ಎಂಇಎಸ್ ಸಂಘಟನೆ ಬ್ಯಾನ್ ಮಾಡದಿದ್ದರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ
ಕನ್ನಡ ಬಾವುಟ, ಕನ್ನಡಿಗರು ಮತ್ತು ಕರ್ನಾಟಕಕ್ಕೆ ಅಪಮಾನ ಮಾಡಿರುವ ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಲು ಸೋಮವಾರ ಸಂಜೆಯೊಳಗೆ ಸದನದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳದಿದ್ದರೆ, ಬುಧವಾರ ಸಭೆ ನಡೆಸಿ ಕರ್ನಾಟಕ ಬಂದ್‌ಗೆ ಮಾಡಲು ನಿರ್ಧರಿಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ”ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಈ ಬಗ್ಗೆಇಂದು ಸಂಜೆ ಒಳಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ, ಬುಧವಾರ ಕನ್ನಡ ಸಂಘಟನೆಗಳ ಸಭೆ ನಡೆಸಿ ಕರ್ನಾಟಕ ಬಂದ್‌ಗೆ ತೀರ್ಮಾನಿಸುತ್ತವೆ” ಎಂದು ಹೇಳಿದ್ದಾರೆ.
”ಬೆಳಗಾವಿಯಲ್ಲಿ ನಡೆದ ಪುಂಡಾಟಕ್ಕೆ ಬಿಜೆಪಿ ಸರಕಾರ ನೇರವಾಗಿ ಹೊಣೆ ಹೊರಬೇಕು. ಎರಡು ಸೀಟ್ ಗೆಲ್ಲುವುದಕ್ಕಾಗಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ್ದಾರೆ. ಮರಾಠರಿಗೆ ಹಾಸಿಕೆ ಹಾಸಿ, ಕನ್ನಡಿಗರ ಹೃದಯಕ್ಕೆ ಕೊಳ್ಳಿ ಇಟ್ಟಿದ್ದರೆ” ರಾಜ್ಯ ಸರ್ಕಾರ ಮತ್ತು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
”ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಪಕ್ಷವಾಗಿ ಜಾಣ ಕುರುಡು ತೋರುತ್ತಿದೆ. ಮಹಾರಾಷ್ಟದಲ್ಲಿ ಶಿವಸೇನೆ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಮೊನ್ನೆ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ ಮೆರವಣಿಗೆ ಮಾಡಿದ ಕಾಂಗ್ರೆಸ್, ಇಂದು ಕನ್ನಡ ಪರ ಮೆರವಣಿಗೆ ಮಾಡಬೇಕಾಗಿತ್ತು. ಕನ್ನಡದ ಪರ ಧ್ವನಿ ಎತ್ತುವಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸಂಪೂರ್ಣ ವಿಫಲವಾಗಿವೆ” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ?: ಯಾವ ಅಧಿಕಾರವೂ ಶಾಶ್ವತವಲ್ಲ ಎಂದು ಬೊಮ್ಮಾಯಿ!

