T-20 World cup: 9 ಬಾಲ್‌ಗಳಿಗೆ 42 ರನ್ ಸಿಡಿಸಿದ ಕನ್ನಡಿಗ ರಾಹುಲ್; ಟೀಂ ಇಡಿಯಾ ಭರ್ಜರಿ ಗೆಲುವು!

ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ  ಇಂಗ್ಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಏಳು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಇಶಾನ್ ಕಿಶನ್ ಅವರ ಅಬ್ಬರದ ಆಟದಿಂದಾಗಿ, ಭಾರತ ತಂಡ ಗೆದ್ದು ಬೀಗಿದೆ.

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಐದು ವಿಕೆಟ್ ನಷ್ಟಕ್ಕೆ 188 ರನ್‌ಗಳನ್ನು ಕಲೆಹಾಕಿತ್ತು.

ಬಳಿಕ ಟೀಂ ಇಂಡಿಯಾ ಪರವಾಗಿ ಕಣಕ್ಕಿಳಿದ ಇಶಾನ್ ಕಿಶನ್ (70) ಹಾಗೂ ಕೆ.ಎಲ್. ರಾಹುಲ್ (51) ಬಿರುಸಿನ ಅರ್ಧಶತಕಗಳನ್ನು ಬಾರಿಸಿದರು. ಇಬ್ಬರ ಆಟದಿಂದಾಗಿ ಟೀಂ ಇಂಡಿಯಾ 19 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ ತಂಡವನ್ನು ಮಣಿಸಿ, ಗೆಲುವು ಸಾಧಿಸಿತು.

ಬೃಹತ್ ಗುರಿ ಬೆನ್ನತ್ತಿದ ಭಾರತಕ್ಕೆ ಕೆ.ಎಲ್. ರಾಹುಲ್ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 50 ಎಸೆತಗಳಲ್ಲಿ 82 ರನ್‌ಗಳ ಜೊತೆಯಾಟ ಕಟ್ಟಿದರು.

9 ಬಾಲ್‌ಗಳಲ್ಲಿ 42 ರನ್ (ಅಂದರೆ 6 ಬೌಂಡರಿ, 3 ಸಿಕ್ಸರ್) ಸಿಡಿಸಿದ ರಾಹುಲ್, 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮಿಂಚಿದರು.

ಈ ನಡುವೆ ನಾಯಕ ವಿರಾಟ್ ಕೊಹ್ಲಿ 11ರನ್‌ಗಳಿಗೆ ಔಟ್ ಆದರು. ಅತ್ತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

46 ಎಸೆತಗಳನ್ನು ಎದುರಿಸಿದ ಇಶಾನ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ನಿವೃತ್ತಿ ಹೊಂದಿದರು.

ಸೂರ್ಯಕುಮಾರ್ ಯಾದವ್ (8) ನಿರಾಸೆ ಮೂಡಿಸಿದರು. ಆದರೆ ಕೊನೆಯ ಹಂತದಲ್ಲಿ ರಿಷಭ್ ಪಂತ್ (29* ರನ್, 14 ಎಸೆತ) ಹಾಗೂ ಹಾರ್ದಿಕ್ ಪಾಂಡ್ಯ (12* ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಜಾನಿ ಬೆಸ್ಟೊ (49), ಮೊಯಿನ್ ಅಲಿ (43*) ಹಾಗೂ ಲಯಮ್ ಲಿವಿಂಗ್‌ಸ್ಟೋನ್ (30) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 188 ರನ್‌ ಗಳಿಸಿತ್ತು.

ಏಯಾನ್ ಮಾರ್ಗನ್‌ಗೆ ವಿಶ್ರಾಂತಿ ಸೂಚಿಸಿರುವ ಹಿನ್ನೆಲೆಯಲ್ಲಿ ತಂಡವನ್ನು ಜೋಸ್ ಬಟ್ಲರ್ ಮುನ್ನಡೆಸಿದರು. ನಾಯಕ ಬಟ್ಲರ್ 18, ಜೇಸನ್ ರಾಯ್ 17 ಹಾಗೂ ಡೇವಿಡ್ ಮಲನ್ 18 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮೂಯಿನ್ ಅಲಿ ಕೇವಲ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಕಬಳಿಸಿದರು. 54 ರನ್ ಬಿಟ್ಟುಕೊಟ್ಟ ಭುವನೇಶ್ವರ್ ಕುಮಾರ್ ದುಬಾರಿಯೆನಿಸಿದರು. ಭಾರತೀಯ ಬೌಲರ್‌ಗಳು ಇತರೆ ರನ್ ರೂಪದಲ್ಲಿ 12 ರನ್ ಬಿಟ್ಟುಕೊಟ್ಟರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights