ಫ್ಯಾಕ್ಟ್‌ಚೆಕ್: ಬ್ರೆಜಿಲ್‌ನಲ್ಲಿ ನಡೆದ ಹತ್ಯೆಯನ್ನು ‘ಮುಸ್ಲಿಮರಿಂದ ಹಿಂದೂ ಯುವತಿಯ ಅತ್ಯಾಚಾರ ಮತ್ತು ಹತ್ಯೆ’ ಎಂದು ತಪ್ಪಾಗಿ ಹಂಚಿಕೆ

ಕೆಲವು ಪುರುಷರು ಸೇರಿ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ತಲೆ ಕತ್ತರಿಸುವ ಭಯಾನಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ ಈ ಘಟನೆ ಕೇರಳದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಮುಸ್ಲಿಮರು ಕೇರಳದಲ್ಲಿ ಹಿಂದೂ ಯುವತಿಯರನ್ನು ನಂಬಿಸಿ ಅತ್ಯಾಚಾರ ನಡೆಸಿ ಹೇಗೆ ಕೊಲೆ ಮಾಡುತ್ತಿದ್ದಾರೆ ನೋಡಿ” ಎಂದು ಹೇಳಿಕೊಂಡು ಇದು “ಲವ್ ಜಿಹಾದ್” ಪ್ರಕರಣ ಎಂದು ಹಂಚಿಕೊಳ್ಳಲಾಗಿದೆ.

ಅತೀ ಕ್ರೂರವಾಗಿ ಮಹಿಳೆಯ ಶಿರಚ್ಛೇಧನ ಮಾಡುವ ವಿಡಿಯೋವನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ವಾಟ್ಸಾಪ್‌ ಗೆ ಹಲವಾರು ವಿನಂತಿಗಳು ಬಂದಿವೆ. ಹಾಗಾಗಿ ವೈರಲ್ ವಿಡಿಯೋದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

2019 ರಿಂದ ಇದೇ ವಿಡಿಯೋ ಹಂಚಿಕೆ :

ವೈರಲ್ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ನಡೆಸಿದಾಗ ಇದೇ ವಿಡಿಯೊ 2019ರಿಂದಲೂ  ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ ಎಂದು Alt news ಕಂಡುಹಿಡಿದಿದೆ. 2019 ರಲ್ಲಿ, ಈ ವೀಡಿಯೊದೊಂದಿಗೆ ಹಂಚಿಕೊಳ್ಳಲಾದ ಶೀರ್ಷಿಕೆಯಲ್ಲಿ ಹತ್ಯೆಗೀಡಾದ ಹುಡುಗಿ ಹಿಂದೂ ಮತ್ತು ಅಪರಾಧಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿತ್ತು. ಆಗ ಈ ವಿಡಿಯೊವನ್ನು ರಾಜಸ್ಥಾನದ ಘಟನೆ ಎಂದು ಬಣ್ಣಿಸಲಾಗಿತ್ತು.

“ರಾಜಸ್ಥಾನದ ಹಿಂದೂ ಹುಡುಗಿಯನ್ನು ಕೆಲವು ಮುಸ್ಲಿಂ ಹುಡುಗರು ಮನೆಯಲ್ಲಿ ಅತ್ಯಾಚಾರ ಮಾಡಿದ ನಂತರ ಬರ್ಬರವಾಗಿ ಹತ್ಯೆ ಮಾಡಿದ್ದಾರೆ, ಆದರೆ ರಾಜಸ್ಥಾನದ ಪೋಲೀಸರು ಏನೂ ಕ್ರಮ ತೆಗೆದುಕೊಳ್ಳುತ್ತಿಲ್ಲ, ಏಕೆಂದರೆ ಆ ಹುಡುಗರು ಮುಸ್ಲಿಮರು, ಅವರು ವಾಸಿಸುವ ಜಾಗದಲ್ಲಿ ಮುಸ್ಲಿಂ ಪ್ರಾಬಲ್ಯ ಇರುವುದರಿಂದ ಕೊಲೆ ಪಾತಕಿಗಳು ಕ್ಷೇಮವಾಗಿದ್ದಾರೆ. “ಬೇಟಿ ಬಚಾವೋ, ಬೇಟಿ ಪಡಾವೊ” ಎನ್ನುವವರು ಇದನ್ನು ನೋಡಲಿ, ಅವರಿಗೆ ತಲುಪುವವರೆಗೂ ಇದನ್ನು ಶೇರ್ ಮಾಡಿ, “ಈ ಜಾಗದಲ್ಲಿ ನಾಳೆ ನಿಮ್ಮ ಅಕ್ಕ ಅಥವಾ ತಂಗಿ ಇರಬಹದು ಆಗ ಏನು ಮಾಡುತ್ತೀರಿ, ನೀವೂ ಕೈಜೋಡಿಸಿ ಇವರನ್ನು ಸುಮ್ಮನೆ ಬಿಡಬಾರದು”. ಎಂದು ವೈರಲ್ ಮಾಡಲಾಗಿತ್ತು.

ಫ್ಯಾಕ್ಟ್‌ಚೆಕ್ : 

ಹಿಂದೊಮ್ಮೆ 2018 ಮಾರ್ಚ್ ಆರಂಭದಲ್ಲಿ ಮಲೇಷ್ಯಾದಲ್ಲಿ ಈ ವೀಡಿಯೊ ವೈರಲ್ ಆಗಿತ್ತು,  ಆಗ ಈ ವಿಡಿಯೊದಲ್ಲಿರುವ ಘಟನೆಯನ್ನು ಮಲೇಷ್ಯಾದ ಶ್ರೀ ಅಮನ್‌ನಲ್ಲಿ ನಡೆದ ಕೊಲೆಗೆ ಸಂಬಂಧಿಸಿದೆ ಎಂದು ಹೇಳಲಾಗಿತ್ತು, ಆದರೆ ಮಲೇ‍ಷ್ಯಾದ ಪೊಲೀಸರು ಈ ಹತ್ಯೆಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ ಎಂದು ಬಣ್ಣಿಸಿದ್ದರು Alt news ವರದಿ ಮಾಡಿತ್ತು.

ವೈರಲ್ ವಿಡಿಯೋದ ಘಟನೆ ಬ್ರೆಜಿಲ್‌ನದ್ದು :

ಈ ಹತ್ಯೆಯ ಬಗ್ಗೆ ಪರಿಶೀಲನೆ ನಡೆಸಿರುವ Alt news ಈ ಘಟನೆಯು ದಕ್ಷಿಣ ಅಮೆರಿಕಾದ, ಬ್ರೆಜಿಲ್‌ನಲ್ಲಿ ಸಂಭವಿಸಿದೆ ಎಂದು ಫ್ಯಾಕ್ಟ್‌ಚೆಕ್  ವರದಿಯನ್ನು ಪ್ರಕಟಿಸಿದೆ. ಡೆಬೊರಾ ಬೆಸ್ಸಾ ಎಂಬ 19 ವರ್ಷದ ಬ್ರೆಜಿಲಿಯನ್ ಹುಡುಗಿಯನ್ನು ಡ್ರಗ್ ಗ್ಯಾಂಗ್  ನ ಸದಸ್ಯ ಆರೋಪಿ ಆಂಡ್ರೆ ಡಿ ಸೋಜಾ ಅಪಹರಿಸಿ ಕೊಂದಿದ್ದಾನೆ.  ಡೆಬೊರಾ ಪ್ರತಿಸ್ಪರ್ಧಿ ಗ್ಯಾಂಗ್‌ನ ಸದಸ್ಯರಾಗಿದ್ದರು ಮತ್ತು ಆ ಡ್ರಗ್  ಗ್ಯಾಂಗ್  ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದು ಬ್ರೆಜಿಲ್ ರಾಜ್ಯದ ಅಕ್ರೆ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ಎಮಿಲ್ಸನ್ ಫರಿಯಾಸ್ ಹೇಳಿದ್ದಾರೆ.

ಬ್ರೆಜಿಲ್‌ನ ಸುದ್ದಿ ಪೋರ್ಟಲ್ G 1 ಪ್ರಕಾರ, “ಸಂತ್ರಸ್ತೆಯ 21 ವರ್ಷದ ಸಹೋದರಿ ಸಾರಾ ಫ್ರೀಟಾಸ್ ಬಿಸ್ಸಾ ಮತ್ತು ಅವರ ಸಂಬಂಧಿಕರು ಡೆಬೊರಾ ಬೆಸ್ಸಾ ಅವರು ಕಾಣೆಯಾಗಿದ್ದಾರೆ ಎಂದು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ ಕೊನೆಗೆ ಆಕೆ ಶವವಾಗಿ ಪತ್ತೆಯಾಗಿದ್ದಳು”, ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಹತ್ಯೆಯ ಘಟನೆಯ ಹಳೆಯ ವೀಡಿಯೊವನ್ನು, 2019 ರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆ ಎಂದು ಹಿಂದೂ-ಮುಸ್ಲಿಂ ಎನ್ನುವ  ಕೋಮುವಾದ ಹಿನ್ನಲೆಯನ್ನು ನೀಡಲಾಗಿತ್ತು. ಮತ್ತೀಗ 3 ವರ್ಷಗಳ ನಂತರ ಮತ್ತೆ ಕೇರಳದಲ್ಲಿ ‘ಲವ್-ಜಿಹಾದ್’ ಘಟನೆ ಎಂದು ಕೋಮು ವೈಷಮ್ಯದ ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳು ಕೋಮು ವೈಷಮ್ಯಕ್ಕೆ ಕಾರಣವಾಗುತ್ತವೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಾಧು ವೇಷದಲ್ಲಿದ್ದ ಇವರು ಮಕ್ಕಳ ಕಳ್ಳರಲ್ಲ, ಚಿನ್ನ ಕಳ್ಳರು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights