ಫ್ಯಾಕ್ಟ್‌ಚೆಕ್ : ಮೋದಿ ಭಾ‍ಷಣದ ಹಳೆಯ ಫೋಟೋವನ್ನು ಮಂಗಳೂರಿನ ಕಾರ್ಯಕ್ರಮದ ಫೋಟೋ ಎಂದು ತಪ್ಪಾಗಿ ಹಂಚಿಕೊಂಡ BJP ನಾಯಕರು

ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಸಮೂಹದತ್ತ ಕೈಬೀಸುತ್ತಿರುವ 30 ಸೆಕೆಂಡುಗಳ ಕ್ಲಿಪ್ಅನ್ನು BJP ನಾಯಕರಾದ ಅಮಿತ್ ಮಾಳವಿಯಾ ಮತ್ತು ಪ್ರೀತಿ ಗಾಂಧಿ ಸೇರಿದಂತೆ ಬಿಜೆಪಿಯ ರಾಜಕಾರಣಿಗಳು ಹಂಚಿಕೊಳ್ಳುತ್ತಿದ್ದಾರೆ.

ಈ ವೀಡಿಯೊ ಕಚ್‌ನಲ್ಲಿ ನಡೆದ ಕಾರ್ಯಕ್ರಮದೆಂದು ಎಂದು ಪ್ರತಿಪಾದಿಸಿದರೆ ಮತ್ತೆ ಕೆಲವರು ಇದು ಮಂಗಳೂರಿನದ್ದು ಎಂದು ಟ್ವೀಟ್ ಮಾಡಿದ್ದಾರೆ.

2022ರ ಆಗಸ್ಟ್ 28ರಂದು ನರ್ಮದಾ ಕಾಲುವೆಯನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿಯವರು ಕಚ್ ಜಿಲ್ಲೆಯ ಭುಜ್‌ನಲ್ಲಿ ರೋಡ್‌ಶೋ ನಡೆಸಿದರು. ಸೆಪ್ಟೆಂಬರ್ 2ರಂದು ಮಂಗಳೂರಿಗೆ ಭೇಟಿ ನೀಡಿದ ಅವರು ₹ 3,800 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.

ಅಮಿತ್ ಮಾಳವಿಯಾ ಸೆಪ್ಟೆಂಬರ್ 2ರಂದು ಟ್ವೀಟ್ ಮಾಡಿದ್ದು #Mangaluru ಹ್ಯಾಶ್‌ಟ್ಯಾಗ್‌ ಬಳಸಿದ್ದಾರೆ. ಈ ವೀಡಿಯೊ ಮಂಗಳೂರಿನದ್ದು ಎಂದು ಪ್ರತಿಪಾದಿಸಿದ್ದಾರೆ. ಬಳಿಕ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ. (ಟ್ವೀಟ್‌ನ ಆರ್ಕೈವ್ ಲಿಂಕ್)

ಆಂಧ್ರಪ್ರದೇಶದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದು, ಇದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೆಂದು ಪ್ರತಿಪಾದಿಸಿದ್ದಾರೆ (ಆರ್ಕೈವ್ ಲಿಂಕ್).

ಇದೇ ವಿಡಿಯೋವನ್ನು ಸ್ಥಳೀಯ ಪತ್ರಕರ್ತ ಸೂರಜ್ ಸುರೇಶ್ ಹಂಚಿಕೊಂಡಿದ್ದು, “ಇಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ಹೀಗೆ ಸ್ವಾಗತಿಸಲಾಯಿತು” ಎಂದು ಬರೆದುಕೊಂಡಿದ್ದಾರೆ (ಆರ್ಕೈವ್ ಲಿಂಕ್).

ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಅವರು ಇದೇ ವೀಡಿಯೋವನ್ನು ಆಗಸ್ಟ್ 28ರಂದು ಹಂಚಿಕೊಂಡಿದ್ದು, ಭುಜ್ ರೋಡ್‌ಶೋ ವಿಡಿಯೊವೆಂದು ಟ್ವೀಟ್ ಮಾಡಿದ್ದರು. “ಇದು ಕಚ್‌ನ ಜನರು ಇಂದು ನಮ್ಮ ಗೌರವಾನ್ವಿತ ಪ್ರಧಾನಿ ಅವರಿಗೆ ನೀಡಿದ ರೋಚಕ ಸ್ವಾಗತವಿದು. ಊಹೆಗೂ ನಿಲುಕದ ಉತ್ಸಾಹ” ಎಂದು ಅವರು ಬರೆದುಕೊಂಡಿದ್ದಾರೆ (ಆರ್ಕೈವ್ ಲಿಂಕ್).

ವಾಸ್ತವವೇನು?

ರಿವರ್ಸ್ ಇಮೇಜ್ ಸರ್ಚ್ ಮತ್ತು ಕೀವರ್ಡ್ ಮೂಲಕ ‘ಆಲ್ಟ್‌ ನ್ಯೂಸ್’ ಹುಡುಕಾಟ ನಡೆಸಿದೆ. ಇದೇ ವಿಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್‍ಯಾಲಿಯ ನಂತರ 2019ರ ಏಪ್ರಿಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ಕುತೂಹಲಕಾರಿ ಅಂಶವೆಂದರೆ, 2019ರಲ್ಲಿ ಕೋಲ್ಕತ್ತಾದಲ್ಲಿ ನಡೆದ ರ್‍ಯಾಲಿಯ ನಂತರ ಪ್ರೀತಿ ಗಾಂಧಿ ಮತ್ತು ಅಮಿತ್ ಮಾಳವಿಯಾ ಇಬ್ಬರೂ ಇದೇ ವೀಡಿಯೊವನ್ನು ಟ್ವೀಟ್ ಮಾಡಿದ್ದರು. (ಆರ್ಕೈವ್ ಮಾಡಿದ ಲಿಂಕ್‌ಗಳು- 1, 2)

ಏಪ್ರಿಲ್ 3, 2019ರಂದು ಬಿಜೆಪಿಯ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಕೊಲ್ಕತ್ತಾದಲ್ಲಿ ನಡೆದ ಪ್ರಧಾನಿ ಕಾರ್ಯಕ್ರಮವೆಂದು ಬಿಜೆಪಿ ಟ್ವೀಟ್ ಮಾಡಿತ್ತು. (ಆರ್ಕೈವ್ ಲಿಂಕ್‌)

ಪಿಎಂ ಮೋದಿ ಅವರ ಅಧಿಕೃತ ಹ್ಯಾಂಡಲ್‌ನಲ್ಲೂ ಇದೇ ವಿಡಿಯೊವನ್ನು, ಏಪ್ರಿಲ್ 3, 2019ರಂದು ಟ್ವೀಟ್ ಮಾಡಲಾಗಿತ್ತು. ಈ ವೀಡಿಯೊ ಕೊಲ್ಕತ್ತಾದೆಂದು ತಿಳಿಸಲಾಗಿತ್ತು (ಆರ್ಕೈವ್ ಮಾಡಿದ ಲಿಂಕ್).

2019 ಹಾಗೂ 2022ರ ವಿಡಿಯೊವನ್ನು ಈ ಕೆಳಗೆ ತುಲನೆ ಮಾಡಲಾಗಿದೆ ನೋಡಿ. ಎರಡು ಕೂಡ ಒಂದೇ ಎಂಬುದು ಎದ್ದು ಕಾಣುತ್ತಿದೆ.

PC: Alt News

ಕೋಲ್ಕತ್ತಾದ ರ್‍ಯಾಲಿಯ ವಿಡಿಯೋವನ್ನು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲೂ ಅಪ್ಲೋಡ್ ಮಾಡಲಾಗಿದೆ. ಜನರು ‘ಮೋದಿ ಮೋದಿ’ ಎಂದು ಕೂಗುತ್ತಿರುವುದನ್ನು ವೀಡಿಯೊದ 3:36ನೇ ನಿಮಿಷದಲ್ಲಿ ನೋಡಬಹುದು. ಮೋದಿ ಜನಸಮೂಹದತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು.

 

ಹಾಗಾಗಿ ಕೋಲ್ಕತ್ತಾದ ಬಿಜೆಪಿ ರ್‍ಯಾಲಿಯ ಹಳೆಯ ವೀಡಿಯೊವನ್ನು ಅಮಿತ್ ಮಾಳವಿಯಾ ಮತ್ತು ಪ್ರೀತಿ ಗಾಂಧಿ ಸೇರಿದಂತೆ ಬಿಜೆಪಿಯ ರಾಜಕಾರಣಿಗಳು ಇತ್ತೀಚೆಗೆ ಹಂಚಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕೆಲವರು ಈ ವಿಡಿಯೋವನ್ನು ಕಚ್‌ನ ಕಾರ್ಯಕ್ರಮದೆಂದು ಹೇಳಿಕೊಂಡರೆ, ಇನ್ನು ಕೆಲವರು ಮಂಗಳೂರಿನ ವಿಡಿಯೋ ಎಂದು ಶೇರ್ ಮಾಡಿದ್ದಾರೆ. 2019ರಲ್ಲಿ ಕೋಲ್ಕತ್ತಾ ರ್‍ಯಾಲಿಯ ನಂತರ ಮಾಳವಿಯಾ ಮತ್ತು ಪ್ರೀತಿ ಗಾಂಧಿ ಇಬ್ಬರೂ ಒಂದೇ ವೀಡಿಯೊವನ್ನು ಹಂಚಿಕೊಂಡಿದ್ದರು.

(ಕೃಪೆ: ಆಲ್ಟ್‌ನ್ಯೂಸ್‌)

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಜೀವಂತವಾಗಿರುವ BSF ಸೈನಿಕನನ್ನು’ ಹುತಾತ್ಮ’ ಎಂದು ಸುಳ್ಳು ಸುದ್ದಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights