ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿಗೆ ನಮ್ಮಿಂದ ಅನ್ಯಾಯವಾಗಿದೆ: ಯಡಿಯೂರಪ್ಪ

ಚಿತ್ರದುರ್ಗ ಜಿಲ್ಲೆಯ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಸಿಗದೆ ನಮ್ಮಿಂದ ಅನ್ಯಾಯವಾಗಿದೆ” ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಿಪ್ಪಾರೆಡ್ಡಿ ಹಿರಿಯ ಶಾಸಕರಿದ್ದಾರೆ, ಏಳೆಂಟು ಬಾರಿ ಗೆದ್ದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕು. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ತಿಪ್ಪಾರೆಡ್ಡಿಗೆ ಮಂತ್ರಿ ಸ್ಥಾನ ನೀಡಲು ಹೇಳುವೆ” ಎಂದು ತಿಳಿಸಿದರು.

“ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಎರಡು ಕ್ಷೇತ್ರದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ. ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆದರೆ ಹೆಚ್ಚು ಅಂತರದಿಂದ ಗೆಲ್ಲಬೇಕು ಅನ್ನುವ ಇಚ್ಛೆ ಇದೆ,” ಎಂದು ತಿಳಿಸಿದರು.

“ಪ್ರಧಾನಿ ನರೇಂದ್ರ ಮೋದಿಯವರನ್ನು ರಾಷ್ಟ್ರ ನಾಯಕ ಎಂದು ದೇಶದ ಜನರು ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ಹೆಬ್ಬೆಟ್ಟಿನ ಗಿರಾಕಿ ಎಂದು ಮೂದಲಿಸುವುದು ಸರಿಯಲ್ಲ ಎಂದರು. ಈ ರೀತಿಯ ಶಬ್ದಗಳು ಅವರ ಸಂಸ್ಕೃತಿ ತೋರಿಸುತ್ತದೆ,” ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, “ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಕಾಂಗ್ರೆಸ್ ಪಕ್ಷದಲ್ಲಿ ಪರಸ್ಪರ ಕಚ್ಚಾಟ, ಹೊಡೆದಾಟ ನಡೆಯುತ್ತಿದೆ. ಒಬ್ಬರ ಕಾಲು ಹಿಡಿದು, ಮತ್ತೊಬ್ಬರು ಎಳೆಯುತ್ತಾರೆ,” ಎಂದು ಮಾಜಿ ಸಿಎಂ ಬಿಎಸ್‌ವೈ ತಿಳಿಸಿದರು.

“ನಮ್ಮ ಬಿಜೆಪಿ ಸರ್ಕಾರದಲ್ಲಿ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳು ಇವೆ. ಬೇರೆ ಪಕ್ಷಗಳನ್ನು ಟೀಕೆ ಮಾಡುವುದಕ್ಕಿಂತ, ನಾವು ಮಾಡಿರುವ ಸಾಧನೆ ಹಿಡಿದು ಮತ ಕೇಳುತ್ತೇವೆ. ಎರಡೂ ಕ್ಷೇತ್ರ ಗೆಲ್ಲುವ ನಿಟ್ಟಿನಲ್ಲಿ‌ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ,” ಎಂದು ಮಾತನಾಡಿದರು.

ಇನ್ನು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಂಡಿದ್ದು, ಉಪ ಚುನಾವಣೆ ಮುಗಿದ ಬಳಿಕ ದರ ಕಡಿಮೆ ಮಾಡಲು ಸಿಎಂಗೆ ತಿಳಿಸುತ್ತೇನೆ ಎಂದು ಮಾಜಿ ಸಿಎಂ ಬಿಎಸ್‌ವೈ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights