ಜೆಡಿಎಸ್ ನಾಯಕ, ಮಾಜಿ ಸಚಿವರ ಇಬ್ಬರು ಮಕ್ಕಳು ಕಾಂಗ್ರೆಸ್ಗೆ ಸೇರ್ಪಡೆ!
ಜೆಡಿಎಸ್ ನಾಯಕ, ಮಾಜಿ ಸಚಿವ ಸಿ.ಚನ್ನಿಗಪ್ಪ ಅವರ ಹಿರಿ ಮಗ – ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಅವರ ಸಹೋದರಾದ ಡಿಸಿ ಅರುಣ್ ಕುಮಾರ್ ಹಾಗೂ ವೇಣುಗೋಪಾಲ್ ಅವರು ಕಾಂಗ್ರೆಸ್ ಸೇರ್ಪಡೆ ಯಾಗುವುದಾಗಿ ಘೋಷಣೆ ಮಾಡಿದ್ದಾರೆ.
ಜೆಡಿಎಸ್ನ ಮಾಜಿ ಜನಪ್ರಿಯ ಸಚಿವರಾದ ಸಿ. ಚನ್ನಿಗಪ್ಪನವರು ಕೊರಟಗೆರೆ ತಾಲೂಕಿನಲ್ಲಿ ಸತತ ಮೂರು ಬಾರಿ ಗೆದ್ದಿದ್ದರು. ಅವರ ಸೇವಾ ಅವಧಿಯಲ್ಲಿ ಉತ್ತಮ ಕೆಲಸಗಳನ್ನೂ ಮಾಡಿದ್ದರು. ನಮ್ಮ ತಂದೆ ಆಶಯದಂತೆ ಕೊರಟಗೆರೆ ತಾಲೂಕಿನಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಪ್ರಾರಂಭಿಸುತ್ತೇನೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.
ನನಗೆ ಈ ಬಾರಿ ಕಾಂಗ್ರೆಸ್ನಿಂದ ಜಿಲ್ಲಾ ಪಂಚಾಯಿತಿಗೆ ಬರುವ ಆಶಯವಿದೆ. ಆದರೆ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಅವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಲು ಮನೆಮನೆಗೂ ಹೋಗಿ ಟೊಂಕಕಟ್ಟಿ ದುಡಿಯುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನಾವು ಕಾಂಗ್ರೆಸ್ ಪಕ್ಷದಿಂದ ನಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಲಿದ್ದೇವೆ. ಮುಂದಿನ ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ ಪರಮೇಶ್ವರ್ ಹಾಗೂ ಕೆ ಎನ್ ರಾಜಣ್ಣನವರ ಸಮ್ಮುಖದಲ್ಲಿ ಪಕ್ಷ ಸೇರುತ್ತೇವೆ ಎಂದು ಹೇಳಿದ್ದಾರೆ.