ಫ್ಯಾಕ್ಟ್‌ಚೆಕ್ : ಪ್ರಜ್ಞೆ ತಪ್ಪಿಸಿ ಮಗುವನ್ನು ಅಪಹರಿಸಿದ ಬುರ್ಖಾಧಾರಿ ಮಹಿಳೆ ! ವೈರಲ್ ವಿಡಿಯೋದ ಅಸಲಿಯತ್ತೇನು ?

ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ  30 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ವಿಡಿಯೊ ಪ್ರಸಾರವಾಗುತ್ತಿದ್ದು ಬುರ್ಖಾ ಧರಿಸಿರುವ ವ್ಯಕ್ತಿಯೊಬ್ಬರು ಹಾಡುಹಗಲಲ್ಲೆ ಸಾರ್ವಜನಿಕವಾಗಿ ಮಗುವಿನ ಪ್ರಜ್ಞೆ ತಪ್ಪಿಸಿ, ರಿಕ್ಷಾ ಚಾಲಕನ ಸಹಾಯದಿಂದ (ಕೆಂಪು ಅಂಗಿ ಧರಿಸಿ) ಹುಡುಗನನ್ನು ರಿಕ್ಷಾದೊಳಗೆ ಕೂರಿಸುತ್ತಿರುವ ವಿಡಿಯೊ ಎಂದು ತೋರಿಸುತ್ತ, “ನಿಮ್ಮ ಮಗುವನ್ನು ಇಂತಹ ಜನರಿಂದ ರಕ್ಷಿಸಿ” ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ಸುದರ್ಶನ್ ನ್ಯೂಸ್ ವರದಿಗಾರ ಸಂತೋಷ್ ಚೌಹಾಣ್ ಈ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಸುಮಾರು 3.5 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. (ಆರ್ಕೈವ್ ಮಾಡಿದ ಲಿಂಕ್) ಫೇಸ್‌ಬುಕ್ ಬಳಕೆದಾರ ಅಸಿಸ್ ದುಬೆ ಕೂಡ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು 8,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದಾರೆ.

ಈ ವಿಡಿಯೋವನ್ನು ಹಲವಾರು ಬಲಪಂಥೀಯ Facebook ಪುಟಗಳು ಮತ್ತು ವಿವಿಧ Facebook ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆಯ ಹಿನ್ನಲೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.


ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಬಾಲಕನ ಅಪಹರಣದ ವಿಡಿಯೊ ಭಾರತದಲ್ಲ ಎಂದು Alt news ವರದಿ ಮಾಡಿದೆ. ಈಜಿಪ್ಟ್ ಮೂಲದ ಅರೇಬಿಕ್ ನ್ಯೂಸ್ ವೆಬ್ ಪೋರ್ಟಲ್ ಮಾಸ್ರಾವಿಯಿಂದ ಜೂನ್ 28 ರಂದು ಬಿತ್ತರವಾದ ವರದಿಯ ಆಧಾರದಲ್ಲಿ ಇದು ಭಾರತದಲ್ಲಿ ನಡೆದ ಘಟನೆಯಲ್ಲ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ವರದಿಯ ಪ್ರಕಾರ, ನೈಲ್ ನದಿಯ ಪಶ್ಚಿಮ ದಂಡೆಯಲ್ಲಿರುವ ಈಜಿಪ್ಟ್‌ನ ಸೊಹಾಗ್ ನಗರದಲ್ಲಿ ಈ ಘಟನೆ ನಡೆದಿದ್ದು, ಯಾವಾಗ ನಡೆದಿದೆ ಎಂಬುದರ ಬಗ್ಗೆ ಈ ವರದಿ ಉಲ್ಲೇಖಿಸಿಲ್ಲ. ಈ ಘಟನೆಯಲ್ಲಿ ಭಾಗಿಗಳಾಗಿರುವ  ನಾಲ್ಕು ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೀಫ್ರೇಮ್‌ಗಳ ಸಹಾಯದಿಂದ ಸರ್ಚ್ ಮಾಡಿದಾಗ ಘಟನೆಯ ಹೆಚ್ಚಿನ ರೆಸಲ್ಯೂಶನ್ ವೀಡಿಯೊ ಲಭ್ಯವಾಗಿದ್ದು,  ದುಬೈ ಮೂಲದ ಅಲ್ ಅರೇಬಿಯಾ ಯೂಟ್ಯೂಬ್ ಚಾನೆಲ್, ಜೂನ್ 30 ರಂದು ಅದೇ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ವೈರಲ್ ವೀಡಿಯೊದಲ್ಲಿ, ಬುರ್ಖಾ ಧರಿಸಿದ ವ್ಯಕ್ತಿ ಮತ್ತು ರಿಕ್ಷಾ ಚಾಲಕ ಎಂದು ಹೇಳುವ  ಕೆಂಪು ಟಿ-ಶರ್ಟ್‌ನಲ್ಲಿರುವ ವ್ಯಕ್ತಿಯ ವೀಡಿಯೊ ಹೇಳಿಕೆಯ ಪ್ರಕಾರ, ಪ್ರಕರಣದಲ್ಲಿ 4 ಜನರು ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ.

ಈಜಿಪ್ಟ್ ಮೂಲದ ಪತ್ರಕರ್ತ ಹೊಸಮ್ ಎಲ್ಹೆಂಡಿ ಅವರನ್ನು ಸಂಪರ್ಕಿಸಿರುವ ಆಲ್ಟ್ ನ್ಯೂಸ್, ವೈರಲ್ ವಿಡಿಯೋ ಬಗ್ಗೆ ಮಾಹಿತಿ ನೀಡಿರುವ ಅವರು, ಈ ಘಟನೆಯ ದೃಶ್ಯಾವಳಿಗಳನ್ನು ಖಂಡಿತವಾಗಿಯೂ ಈಜಿಪ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. “ಕೆಂಪು ಕಾರಿನ ಪರವಾನಗಿ ಸಂಖ್ಯೆ ಓದಲು ಸಾಧ್ಯವಾಗದಿದ್ದರೂ, ವಿನ್ಯಾಸವು ಈಜಿಪ್ಟ್‌ನಂತೆಯೇ ಇದೆ” ಎಂದು ಅವರು ಹೇಳಿದರು. ಎಲ್ಹೆಂಡಿ ಅವರು ಈಜಿಪ್ಟ್‌ನ ವಿವಿಧ ಕಾರು ನೋಂದಣಿ ಫಲಕಗಳನ್ನು ತೋರಿಸುವ YouTube ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಎಲ್ಹೆಂಡಿಯವರು ಬುರ್ಖಾ ಧರಿಸಿದ ವ್ಯಕ್ತಿಯ ಹೇಳಿಕೆಯನ್ನು ಅನುವಾದ ಮಾಡಿದ್ದು “ನನ್ನ ಹೆಸರು ಖಲಾಫ್ ಅಬ್ದೆಲ್ ರಹೀಮ್ ಅಬ್ದೆಲ್ ಅಲ್. ನಾನು ಗೆರ್ಗಾ ನಗರದಲ್ಲಿ ವಾಸಿಸುತ್ತಿದ್ದೇನೆ [ದಕ್ಷಿಣ ಈಜಿಪ್ಟ್‌ನ ಸೊಹಾಗ್ ಗವರ್ನರೇಟ್]. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಳಿ ಎರಡು ಖಾತೆಗಳಿವೆ. ನಾನು ಮಾದಕ ದ್ರವ್ಯ ಸೇವಿಸಿದ ನಂತರ ಹುಡುಗನನ್ನು ಅಪಹರಿಸುತ್ತಿರುವುದನ್ನು ತೋರಿಸುವ ಒಂದು ಹಂತದ ವೀಡಿಯೊವನ್ನು ಮಾಡಿದ್ದೇನೆ. ನಾನು ಮಹಿಳೆಯರ ಉಡುಪುಗಳನ್ನು ಧರಿಸಿದ್ದೆ ಮತ್ತು ನನ್ನ ಮುಖವನ್ನು ಮುಚ್ಚಿದ್ದೆ. ರಿಕ್ಷಾ ಚಾಲಕನಂತೆ ಕಾಣುವ ವ್ಯಕ್ತಿ ಅಲಿ ನನ್ನ ಸಹೋದರ ಮತ್ತು ಅಹ್ಮದ್ ಅಬ್ಬಾಸ್ ಮತ್ತು ಹುಸೇನ್ ವೀಡಿಯೊ ತುಣುಕನ್ನು ಚಿತ್ರೀಕರಿಸಿದರು. ನಾನು ಫೇಸ್‌ಬುಕ್‌ನಿಂದ ಹಣ ಸಂಪಾದಿಸಲು ವೀಡಿಯೊ ವೈರಲ್ ಆಗಬೇಕೆಂದು ನಾನು ಬಯಸಿದ್ದರಿಂದ ನಾನು ಇದನ್ನು ಮಾಡಿದ್ದೇನೆ. ಇದು ನಿಜವಾದ ಅಪಹರಣ ಅಲ್ಲ ಎಂದು ಹೇಳಿದ್ದಾನೆ.

ಒಟ್ಟಾರೆಯಾಗಿ ಹೇಳುವುದಾದರೆ, ಈಜಿಪ್ಟ್‌ನಲ್ಲಿ ಮಗುವಿನ ಅಪಹರಣದ ದೃಶ್ಯಾವಳಿಯ ವೀಡಿಯೊವನ್ನು, ಭಾರತದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಶೀರ್ಷಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.  ಈ ವಿಡಿಯೋವನ್ನು ರಚಿಸಿದ್ದಕ್ಕಾಗಿ ಈಜಿಪ್ಟ್‌ನ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಾವಿಗೆ ರೆಕ್ಕೆ ಇದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights