ಗಾಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜಾರೋಹಣ: ಮೋದಿ ಮೌನ

2022ರ ಜನವರಿ 1 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜಾರೋಹಣ ನಡೆಸಿರುವ ವಿಡಿಯೋವನ್ನು ತನ್ನ ಅಧಿಕೃತ ಮಾಧ್ಯಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ ನಂತರ ವಿವಾದ ಭುಗಿಲೆದ್ದಿದೆ. ಈ ಕುರಿತು ಮೋದಿ ಮತ್ತೆ ಮೌನ ವಹಿಸಲಿದ್ದಾರೆಯೇ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

“2022 ರ ಹೊಸ ವರ್ಷದ ದಿನದಂದು ಗಾಲ್ವಾನ್ ಕಣಿವೆಯ ಮೇಲೆ ಚೀನಾದ ರಾಷ್ಟ್ರೀಯ ಧ್ವಜಾರೋಹಣ. ಈ ಧ್ವಜವು ಒಮ್ಮೆ ಬೀಜಿಂಗ್‌ನ ಟಿಯಾನನ್‌ಮೆನ್ ಚೌಕದ ಮೇಲೆ ಹಾರಿದ್ದರಿಂದ ವಿಶೇಷವಾಗಿದೆ” ಎಂದು ಚೀನಾ ಟ್ವೀಟ್ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಖರ್ಗೆಯವರು, “ಗಾಲ್ವಾನ್‌ಗಾಗಿ ಹೋರಾಡಿ 20 ಸೈನಿಕರು ಹುತಾತ್ಮರಾಗಿದ್ದಾರೆ. ಆದರೂ ಹೊಸ ವರ್ಷದ ಮುನ್ನಾದಿನದಂದು ಗಾಲ್ವಾನ್ ಕಣಿವೆಯಲ್ಲಿ ತಮ್ಮ ಧ್ವಜವನ್ನು ಹಾರಿಸಿರುವುದಾಗಿ ಚೀನಾವು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವಾಗ ಭಾರತೀಯ ಸರ್ಕಾರ ಮೂಕ ಪ್ರೇಕ್ಷಕರಾಗಿ ಉಳಿಯಲು ನಿರ್ಧರಿಸಿದೆ. ಪ್ರಧಾನಿ ಮೋದಿ ಮತ್ತೆ ಚೀನಾದ ಹೆಸರನ್ನು ಎತ್ತುವುದಿಲ್ಲ ಮತ್ತು ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟಿಕೊಳ್ಳುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳ ವಾದವನ್ನು ಭಾರತ ಸರ್ಕಾರ ಅಲ್ಲಗೆಳೆದಿದೆ. ಧ್ವಜವನ್ನು ಚೀನಾದ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಹಾರಿಸಲಾಗುತ್ತಿದೆ ಮತ್ತು ಜೂನ್ 2020 ರಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಘರ್ಷಣೆ ನಡೆಸಿದ ನದಿಯ ತಿರುವಿನಲ್ಲಿ ಅಲ್ಲ ಎಂದು ಭಾರತೀಯ ಸೇನೆಯ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 2020ರ ಜೂನ್‌ 15ರಂದು ಭಾರತೀಯ ಮತ್ತು ಚೀನಿ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತೀಯ 20 ಸೈನಿಕರು ಸಾವನ್ನಪ್ಪಿದ್ದಾರೆ. ಚೀನಾ ತಮ್ಮ 04 ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

ತದನಂತರ 2020ರ ಜುಲೈನಲ್ಲಿ ಭಾರತ ಮತ್ತು ಚೀನಾ ಪರಸ್ಪರ ಮಾತುಕತೆಯ ನಂತರ ಘರ್ಷಣೆ ಸ್ಥಳದಿಂದ 2 ಕಿ.ಮೀ ಎರಡೂ ಸೈನ್ಯಗಳು ದೂರ ಸರಿಯುವಂತೆ ಒಪ್ಪಲಾಗಿತ್ತು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಮಾತುಕತೆ ನಡೆದಿತ್ತು.

ಇದನ್ನೂ ಓದಿ: ಮೇಕೆದಾಟು: ಸತ್ಯಕ್ಕೆ ಸಮಾಧಿ ಕಟ್ಟಿ ʼಸುಳ್ಳಿನಯಾತ್ರೆʼಗೆ ಹೊರಟವರ ಜಾತಕವನ್ನು ಬಯಲು ಮಾಡುತ್ತೇವೆ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights