ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಬಗ್ಗೆ ಮೋದಿ ಬೆಂಬಲಿಗಳಿಂದ ಅವಹೇಳನ; ಸಾಹಿತ್ಯ ಪ್ರೇಮಿಗಳ ಆಕ್ರೋಶ

ಕನ್ನಡದ ಮಹತ್ವದ ಸಾಹಿತಿ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಮತ್ತು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿರುವ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಬಗ್ಗೆ ಅವಹೇಳಕಾರಿಯಾಗಿ ಹಿಯಾಳಿಸಿರುವ ಘಟನೆ ಸೋಮವಾರದಂದು ನಡೆದಿದೆ.

ಸಾಮಾಜಿಕ ಜಾಲತಾಣವಾದ ಕ್ಲಬ್‌ ಹೌಸ್‌ನಲ್ಲಿ ‘ನಾಲೇಜ್ ಹೌಸ್ ಕನ್ನಡ’ ಎಂಬ ಗ್ರೂಪಿನಲ್ಲಿ ನಡೆದ ಚರ್ಚೆಯೊಂದರಲ್ಲಿ ದಿವ್ಯ ನಾಯಕ್ ಎಂಬ ಬಿಜೆಪಿ ಬೆಂಬಲಿಗ ಯುವತಿಯೊಬ್ಬರು, “ಕುವೆಂಪು ಅವರಿಗೆ ಗೌರವ ಯಾಕೆ ಕೊಡಬೇಕು? ಯಾರಿಗಾದರೂ ಗೌರವ ಕೊಡುವುದು ಅಥವಾ ಕೊಡದೇ ಇರುವುದು ನನ್ನ ವೈಯಕ್ತಿಕ ಆಯ್ಕೆ. ಕುವೆಂಪು ರಾಮಾಯಣ is something fuck all shit” ಎಂದು ಹೇಳಿದ್ದಾರೆ.

“ಅದನ್ನು ಫಾಲೋ ಮಾಡುವುದಾಗಲಿ, ರೆಫರ್‌ ಮಾಡುವುದಾಗಲಿ ಮಾಡಬೇಡಿ. ಮೂಲ ಕೃತಿಗಳನ್ನು ಓದಿ. ಕುವೆಂಪು ಆಗಲಿ, ಕುವೆಂಪು ಅಪ್ಪ ಆಗಲಿ, ಯಾರೇ ಆಗಲಿ, ಹಿಂದೂಗಳಾಗಿ ಮೂಲ ಕೃತಿಗಳನ್ನು ಓದಿ. ಪುರಸ್ಕಾರ ಬಂದರೆ ಅವರೇನು ದೊಡ್ಡವರಲ್ಲ, ಪುರಸ್ಕಾರ ಎಷ್ಟೋ ಜನರಿಗೆ ಬಂದಿದೆ. ಅವರ (ಬಿಜೆಪಿಯೇತರ) ಸರ್ಕಾರ ಇದ್ದಾಗ ದೇಶ ವಿರೋಧಿಗಳಿಗೆ ಕೂಡಾ ಪುರಸ್ಕಾರ ಬಂದಿದೆ” ಎಂದು ವಿವಾದ ಸೃಷ್ಟಿಸಿದ್ದಾರೆ.

ಅವರ ಹೇಳಿಕೆಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಯುವತಿಯು ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರ ಆಪ್ತೆ ಎಂದು ಆರೋಪಿಸಲಾಗಿದೆ. “ಕ್ಲಬ್-ಹೌಸಿನಲ್ಲಿರುವ ಚಕ್ರತೀರ್ಥನ ಸಂಬಂಧಿಗಳಿಗೇಕೆ ಕುವೆಂಪುರವರ ಮೇಲೆ ದ್ವೇಷ?” ಎಂದು ಪ್ರಶ್ನಿಸಲಾಗಿದೆ.

ರಾಷ್ಟ್ರಕವಿ ಕುವೆಂಪು ಅವರನ್ನು ಬಲಪಂಥಿಯರು ನಿರಂತರವಾಗಿ ಗುರಿಯಾಗಿಸುತ್ತಲೇ ಬರುತ್ತಿದ್ದಾರೆ. ಸ್ವತಃ ರೋಹಿತ್‌ ಚಕ್ರತೀರ್ಥ ಅವರು ಕೂಡಾ ನಾಡಗೀತೆಯನ್ನು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕುವೆಂಪು ಮೇಲಿನ ದಾಳಿಗಳು ಕೂಡಾ ಹೆಚ್ಚಾಗುತ್ತಿದೆ ಎಂದು ಚರ್ಚೆಯಾಗುತ್ತಿದೆ.

ದಿವ್ಯ ನಾಯಕ್ ಅವರ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಎನ್‌ಯು ಕನ್ನಡ ಅಧ್ಯಯನಪೀಠದ ಮುಖ್ಯಸ್ಥರಾಗಿದ್ದ ಪ್ರೊ. ಪುರುಷೋತ್ತಮ್ ಬಿಳಿಮಲೆಯವರು, “ಬಲಪಂಥೀಯರ ಜೊತೆಗೆ ಚರ್ಚೆಯೆ ಸಾಧ್ಯವಿಲ್ಲ. ಎ.ಕೆ ರಾಮಾನುಜ ಅವರು ಸುಮಾರು ಮುನ್ನೂರು ರಾಮಾಯಣಗಳ ಬಗ್ಗೆ ಬರೆದಿದ್ದಾರೆ. ಈ ದೇಶದ ಸಾವಿರಾರು ರಾಮಾಯಣಗಳಲ್ಲಿ ವಾಲ್ಮಿಕಿ ರಾಮಾಯಣ ಕೂಡಾ ಒಂದು. ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಯಾವುದೆ ಸಂಶೋಧಕರು ಒಪ್ಪಿಕೊಂಡಿಲ್ಲ ಹಾಗೂ ಐತಿಹಾಸಿಕವಾಗಿಯು ಅದು ದೃಡಪಟ್ಟಿಲ್ಲ. ಇದು ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬಂತೆ” ಎಂದು ತಿಳಿಸಿದರು.

ಇದನ್ನೂ ಓದಿ: ಮೋದಿ ‘ಸರ್ವಾಧಿಕಾರಿ’ ಅಲ್ಲ ಎಂದ ಅಮಿತ್‌ ಶಾ; ಎಂಥಾ ‘ಜೋಕ್‌’ ಎಂದು ವ್ಯಂಗ್ಯವಾಡಿದ ಅಮೆರಿಕಾ ಟೆನಿಸ್ ತಾರೆ!

“ಬಲಪಂಥೀಯರು ಕುವೆಂಪು ಅವರನ್ನು ವಿರೋಧಿಸಲು ಬೇಕಾಗಿ ವಾಲ್ಮಿಕಿ ರಾಮಾಯಣವನ್ನು ತರುತ್ತಾರೆ. ರಾಮಾಯಣದ ಬಹುತ್ವದ ಬಗ್ಗೆ ಕುಮಾರವ್ಯಾಸನೇ ಆ ಕಾಲದಲ್ಲಿ ‘ತಿಣುಕಿದನು ಫಣಿರಾಯ ರಾಮಾಯಣದ ಕತೆಗಳ ಭಾರದಲಿ’ ಎಂದು ಬರೆದಿದ್ದಾನೆ. ಕುವೆಂಪು ಮತ್ತು ಅವರು ಬರೆದ ರಾಮಾಯಣದ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳು ಮತ್ತಾ ಆರೋಪಗಳು ರಾಜಕೀಯ ಪ್ರೇರೇಪಿತವಾಗಿದ್ದು, ಅವುಗಳನ್ನು ರಾಜಕೀಯವಾಗಿಯೇ ಎದುರಿಸಬೇಕು” ಎಂದು ಹೇಳಿದರು.

ಪ್ರಾಧ್ಯಾಪಕ ಕೀಲಾರ ನಾಗೇಗೌಡ ಅವರು ಮಾತನಾಡಿ, “ಕುವೆಂಪು ಬದುಕಿದ್ದಾಗಲೂ ಅವರ ಮೇಲೆ ದಾಳಿ ನಡೆಸಲಾಗುತ್ತಿತ್ತು, ಈ ದಾಳಿ ಈಗಲೂ ಮುಂದುವರೆದಿದೆ. ಕುವೆಂಪು ಅವರು ವೈದಿಕ ಮೌಲ್ಯವನ್ನು ಮುರಿದು, ಸರ್ವೋದಯ ಕಾಣಬೇಕೆಂಬ ಪೂರ್ಣದೃಷ್ಟಿಯಲ್ಲಿ ರಾಮಾಯಣ ಬರೆದವರು. ಸರ್ವೋದಯ ಮತ್ತು ಪೂರ್ಣದೃಷ್ಟಿ ಇತರ ರಾಮಾಯಣದಲ್ಲಿ ಇರಲಿಲ್ಲ. ಅವರು ರಾಮಾಯಣಕ್ಕೆ ಹೊಸ ಮೌಲ್ಯ ಕಟ್ಟಿದರು. ಇದು ಕೆಲವು ಜನರಿಗೆ ಆಗಿಬರುವುದಿಲ್ಲ. ಆದ್ದರಿಂದ ಅವರಿಗೆ ಕುವೆಂಪು ಮೇಲೆ ದ್ವೇಷವಿದೆ. ಇವರಿಗೆ ವೈದಿಕತೆ ಮತ್ತು ಗಂಡಾಳ್ವಿಕೆ ಉಳಿಯಬೇಕು. ಹಾಗಾಗಿ ವಾಲ್ಮಿಕಿ ರಾಮಾಯಣವೇ ಮೂಲ ರಾಮಾಯಣ ಎಂದು ಪ್ರತಿಪಾದಿಸುತ್ತಾರೆ” ಎಂದು ಹೇಳಿದ್ದರು.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರು, “ಕುವೆಂಪು ಅವರು ಮಾನವತಾವಾದವನ್ನು ಪ್ರತಿಪಾದಿಸಿದವರು. ಜಾತಿ ಮತದ ಸಂಕೋಲೆ ಕಳಚಿ ಪ್ರತಿಯೊಬ್ಬರೂ ವಿಶ್ವ ಮಾನವರಾಗಬೇಕು ಎಂದು ಆಶಿಸಿದವರು. ಕ್ಲಬ್‌ಹೌಸ್‌ನಲ್ಲಿ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿದ ದಿವ್ಯಾ ನಾಯಕ್‌ ನಡೆ ಖಂಡನೀಯ” ಎಂದು ಹೇಳಿದರು.

ಕನ್ನಡ ಪರ ಹೋರಾಟಗಾರ, ರಣಧೀರ ಪಡೆಯ ಮುಖಂಡ ಹರೀಶ್ ಬೈರಪ್ಪ ಅವರು ದಿವ್ಯಾ ಅವರ ಹೇಳಿಕೆಯನ್ನು ಖಂಡಿಸಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಕುವೆಂಪು ಅವರ ವಿರುದ್ದ ಹಿಂದಿನಿಂದಲೂ ದಾಳಿಯಾಗುತ್ತಲೆ ಬಂದಿದೆ. ಈ ದಾಳಿ ಹೆಚ್ಚಾದಷ್ಟೂ ಅವರ ವಿಚಾರಧಾರೆಗಳು ಗಟ್ಟಿಯಾಗುತ್ತಲೆ ಬರುತ್ತಿದೆ, ಜೊತೆಗೆ ಪ್ರಸ್ತುತಗೊಳ್ಳುತ್ತಲೆ ಹೋಗುತ್ತಿದೆ. ಕುವೆಂಪು ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ, ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕಿತ್ತು. ಆದರೆ ಈ ಯಾರಿಗೂ ಅವು ಬೇಕಿಲ್ಲ, ಕುವೆಂಪು ಬೈಯ್ಯುವುದಕ್ಕೋಸ್ಕರವೇ ಈ ಇಲಾಖೆ ಪ್ರಾಧಿಕಾರವನ್ನು ನೇಮಕ ಮಾಡಿದಂತಿದೆ” ಎಂದು ಹರೀಶ್ ಅವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರರನ್ನು ಮೂಲೆಗುಂಪು ಮಾಡಲು ಬಿಜೆಪಿ ತಂತ್ರ? ಬಿಎಸ್‌ವೈ ರಾಜೀನಾಮೆ ನಂತರ ಆಗುತ್ತಿರುವುದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights