. 1529 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಈಗಾಗಲೇ ಕೆಪಿಎಸ್‍ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಭರ್ತಿ ಮಾಡಲಾಗುವುದು ಎಂದೂ ಶ್ರೀರಾಮುಲು ಹೇಳಿದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ ಅಮರೀಂದರ್ ಸಿಂಗ್ ಮೇಲೆ ಬಿಜೆಪಿಯಲ್ಲಿ ಹೊಸ ಪ್ರೀತಿ, ಗೌರವ; ಕೇಸರಿ ಪಡೆ ಹೊಸ ಗೇಮ್‌ಪ್ಲಾನ್‌!

Spread the love

Leave a Reply

Your email address will not be published. Required fields are marked *