Fact check: ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಭಯೋತ್ಪಾದಕನೆ?

ನಿನ್ನೆ ಸೋಮವಾರ (ಮಧ್ಯರಾತ್ರಿ) ಶಿವಮೊಗ್ಗ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ಇದರಿಂದ ಉದ್ರಿಕ್ತಗೊಂಡ  ಹಲವು ಹಿಂದೂಪರ ಸಂಘಟನೆಗಳು ಶವದ ಮೆರವಣಿಗೆ ಸಂದರ್ಭದಲ್ಲಿ ‘ಹರ್ಷ’ ನ ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಬೇಕೆಂದು ಬೈಕ್‌ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿಯ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಹತ್ಯೆಗೆ ಕೋಮು ದ್ವೇಷದ ಬಣ್ಣ ಹಚ್ಚಲಾಗಿದ್ದು ಗೃಹ ಇಲಾಖೆ ಇಲ್ಲಿಯವರೆಗೆ ಹತ್ಯೆಯ ಆರೋಪಿಗಳ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ‘ಹರ್ಷ’ ಭಯೋತ್ಪಾದಕ ಎಂದು ಹೇಳಿರುವ ಟ್ವೀಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

CJ Werleman ಎಂಬ ಟ್ವಿಟರ್ ಅಕೌಂಟ್‌ನಿಂದ ” ನವೆಂಬರ್‌ನಲ್ಲಿ ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧ ಭಯೋತ್ಪಾದಕ ದಾಳಿಯ ಅಲೆಯನ್ನು ನಡೆಸಿದ ಹಿಂದೂ ಉಗ್ರಗಾಮಿ ಗುಂಪು # ಬಜರಂಗದಳಕ್ಕೆ ಸೇರಿದ ಭಯೋತ್ಪಾದಕನನ್ನು ಕರ್ನಾಟಕದಲ್ಲಿ – ನಿನ್ನೆ ರಾತ್ರಿ ಕೊಲ್ಲಲಾಯಿತು.” ಎಂದು ಟ್ವೀಟ್ ಮಾಡಲಾಗಿದೆ. ಹಾಗಾದರೆ ಬರ್ಬರವಾಗಿ ಹತ್ಯೆಗೀಡಾದ  ಬಜರಂಗದಳದ ಕಾರ್ಯಕರ್ತ ನಿಜವಾಗಿಯೂ ಭಯೋತ್ಪಾದಕನೆ? ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್:

ಶಿವಮೊಗ್ಗದಲ್ಲಿ ಅಶಾಂತಿಗೆ ಕಾರಣವಾಗಿರುವ ಬಜರಂಗದಳ ಸದಸ್ಯ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ “ಇಬ್ಬರನ್ನು ಬಂಧಿಸಲಾಗಿದೆ” ಎಂದು ಶಿವಮೊಗ್ಗ ಎಡಿಜಿಪಿ ಎಸ್.ಮುರುಗನ್‌ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಆರೋಪಿಗಳ ಹೆಸರುಗಳನ್ನು ತಿಳಿಸಿಲ್ಲ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಇಬ್ಬರನ್ನು ಬಂಧಿಸಿದ್ದು ಇನ್ನುಳಿದವರನ್ನು ಪತ್ತೆ ಹಚ್ಚಿ ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ, ಶಾಂತಿ ಕಾಪಾಡಲು ಪೊಲೀಸರು ಬೆಳಿಗ್ಗೆಯಿಂದ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಖುದ್ದು ನಾನೇ ರಸ್ತೆಗಳಿದು ಪರಿಶೀಲನೆ ಮಾಡುತ್ತಿದ್ದೇನೆ. ಶಾಂತಿ ಕಾಪಾಡಲು ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ಸಂಘಟನೆಗಳ ಕೈವಾಡ ಏನಾದರೂ ಇದೆಯೇ?” ಎಂದು ಗೃಹ ಸಚಿವರಲ್ಲಿ ಪತ್ರಕರ್ತರು ಕೇಳಿದಾಗ, “ಸಂಘಟನೆಗಳು ಇದರ ಹಿಂದೆ ಇವೆ ಎಂಬ ಯಾವುದೇ ಮಾಹಿತಿ ಇಲ್ಲ. ನಾಲ್ಕೈದು ಜನ ಯುವಕರ ಗುಂಪು ಇದರ ಹಿಂದೆ ಎಂಬ ಮಾಹಿತಿ ನನಗೆ ಸಿಕ್ಕಿದೆ” ಎಂದಿದ್ದಾರೆ.

ಆದರೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಾಗಲಿ ಹತ್ಯೆಗೀಡಾದ  ಬಜರಂಗದಳದ ಸದಸ್ಯ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಸಂಬಂಧ ಯಾವ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಮತ್ತು “ಹತ್ಯೆಗೂ ಹಿಜಾಬ್ ಗದ್ದಲಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಕರ್ನಾಟಕದ ಡಿಜಿಪಿಯವರು ಈ ಕುರಿತು ಪ್ರತಿಕ್ರಿಯಿಸಿ, “ಸಾವಿಗೆ ಯಾವುದೇ ಭಯೋತ್ಪಾದಕ ಕೃತ್ಯ ಕಾರಣವಲ್ಲ, ತ್ರಿಪುರದ ಹಿಂಸಾಚಾರವೂ ಕಾರಣವಲ್ಲ. ವೈರಲ್ ಆಗುತ್ತಿರುವುದು ಸಂಪೂರ್ಣ ಸುಳ್ಳು” ಎಂದು ಟ್ವೀಟ್ ಮಾಡಿದ್ದಾರೆ.

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಜರಂಗದಳದ ಸದಸ್ಯ ಹರ್ಷ ಒಬ್ಬ ಭಯೋತ್ಪಾದಕ ಎಂದು ಹೇಳಲಾಗಿರುವ ಪೋಸ್ಟ್‌ ಗೆ ಯಾವ ಆಧಾರಗಳೂ ಇಲ್ಲ.


ಇದನ್ನು ಓದಿರಿ: Fact check: ಉತ್ತರ ಪ್ರದೇಶ ರಸ್ತೆ ಕುರಿತು ಸುಳ್ಳು ಟ್ವೀಟ್ ಮಾಡಿದ ಸಂಸದ ತೇಜಸ್ವಿ ಸೂರ್ಯ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights