ಫ್ಯಾಕ್ಟ್‌ಚೆಕ್: ಹುಬ್ಬಳ್ಳಿಯಲ್ಲಿ ಹಿಂದೂಗಳ ಮೇಲೆ ಹಲ್ಲೆ ಎಂದು ಬಾಂಗ್ಲಾದೇಶದ ವೀಡಿಯೊ ಹಂಚಿಕೆ

ಮಸೀದಿಯೊಂದರ ಮುಂದೆ ಹಿಂದೂಗಳ ಗುಂಪಿನ ಮೇಲೆ ಐವರು ಮುಸ್ಲಿಮರು ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು ಹುಬ್ಬಳ್ಳಿಯಲ್ಲಿ ಹಿಂದೂಗಳ ಮೇಲೆ ಹಲ್ಲೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ, ಇತ್ತೀಚೆಗೆ ನಡೆದ ಕೆಲವು ಬಾಂಗ್ಲಾದೇಶದ ಸುದ್ದಿ ವಾಹಿನಿಗಳು ವೈರಲ್ ದೃಶ್ಯಗಳನ್ನೆ ಹೋಲುವ ವಿಡಿಯೊಗಳನ್ನು ಪ್ರಕಟಿಸಿರುವುದು ಕಂಡುಬಂದಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಬಾಂಗ್ಲಾದೇಶದ ತೌಹಿದಿ ಜನತಾ ಬೆಂಬಲಿಗರು  ಟ್ರಕ್‌ನಲ್ಲಿ ಡಿಜೆ ಮ್ಯೂಸಿಕ್‌  ಮೂಲಕ ಈದ್ ಆಚರಿಸಿದ್ದಕ್ಕಾಗಿ ಹುಡುಗರ ಗುಂಪನ್ನು ಥಳಿಸುತ್ತಿರುವ ದೃಶ್ಯಗಳು ಎಂದು ಈ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ತೌಹಿದಿ ಜನತಾ ಸದಸ್ಯರು, ಇಸ್ಲಾಂ ಬೆಂಬಲಿಗರ ಗುಂಪು ಈದ್ ಸಮಯದಲ್ಲಿ ಬೇಜವಬ್ದಾರಿ ಮತ್ತು ಸಮುದಾಯಕ್ಕೆ ಕಿರಿಕಿರಿ ಉಂಟುಮಾಡುವ ಆಚರಣೆಗಳನ್ನು ನಡೆಸುತ್ತಿದಾಗ ಅದನ್ನು ತಡೆಯಲು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ. 06 ಮೇ 2022 ರಂದು ಬಾಂಗ್ಲಾದೇಶದ ಮೌಲಾನಾ ನಜ್ರುಲ್ ಇಸ್ಲಾಂ ಸಿರಾಜಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡು, ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಈದ್ ಆಚರಣೆಯ ಸಂದರ್ಭದಲ್ಲಿ ಜೋರಾಗಿ ಡಿಜೆ ಹಾಡುಗಳನ್ನು ನುಡಿಸಿದ್ದಕ್ಕಾಗಿ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡಿದ ಕಾರಣಕ್ಕಾಗಿ ಹಲವು ಯುವಕರನ್ನು ಬಂಧಿಸಿ, ದಂಡ ವಿಧಿಸಲಾಯಿತು ಎಂದು ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಸುದ್ದಿ ವಾಹಿನಿಗಳು ಲೇಖನಗಳನ್ನು ಪ್ರಕಟಿಸಿವೆ ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹುಬ್ಬಳಿಯಲ್ಲಿ ನಡೆದ ಘಟನೆ ಎಂಬುದು ಸುಳ್ಳು

ಅಜಾನ್‌ ವಿಷಯವಾಗಿ ಹುಬ್ಬಳ್ಳಿಯ ಮಸೀದಿ ಮುಂದೆ ಬೊಬ್ಬೆ ಹಾಕಲು ಬಂದ ಹಿಂದುಗಳನ್ನು ಚಡ್ಡಿ ಜಾರಿಸಿ ಓಡಿಸಿದ ಮುಸ್ಲಿಮರು ಎಂಬ ವೀಡಿಯೋ ಕ್ಲಿಪ್‌ ಒಂದನ್ನು ಸಾಮಾಜಿಕ ಜಾಲ ತಾಣಗಳಾದ ಪೇಸ್ಬುಕ್‌, ಟ್ವಿಟ್ಟರ್‌ ಹಾಗೂ ವಾಟ್ಸಪ್‌ಗಳಲ್ಲಿ ಕಿಡಿಗೇಡಿಗಳು ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದುದು ಎಂದು ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ ಚೆಕ್ ತಂಡವು ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.

ಈ ಬಗ್ಗೆ ಪರಿಶೀಲಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ ಚೆಕ್ ತಂಡವು ಈ ಕುರಿತು ಪರಿಶೀಲಿಸಿ ನಿಜವಾದ ಸಂಗತಿಗಳನ್ನು ಏನೆಂದು ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ. ಮೇಲ್ಕಂಡ ಪೊಸ್ಟ್‌ ಹಾಗೂ ವಿಡಿಯೋ ಕರ್ನಾಟಕದ್ದಲ್ಲ ಎಂದು ಹೇಳಿದೆ. ಈ ವೀಡಿಯೊ ಬಾಂಗ್ಲದೇಶದಲ್ಲಿ ಈದ್ ಸಮಯದಲ್ಲಿ ನಡೆಸಿದ ಡಿಜೆ ಮ್ಯೂಸಿಕ್ ನುಡಿಸಿ ಅಸಭ್ಯವಾಗಿ ನಡೆದುಕೊಂಡ ಕೆಲವು ಯುವಕರನ್ನು ಥಳಿಸುತ್ತಿರುವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿರುವುದಾಗಿದೆ ಎಂಬುದು ಪರಿಶೀಲಿಸಿದಾಗ ತಿಳಿದುಬಂದಿರುತ್ತದೆ. ಹುಬ್ಬಳ್ಳಿಯಲ್ಲಿ ಹಾಗು ಕರ್ನಾಟಕದಲ್ಲಿ ಈ ತರಹದ ಯಾವುದೇ ಘಟನೆ ನಡೆದಿರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ  ವಿಡಿಯೋ ಕರ್ನಾಟಕಕ್ಕೆ ಸಂಭಂದಿಸಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿರುತ್ತದೆ ಎಂದು ಪೊಲೀಸ್ ಇಲಾಖೆ ಹೇಳಿದೆ.

ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಬಾಂಗ್ಲಾದೇಶದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಎರಡೂ ಕಡೆಯವರು ಒಂದೇ (ಮುಸ್ಲಿಂ) ಸಮುದಾಯಕ್ಕೆ ಸೇರಿದವರು ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ನಡೆದ ಘಟನೆಯ ವೀಡಿಯೊವನ್ನು, ಮುಸ್ಲಿಮರು ಕರ್ನಾಟಕದ ಹುಬ್ಬಳಿಯಲ್ಲಿ ಮಸೀದಿಯ ಮುಂದೆ ಹಿಂದೂಗಳನ್ನು ಥಳಿಸುವ ದೃಶ್ಯಗಳನ್ನು ಎಂದು ಕೋಮುದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಮೆರಿಕಾದಲ್ಲಿ ಬುರ್ಖಾ, ಹಿಜಾಬ್ ಧರಿಸದ ಯುವತಿಗೆ ಥಳಿಸಲಾಗಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.