ಕಲಬುರಗಿಯಲ್ಲಿ ಬಾಲಕಿ ಅನುಮಾನಾಸ್ಪದ ಸಾವು : ಇಬ್ಬರ ವಿರುದ್ಧ ದೂರು..!
ಕಲಬುರಗಿಯ ಪಾಣೆಗಾಂವ್ ನಲ್ಲಿ ಕಟ್ಟಿಗೆ ತರಲು ಹೋದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
15 ವರ್ಷದ ಪಾಯಲ್ ಮೃತ ಬಾಲಕಿ. ಈಕೆ ನಿನ್ನೆ ಮದ್ಯಾಹ್ನ 3 ಗಂಟೆಯ ಸುಮಾರಿಗೆ ಕಟ್ಟಿಗೆ ತರಲು ಹೋಗಿದ್ದಳು. ಕಟ್ಟಿಗೆ ತರುವಾಗ ಹಿಂದಿನಿಂದ ಬಂದ ಇಬ್ಬರು ಯುವಕರು ಬಾಲಕಿಗೆ ವಿಷ ಕುಡಿಸಿದ್ದಾರೆಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಇಬ್ಬರು ಬಾಲಕಿಗೆ ಒತ್ತಾಯಪೂರ್ವಕವಾಗಿ ವಿಷ ನೀಡಿದ್ದಾರೆಂದು ಬಾಲಕಿ ಅಸ್ವಸ್ಥಳಾಗುವ ಮುನ್ನ ತಮಗೆ ತಿಳಿಸಿದ್ದಾಳೆ ಎಂದು ಪೋಷಕರು ದೂರಿದ್ದಾರೆ. ಕಟ್ಟಿಗೆ ತರಲು ಹೋದ ಬಾಲಕಿ ಮನೆಗೆ ಬಂದು ತೀವ್ರ ಅಸ್ವಸ್ಥಳಾದಾಗ ವಿಚಾರ ಹೇಳಿಕೊಂಡಿದ್ದಾಳೆ. ಆದರೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರಿಂದ ವ್ಯಕ್ತಿಗಳ ಗುರುತು ಆಕೆಗೆ ಪತ್ತೆಹಚ್ಚಲಾಗಿಲ್ಲ. ತೀವ್ರ ಅಸ್ವಸ್ಥಳಾದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಆರೋಪಿತರನ್ನು ಪಾಣೆಗಾಂವ್ ನ ಸುನೀಲ್ ಮತ್ತು ಆತನ ಸ್ನೇಹಿತ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹಳೇ ವೈಷ್ಯಮ್ಯದಿಂದ ವಿಷ ಕುಡಿಸಿರುವ ಆರೋಪ ಕೇಳಿಬಂದಿದ್ದು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.