ಸಿನಿಮಾ ವಿಮರ್ಶೆ: ‘ಜೈ ಭೀಮ್’ ಒಂದು ಸಾಮಾಜಿಕ ಮೀಮಾಂಸೆ
ನ. 2 ರಂದು ತಮಿಳಿನ ಖ್ಯಾತ ನಟ ಅಭಿನಯಿಸಿರುವ ‘ಜೈಭೀಮ್ ‘ ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ ತೆರೆಕಂಡಿದೆ. ಈ ಚಿತ್ರದ ಬಗ್ಗೆ ವ್ಯಾಪಕ ವಿಮರ್ಶೆ, ಮೆಚ್ಚುಗೆ, ಟಿಪ್ಪಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉಕ್ಕುತ್ತಿವೆ. ಇತ್ತೀಚಿನ ದಿನಗಳಲ್ಲಿ ರೇಟಿಂಗ್ ನ ತುತ್ತತುದಿಗೆ ತಲುಪಿದ ಹೆಗ್ಗಳಿಕೆ ಈ ಚಿತ್ರದ್ದಾಗಿದೆ. ಈ ಚಿತ್ರ ಕನ್ನಡ, ತೆಲುಗಿನಲ್ಲೂ ನೋಡಬಹುದು. 1995 ರಲಿ ತಮಿಳುನಾಡಿನ ಬುಡಕಟ್ಟು ಸಮುದಾಯ(ಎಸ್ಟಿ) ಇರುಳರ ಮೇಲೆ ನಡೆಯುವ ಪೊಲೀಸರ ಕ್ರೌರ್ಯ, ಲಾಕಪ್ ಡೆತ್ ನ ನೈಜ ಕಥನವನ್ನು ನಿರ್ದೇಶಕ ಜ್ಞಾನವೇಲು ತೆರೆಯ ಮೇಲೆ ತಂದಿದ್ದಾರೆ. ಕಮ್ಯೂನಿಷ್ಟ್ ಹೋರಾಟಗಾರ ಮತ್ತು ವಕೀಲರೂ ಆದ ಚಂದ್ರು ಅವರು ಬುಡಕಟ್ಟು ಸಮುದಾಯದ ಪರ ನಿಂತು ಕಾನೂನು ಹೋರಾಡುವ ಕತೆಯೇ ‘ಜೈಭೀಮ್’ . ಮುಂದಿನದ್ದನ್ನು ಸಿನಿಮಾ ನೋಡಬೇಕು.
ಭಾರತದಲ್ಲಿ ಮರಾಠಿ ಹೊರತುಪಡಿಸಿದರೆ ಹೆಚ್ಚು ದಲಿತ ಕಥನಗಳ ಆಧಾರಿತ ಸಿನಿಮಾಗಳು ಬಂದಿರುವುದು ತಮಿಳಿನಲ್ಲಿ ಎನ್ನಬಹುದು. ದ್ರಾವಿಡ ಮತ್ತು ಆರ್ಯ ರ ನಡುವಿನ ಸಂಘರ್ಷ ದ ಮೂಸೆಯಲ್ಲಿ ಕಟ್ಟಲ್ಪಟ್ಟಿರುವ ತಮಿಳುನಾಡಿನಲ್ಲಿ ಸಿನಿಮಾಗಳು ಪ್ರಯೋಗಶೀಲತೆಯನ್ನು ಅಳವಡಿಸಿಕೊಳ್ಳುವತ್ತ ಯಶಸ್ಸಿನ ಹೆಜ್ಜೆ ಹಾಕುತ್ತಿವೆ. ಕೇವಲ ವ್ಯಾಪಾರಿ ಮನೋಭಾವದ ಹೊರತಾಗಿಯೂ ಒಂದು ಸಿನಿಮಾ ಮನರಂಜನೆಯ ಆಚೆಗಿನ ಸಾಮಾಜಿಕ ಹೊಣೆಗಾರಿಕೆಯನ್ನೂ ಅಭಿವ್ಯಕ್ತಿಸುವ ಮಾಧ್ಯಮ ಎಂಬುದನ್ನು ಸಾಬೀತು ಪಡಿಸುವಂತಿದೆ.
ಕಮ್ಯೂನಿಷ್ಟ್ ವಾದ ಮತ್ತು ಅಂಬೇಡ್ಕರ್ ವಾದವನ್ನು ಹದವರಿತು ಹೋರಾಡುವ ವಕೀಲ ಚಂದ್ರು ಶಿಕ್ಷಣ, ಸ್ವಾಭಿಮಾನ ಮತ್ತು ಹೋರಾಟವನ್ನು ಉಸಿರಾಡುತ್ತಾ ಅಂಬೇಡ್ಕರ್ ಅವರನ್ನು ಪ್ರತಿ ನೆರಳಿನಲ್ಲೂ ಕಟ್ಟಿಕೊಡುತ್ತಾ ಹೋಗುತ್ತಾರೆ. ಸಂವಿಧಾನಬದ್ದ ವ್ಯವಸ್ಥೆಗಳೇ ಆದ ಪೊಲೀಸ್ , ನ್ಯಾಯಾಂಗ ವ್ಯವಸ್ಥೆಗಳಲ್ಲಿ ಲೋಪವಿಲ್ಲ. ಆದರೆ ಅವುಗಳನ್ನು ನಿರ್ವಹಿಸುವವರಲ್ಲಿ ದೋಷಗಳಿವೆ ಎಂಬುದನ್ನು ಇಲ್ಲಿ ಕಾಣಬಹುದು.
ಶಿಕ್ಷಣ,ಸಂಘಟನೆ, ಹೋರಾಟ ಎಂಬ ಬೀಜಮಂತ್ರದಿಂದ ಮಾತ್ರ ಪರಿಣಾಮಕಾರಿ ಫಲವನ್ನು ಕಾಣಬಹುದು ಎಂಬುದರ ಮನವರಿಕೆಯನ್ನು ಚಿತ್ರದಲ್ಲಿ ಕಾಣಬಹುದು. Cinematic elements ಗಳಿಂದ ಅಂತರ ಕಾಯ್ದುಕೊಂಡ ‘ ಜೈ ಭೀಮ್’ ನೈಜ ನಿರೂಪಣೆಯ ಮೂಲಕ ಸಾಮಾಜಿಕ ನ್ಯಾಯದ ಮೀಮಾಂಸೆಯನ್ನು ಪ್ರಬಲವಾಗಿ ಎದೆಗಿಳಿಸುತ್ತದೆ.
ಇಂತಹ ಪ್ರಯೋಗಗಳಿಂದ ಕನ್ನಡ ಚಿತ್ರರಂಗ ದೂರ ಉಳಿದಿದೆ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಈ ರೀತಿಯ ಸಾಮಾಜಿಕ ಸಂಘರ್ಷದ ಕತೆ ಆಧಾರಿತ ಚಿತ್ರಗಳು ಬಂದಿಲ್ಲವೆಂದರ್ಥವಲ್ಲ. ಡಾ. ಯು.ಆರ್ ಅನಂತಮೂರ್ತಿ ಅವರ ‘ ಸಂಸ್ಕಾರ’ ದಿಂದ ಆರಂಭಗೊಂಡು ಶಿವರಾಜಕುಮಾರ್ ಅಭಿನಯದ ಜನುಮದ ಜೋಡಿ ವರೆಗೂ ಕೆಲವೇ ಕೆಲವು ಚಿತ್ರಗಳು ಬಂದಿವೆ. ಗಿರಿರಾಜ್ ನಿರ್ದೇಶನದ ‘ಜಟ್ಟ’ , ಅಮರಾವತಿ, ಸಿನಿಮಾಗಳು ದಕ್ಷ ನಿರೂಪಣೆಯೊಂದಿಗೆ ಮನಸ್ಸಿನಲ್ಲುಳಿಯುತ್ತವೆ.
ಸ್ಟಾರ್ ನಟರಿಗಾಗಿ ಕತೆ ಬರೆಯುವಂತಹ ಮತ್ತು ಕೋಟ್ಯಾಂತರ ರೂಪಾಯಿಗಳ ದುಡಿಯುವ ಫಾರ್ಮೂಲಾಗಳಿಗೆ ಜೋತು ಬಿದ್ದಿರುವ ಕನ್ನಡ ಚಿತ್ರರಂಗ ಸಾಮಾಜಿಕ ನ್ಯಾಯದ ನೈಜ ಕಥನಗಳಿಂದ ಮಡಿವಂತಿಕೆ ಕಾಯ್ದುಕೊಂಡು ಬರುತ್ತಿದೆ. ಸ್ಟಾರ್ ನಟನಾಗಲಿ, ನಿರ್ದೇಶಕನಾಗಲಿ ಬಹುಜನರ ಬಾಧಿತ ಕಥನಗಳನ್ನೆ ಸಿನಿಮಾ ಮಾಡುವ ಮೂಲಕ ತಮಗಿರುವ ಸಾಮಾಜಿಕ ಹೊಣೆಗಾರಿಕೆ ಬದ್ದತೆ ಜೊತೆಗೆ ಹಣ, ಕೀರ್ತಿ ಯನ್ನು ಸಂಪಾದಿಸಬಹುದು ಎಂಬುದಕ್ಕೆ ತಮಿಳು ಮತ್ತು ಮರಾಠಿ ಚಿತ್ರರಂಗದ ಈ ಪ್ರಯೋಗಗಳೆ ಸಾಕ್ಷಿ.
ವರ್ತಮಾನ ಭಾರತದಲ್ಲಿ ಸಂವಿಧಾನದ ನಿರ್ದೇಶಕ ತತ್ವಗಳಿಗೆ ಸಂಚಾಕಾರ ಬಂದೊದಗಿರುವುದನ್ನು ಸಂದರ್ಭಗಳೆ ಕಣ್ಣ ಮುಂದೆ ತರುತ್ತಿವೆ. ಪ್ರಭುತ್ವವೇ ದಮನಕಾರಿ ಧೋರಣೆಗೆ ಇಳಿದಿರುವಾಗ.ಪೊಲೀಸ್, ನ್ಯಾಯವ್ಯವಸ್ಥೆ ಗಳ ಮೇಲೆ ನಂಬಿಕೆ ಕ್ಷೀಣಿಸತೊಡಗಿದೆ. ಇವುಗಳನ್ನು ಮರುಸ್ಥಾಪಿಸಬೇಕಾದರೆ ಶಕ್ತಿಶಾಲಿ ಮಾಧ್ಯಮವಾಗಿರುವ ಚಿತ್ರರಂಗ ಕೂಡ ಬದ್ದತೆಯನ್ನು ತೋರಬೇಕು.
ಈ ಹಾದಿಯಲ್ಲಿ ತಮಿಳು ಚಿತ್ರ ರಂಗ ಒಂದು ಕೈ ಮೇಲು. ಸುಮಾರು ಮೂರು ದಶಕಗಳ ಹಿಂದಿನ ‘ ಪೆರಿಯಾರ್’ ಸಿನಿಮಾದಿಂದ ಆರಂಭಗೊಂಡು ಮಹಾವೀರನ್ ಕಿಟ್ಟು, ಅಸುರನ್, ಕಾಲಾ, ‘ಪರಿಯೇರುಂ ಪೆರಿಮಾಳ್’, ಕರ್ಣನ್,ಸರ್ಪಟ್ಟಾ ಪರಂಪರೈ,…..ಈಗಷ್ಟೇ ಇಡೀ ದೇಶವನ್ನೆ ತಿರುಗಿ ನೋಡುವಂತೆ ಮಾಡಿರುವ ‘ ಜೈ ಭೀಮ್’ ‘ ಸಿನಿಮಾವರೆಗೂ ತನ್ನ ತಾತ್ವಿಕತೆಯನ್ನು ಕಾಯ್ದುಕೊಂಡು ಬರುತ್ತಿದೆ. ಇದೊಂದು ಬಹುಜನರ ಭರವಸೆ ಎನ್ನಬಹುದು. ಪ ರಂಜಿತ್, ಮಾರಿಸೆಲ್ವಂ, ವೆಟ್ರಿಮಾರನ್ ನಂತಹ ಯುವ ನಿರ್ದೇಶಕರು ‘ಹೌದು, ನಾವು ಅಂಬೇಡ್ಕರ್ ವಾದಿಗಳು ಏನೀಗ?’ ಎಂದು ಬಹಿರಂಗವಾಗಿಯೇ ಸಾರಿಕೊಳ್ಳುವ ಮೂಲಕ ತಮ್ಮ ಚಿತ್ರಗಳನ್ನು ಬಹುಜನರ ದನಿಯಂತೆ ರೂಪಿಸುತ್ತಾರೆ ಮತ್ತು ಯಶಸ್ಸಿನತ್ತ ಕೊಂಡೊಯ್ದಿದ್ದಾರೆ.
ಇಂತಹವರ ಸಾಲಿಗೆ ಸೇರಿದ ಜ್ಞಾನ ವೇಲು ನಿರ್ದೇಶನದ ‘ಜೈ ಭೀಮ್ ‘ ಸಿನಿಮಾ ಕೇವಲ ಒಂದು ಸಿನಿಮಾವಲ್ಲ, ಅದೊಂದು ಸಾಮಾಜಿಕ ಮೀಮಾಂಸೆಯ ದಿಟ್ಟ ಪ್ರತಿಪಾದನೆ.
ಈ ದೇಶದ ಸೋ ಕಾಲ್ಡ್ ಎಲೈಟ್ ಸಮುದಾಯ ಮತ್ತು ಸಬ್ ಸಾಥ್ ಸಬ್ ಕಾ ವಿಕಾಸ್ ಎಂದು ಎದೆ ,ಎದೆ ತಟ್ಟಿಕೊಳ್ಳುವವರು ಈ ಚಿತ್ರವನ್ನು ನೋಡಬೇಕು. ಏಕೆಂದರೆ 1995 ರಲ್ಲಿ ಈ ನೆಲದ ಮೂಲನಿವಾಸಿಗಳ ಮೇಲೆ ನಡೆದ ಕ್ರೌರ್ಯ, ಹತ್ಯೆಗಳು 2021 ರಲ್ಲೂ ಮುಗಿದ ಅಧ್ಯಾಯಗಳಿಲ್ಲ. ಇದು ಕೇವಲ ಒಂದು ಸಿನಿಮಾವಲ್ಲ, ಬದುಕು. ಇದನ್ನು ಅಂಬೇಡ್ಕರ್ ಕಣ್ಣುಗಳಿಂದ ನೋಡಿದಾಗ ಮಾತ್ರ ಅರಿವಾಗುತ್ತದೆ.
– ಎನ್.ರವಿಕುಮಾರ್ ಟೆಲೆಕ್ಸ್
ಇದನ್ನೂ ಓದಿ: ಜೈಭೀಮ್ ಸಿನಿಮಾದಿಂದ ಮನೆಮಾತಾದ ನಿವೃತ್ತ ಹೈ. ನ್ಯಾಯಮೂರ್ತಿ ಚಂದ್ರು ಸಂದರ್ಶನ!

