Fact Check: ಬಾಲಿಯಲ್ಲಿ 5000 ವರ್ಷ ಹಳೆಯ ಹಿಂದೂ ದೇವತೆಗಳ ವಿಗ್ರಹಗಳು ನೀರಿನ ಆಳದಲ್ಲಿ ಪತ್ತೆಯಾಗಿವೆಯೇ?

ಇತ್ತೀಚೆಗೆ, ಸಾಮಾಜಿಕ ಮಾಧ್ಯಮ ಬಳಕೆದಾರರು ನೀರಿನ ಅಡಿಯಲ್ಲಿ ಕಂಡುಬರುವ ಹಿಂದೂ ವಿಗ್ರಹಗಳ ಕೆಲವು ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇಂಡೋನೇಷ್ಯಾದ ಬಾಲಿ ನಗರದಲ್ಲಿ 5,000 ವರ್ಷಗಳಷ್ಟು ಹಳೆಯದಾದ ಹಿಂದೂ ದೇವತೆಗಳ ವಿಗ್ರಹಗಳು ನೀರಿನ ಆಳದಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗಿದೆ.

ಫೋಟೋಗಳು ಮತ್ತು ಅದರ ಜೊತೆಗಿನ ಹೇಳಿಕೆಗಳನ್ನು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

2016 ರಲ್ಲಿ, ನೀರಿನೊಳಗಿನ ವಿಗ್ರಹಗಳ ಇದೇ ರೀತಿಯ ವೀಡಿಯೊವು ಅದೇ ಹೇಳಿಕೆಯೊಂದಿಗೆ ವೈರಲ್ ಆಗಿತ್ತು. YouTube ನಲ್ಲಿಯೂ ವಿಡಿಯೋ ಹಂಚಿಕೊಳ್ಳಲಾಗಿದೆ.

ಸತ್ಯ-ಪರಿಶೀಲನೆ

ಮೊದಲ ಚಿತ್ರ:

ವೈರಲ್‌ ಆದ ಚಿತ್ರವನ್ನು ರಿವರ್ಸ್ ಇಮೇಜ್ಹುಮೂಲಕ ಹುಡುಕಿದಾಗ, ಟ್ರಾವೆಲ್ ಪೋರ್ಟಲ್‌ನ ಬ್ಲಾಗ್‌ನಲ್ಲಿ ಮೂಲ ಚಿತ್ರ ದೊರೆತಿದೆ. ಇದನ್ನು ಈಶಾನ್ಯ ಬಾಲಿಯಲ್ಲಿ ಪೆಮುಟೆರಾನ್ ಕರಾವಳಿ ಎಂದು ವಿವರಿಸಲಾಗಿದೆ. ಲೇಖನದ ಪ್ರಕಾರ, ಪೆಮುಟೆರಾನ್ ಕರಾವಳಿಯಿಂದ ಸುಮಾರು 90 ಅಡಿಗಳಷ್ಟು ನೀರಿನ ಆಳದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.

ಎರಡನೇ ಮತ್ತು ಮೂರನೇ ಚಿತ್ರ:

ರಿವರ್ಸ್‌ ಇಮೇಜ್ ಹುಡುಕಾಟದಲ್ಲಿ, ಬಾಲಿಯಲ್ಲಿರುವ ಅಂಡರ್ವಾಟರ್ ದೇವಾಲಯದ ಕುರಿತು ಇಂಡಿಯಾ ಟೈಮ್ಸ್ ಲೇಖನದಲ್ಲಿನ ಮೂಲ ಚಿತ್ರಗಳು ದೊರೆತಿವೆ. ಲೇಖನವನ್ನು ಏಪ್ರಿಲ್ 28, 2016 ರಂದು ಪ್ರಕಟಿಸಲಾಗಿದೆ.

2018 ರಲ್ಲಿ ‘ಬಾಲಿ ಬರ್ಸೆಜಾರಾ’ ಅಪ್‌ಲೋಡ್ ಮಾಡಿದ ಈ ಯೂಟ್ಯೂಬ್ ವೀಡಿಯೊದಲ್ಲಿ ಅಂಡರ್ವಾಟರ್ ಟೆಂಪಲ್ ಗಾರ್ಡನ್ ಅನ್ನು ಸಹ ನೋಡಬಹುದು.

ಈ ಪ್ರತಿಮೆಗಳು 5,000 ವರ್ಷಗಳಷ್ಟು ಹಳೆಯವೇ?

ಕೀವರ್ಟ್‌ಗಳನ್ನು ಬಳಸಿ ಹುಡುಕಿದಾಗ, ಮಾರ್ಚ್ 24, 2012 ರಂದು YouTube ವೀಡಿಯೊ ದೊರೆತಿದೆ. ಇದು ಪೆಮುಟೆರಾನ್‌ನಲ್ಲಿರುವ ಟೆಂಪಲ್ ಗಾರ್ಡನ್ ಅನ್ನು ಚಿತ್ರಿಸುತ್ತದೆ. ವೀಡಿಯೊದ ವಿವರಣೆಯ ಪ್ರಕಾರ, ಟೆಂಪಲ್ ಗಾರ್ಡನ್ ಅನ್ನು 2005 ರಲ್ಲಿ ‘ರೀಫ್ ಗಾರ್ಡನರ್’ ಎಂಬ ಸಾಮಾಜಿಕ/ಪರಿಸರ ಯೋಜನೆಯಡಿ ನಿರ್ಮಿಸಲಾಗಿದೆ. ಈ ವೀಡಿಯೊವನ್ನು ಬಾಲಿ ಪ್ರವಾಸಿ ಕಂಪನಿಯ ಮಾಲೀಕ ಪಾಲ್ ಟರ್ಲಿ ಅಪ್‌ಲೋಡ್ ಮಾಡಿದ್ದಾರೆ.

ಪಾಲ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಈ ರೀತಿಯ ಇತರ ಹಲವು ವೀಡಿಯೊಗಳಿವೆ.

ಈ ಶಿಲ್ಪಗಳು ಬಾಲಿಯ ಒಂಬತ್ತು ದೇವತೆಗಳಿಂದ ಪ್ರೇರಿತವಾಗಿವೆ ಎಂದು ರೀಫ್ ಗಾರ್ಡನರ್ ವೆಬ್‌ಸೈಟ್ ಹೇಳುತ್ತದೆ. ಇದರಲ್ಲಿ ಶಿವನ ವಿಗ್ರಹವೂ ಸೇರಿದೆ. ಉಳಿದ ಎಂಟು ವಿಗ್ರಹಗಳ ಮಧ್ಯದಲ್ಲಿ ಶಿವನ ಪ್ರತಿಮೆಯನ್ನು ಇರಿಸಲಾಗಿದೆ. ಇವುಗಳನ್ನು ಮೇ 23 ಮತ್ತು 27, 2014 ರ ನಡುವೆ ನಿರ್ಮಿಸಲಾಗಿದೆ ಎಂದು ಅದು ಉಲ್ಲೇಖಿಸುತ್ತದೆ. ವೆಬ್‌ಸೈಟ್‌ನಲ್ಲಿ ಈ ವಿಗ್ರಹಗಳ ಪೈಕಿ ಒಂದು ವಿಗ್ರಹವನ್ನು ನೀರಿನ ಅಡಿಯಲ್ಲಿ ಪ್ರತಿಸ್ಠಾಪಿಸಿದ ವೀಡಿಯೊವನ್ನು ಸಹ ಒಳಗೊಂಡಿದೆ.

ಬಾಲಿಯ ಬಹುಪಾಲು ಜನಸಂಖ್ಯೆಯು ಹಿಂದೂ ಧರ್ಮವನ್ನು ಅನುಸರಿಸುತ್ತದೆ ಎಂದು ಗಮನಿಸಬೇಕು. 2010ರ ಜನಗಣತಿಯ ಪ್ರಕಾರ, ಬಾಲಿಯಲ್ಲಿ 83.46% ಜನರು ಹಿಂದೂಗಳಾಗಿದ್ದಾರೆ.

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಬಾಲಿಯ ಕರಾವಳಿಯೊಂದರಲ್ಲಿ ನೀರಿನ ಅಡಿಯಲ್ಲಿ ನಿರ್ಮಿಸಲಾದ ‘ಟೆಂಪಲ್ ಗಾರ್ಡನ್’ ನಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಇದನ್ನು, ಬಾಲಿಯಲ್ಲಿ 5,000 ವರ್ಷಗಳಷ್ಟು ಹಳೆಯದಾದ ಹಿಂದೂ ವಿಗ್ರಹಗಳು ಪತ್ತೆಯಾಗಿವೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: Fact Check: ವೈರಲ್‌ ಆಗುತ್ತಿರುವ ಮಕ್ಕಳ ಅಪಹರಣದ ವಿಡಿಯೋದ ಹಿನ್ನೆಲೆಯೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights